ADVERTISEMENT

ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್: ದ.ಆಫ್ರಿಕಾವನ್ನು ವೈಟ್‌ವಾಶ್ ಮಾಡಿದ ಯಂಗ್ ಇಂಡಿಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜನವರಿ 2026, 15:52 IST
Last Updated 7 ಜನವರಿ 2026, 15:52 IST
   

ಬೆನೋನಿ: ಇಲ್ಲಿನ ವಿಲ್ಲೋಮೂರ್ ಪಾರ್ಕ್‌ನಲ್ಲಿ ನಡೆದ 19 ವರ್ಷದೊಳಗಿನವರ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು ಭಾರತ ತಂಡ 233 ರನ್‌ಗಳ ಭಾರೀ ಅಂತರದ ಗೆಲುವು ಸಾಧಿಸಿದೆ.

ಈ ಗೆಲುವಿನೊಂದಿಗೆ ವೈಭವ್ ಸೂರ್ಯವಂಶಿ ನಾಯಕತ್ವದ ಟೀಂ ಇಂಡಿಯಾ 3 ಪಂದ್ಯಗಳ ಏಕದಿನ ಸರಣಿಯನ್ನು 3–0 ಅಂತರದಲ್ಲಿ ವೈಟ್‌ವಾಶ್ ಮಾಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಉತ್ತಮ ಆರಂಭ ದೊರಕಿತು.

ಆರಂಭಿಕರಾದ ಆ್ಯರೋನ್ ಜಾರ್ಜ್ (118 ರನ್, 106 ಎ, 4X16) ಹಾಗೂ ನಾಯಕ ವೈಭವ್ ಸೂರ್ಯವಂಶಿ (127 ರನ್, 74 ಎ, 6X10, 4X9) ಸ್ಫೋಟಕ ಶತಕ ಸಿಡಿಸಿ ಮಿಂಚಿದರು. ಆ ಮೂಲಕ ಈ ಯುವ ಜೋಡಿ ಮೊದಲ ವಿಕೆಟ್‌ಗೆ 154 ಎಸೆತಗಳಲ್ಲಿ 227ರನ್‌ಗಳ ಜೊತೆಯಾಟ ಆಡಿದರು.

ADVERTISEMENT

ಮಧ್ಯಮ ಕ್ರಮಾಂಕದಲ್ಲಿ ವೇದಾಂತ್ ತ್ರಿವೇದಿ (34 ರನ್), ಕೆಳ ಕ್ರಮಾಂಕದಲ್ಲಿ ಮೊಹಮದ್ ಎನಾನ್ (28 ರನ್) ಕಲೆಹಾಕುವ ಮೂಲಕ ತಂಡದ ಮೊತ್ತವನ್ನು 393ಕ್ಕೆ ತಲುಪುವಂತೆ ನೋಡಿಕೊಂಡರು.

ದಕ್ಷಿಣ ಆಫ್ರಿಕಾ ಪರ, ಎನ್‌ಟಾಂಡೊ ಸೋನಿ 3, ಜೇಸನ್ ರಾಲೆಸ್ 2 ಹಾಗೂ ಮಿಚೆಲ್ ಕೃಯುಸ್‌ಕಂಪ್ 1 ವಿಕೆಟ್ ಪಡೆದುಕೊಂಡರು.

394 ರನ್‌ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ದಕ್ಷಿಣ ಆಫ್ರಿಕಾದ ಯಾವುದೇ ಬ್ಯಾಟರ್ ಕೂಡ ದೊಡ್ಡ ಮೊತ್ತ ಕಲೆಹಾಕಲಿಲ್ಲ. ಪರಿಣಾಮ 35 ಓವರ್‌ಗಳಲ್ಲಿ 160 ರನ್‌ಗಳಿ ಆಲೌಟ್ ಆಗುವ ಮೂಲಕ 233 ರನ್‌ಗಳ ಬೃಹತ್ ಅಂತರದ ಸೋಲು ಅನುಭವಿಸಿತು.

ಭಾರತದ ಪರ ಕಿಶನ್ ಕುಮಾರ್ ಸಿಂಗ್ 3, ಮೊಹಮದ್ ಎನಾನ್ 2 ವಿಕೆಟ್ ಪಡೆದುಕೊಂಡರು.