ADVERTISEMENT

ENG vs PAK ಟೆಸ್ಟ್‌ ಕ್ರಿಕೆಟ್‌ | ರೂಟ್‌, ಬ್ರೂಕ್‌ ಅಜೇಯ ಶತಕ

ಇಂಗ್ಲೆಂಡ್‌ ಪರ ಟೆಸ್ಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ರೂಟ್

ರಾಯಿಟರ್ಸ್
Published 9 ಅಕ್ಟೋಬರ್ 2024, 14:44 IST
Last Updated 9 ಅಕ್ಟೋಬರ್ 2024, 14:44 IST
<div class="paragraphs"><p>ಜೋ ರೂಟ್ </p></div>

ಜೋ ರೂಟ್

   

ಮುಲ್ತಾನ್: ಜೋ ರೂಟ್‌ ಅತ್ಯಾಕರ್ಷಕ ಅಜೇಯ ಶತಕ ಬಾರಿಸಿದರು. ಆ ಹಾದಿಯಲ್ಲಿ ಇಂಗ್ಲೆಂಡ್‌ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ ಗಳಿಸಿದ ಗೌರವಕ್ಕೂ ಪಾತ್ರರಾದರು. ಮೊದಲ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡದ 556 ರನ್‌ಗಳ ದೊಡ್ಡ ಮೊತ್ತಕ್ಕೆ ತಕ್ಕ ಉತ್ತರ ನೀಡಿರುವ ಇಂಗ್ಲೆಂಡ್ 3 ವಿಕೆಟ್‌ಗೆ 492 ರನ್ ಗಳಿಸಿದೆ.

ಅಜೇಯ 32 ರನ್‌ಗಳೊಡನೆ ಮೂರನೇ ದಿನದಾಟ (ಇಂಗ್ಲೆಂಡ್‌: 96ಕ್ಕೆ1) ಮುಂದುವರಿಸಿದ ರೂಟ್ 176 ರನ್ (277ಎಸೆತ, 4X12) ಗಳಿಸಿ ಆಟ ಕಾದಿರಿಸಿದ್ದಾರೆ. ಆಟ ಆರಂಭವಾದಾಗ ಅವರು ಇಂಗ್ಲೆಂಡ್‌ನ ಯಶಸ್ವಿ ಟೆಸ್ಟ್ ಬ್ಯಾಟರ್ ಆಲಿಸ್ಟರ್ ಕುಕ್ (12,472) ಅವರಿಗಿಂತ 39 ರನ್ ಹಿಂದೆಯಿದ್ದರು. ಆಮೆರ್ ಜಮಾಲ್ ಬೌಲಿಂಗ್‌ನಲ್ಲಿ ಆನ್‌ಡ್ರೈವ್ ಬೌಂಡರಿ ಮೂಲಕ ಅವರು ಮೈಲಿಗಲ್ಲು ದಾಟಿದರು. ‌

ADVERTISEMENT

ಯಾರ್ಕ್‌ಶೈರ್‌ನ 33 ವರ್ಷ ವಯಸ್ಸಿನ ಆಟಗಾರನಿಗೆ ಇದು ಟೆಸ್ಟ್‌ಗಳಲ್ಲಿ 35ನೇ ಶತಕ. ಇದೇ ಕೌಂಟಿ ತಂಡಕ್ಕೆ ಆಡುವ ಹ್ಯಾರಿ ಬ್ರೂಕ್ 141 ರನ್ (173ಎ, 4X12, 6X1) ಗಳಿಸಿ ಅಜೇಯರಾಗುಳಿದಿದ್ದಾರೆ. ರೂಟ್‌– ಬ್ರೂಕ್‌ ಮುರಿಯದ ನಾಲ್ಕನೇ ವಿಕೆಟ್‌ಗೆ 243 ರನ್ ಸೇರಿಸಿ, ನಿರ್ಜೀವ ಪಿಚ್‌ನಲ್ಲಿ ಪಾಕ್ ಬೌಲರ್‌ಗಳ ಬೆವರಿಳಿಸಿದರು. ಬ್ರೂಕ್‌ ಅವರಿಗೆ ಇದು ಟೆಸ್ಟ್‌ಗಳಲ್ಲಿ ಆರನೇ ಶತಕ.

ಇದಕ್ಕೆ ಮೊದಲು ಬೆನ್ ಡಕೆಟ್‌ ಮಿಂಚಿನ ಆಟವಾಡಿ 84 ರನ್ (75 ಎಸೆತ, 4X11) ರನ್ ಗಳಿಸಿದರು. ಇಂಗ್ಲೆಂಡ್ ತಂಡ, ಪಾಕ್ ಮೊದಲ ಇನಿಂಗ್ಸ್ ಮೊತ್ತ ದಾಟಲು 64 ರನ್ ಮಾತ್ರ ಗಳಿಸಬೇಕಾಗಿದೆ.

ಐದನೇ ಸ್ಥಾನಕ್ಕೆ:

ರೂಟ್‌ ಈಗ ಟೆಸ್ಟ್‌ ಕ್ರಿಕೆಟ್‌ನ ಸರ್ವಾಧಿಕ ರನ್ ಗಳಿಕೆದಾರರಲ್ಲಿ ಐದನೇ ಸ್ಥಾನಕ್ಕೇರಿದ್ದಾರೆ. ಸಚಿನ್ ತೆಂಡೂಲ್ಕರ್‌ (15,921) , ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ (13,378) , ದಕ್ಷಿಣ ಆಫ್ರಿಕಾದ ಜಾಕ್‌ ಕಾಲಿಸ್‌ (13,289) ಮತ್ತು ರಾಹುಲ್ ದ್ರಾವಿಡ್ (13,288) ಕ್ರಮವಾಗಿ ಮೊದಲ ನಾಲ್ಕು ಸ್ಥಾನದಲ್ಲಿದ್ದಾರೆ.

ಸ್ಕೋರುಗಳು: ಮೊದಲ ಇನಿಂಗ್ಸ್‌: ಪಾಕಿಸ್ತಾನ: 556; ಇಂಗ್ಲೆಂಡ್‌: 101 ಓವರುಗಳಲ್ಲಿ 3 ವಿಕೆಟ್‌ಗೆ 492 (ಜಾಕ್ ಕ್ರಾಲಿ 78, ಜೋ ರೂಟ್‌ ಔಟಾಗದೇ 176, ಬೆನ್ ಡಕೆಟ್‌ 84, ಹ್ಯಾರಿ ಬ್ರೂಕ್ ಔಟಾಗದೇ 141).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.