ADVERTISEMENT

ದೇಶಿ ಕ್ರಿಕೆಟ್‌ ಬೌಲಿಂಗ್ ಮೊನಚುಗೊಳಿಸಿದೆ: ವರುಣ್‌

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 20:15 IST
Last Updated 26 ಏಪ್ರಿಲ್ 2019, 20:15 IST
ಶುಭಮನ್ ಗಿಲ್ ವಿಕೆಟ್ ಪಡೆದ ವರುಣ್ ಆ್ಯರನ್‌ ಸಂಭ್ರಮಿಸಿ ರೀತಿ –ಪಿಟಿಐ ಚಿತ್ರ
ಶುಭಮನ್ ಗಿಲ್ ವಿಕೆಟ್ ಪಡೆದ ವರುಣ್ ಆ್ಯರನ್‌ ಸಂಭ್ರಮಿಸಿ ರೀತಿ –ಪಿಟಿಐ ಚಿತ್ರ   

ಕೋಲ್ಕತ್ತ :ಕೌಂಟಿ ಕ್ರಿಕೆಟ್‌ನಲ್ಲಿ ಪಡೆದ ಅನುಭವ ಸ್ವಿಂಗ್ ಬೌಲಿಂಗ್‌ಗೆ ಮೊನಚು ತುಂಬಿದೆ ಎಂದು ರಾಜಸ್ಥಾನ್ ರಾಯಲ್ಸ್ ತಂಡದ ಮಧ್ಯಮ ವೇಗಿ ವರುಣ್ ಆ್ಯರನ್ ತಿಳಿಸಿದರು. ಗುರುವಾರ ರಾತ್ರಿ ಆತಿಥೇಯ ಕೋಲ್ಕತ್ತ ನೈಟ್‌ ರೈಡರ್ಸ್ ಎದುರಿನ ಪಂದ್ಯದಲ್ಲಿ ವರುಣ್‌ ಮೂರು ಓವರ್‌ಗಳಲ್ಲಿ 10 ರನ್ ನೀಡಿ ಎರಡು ವಿಕೆಟ್ ಕಬಳಿಸಿದ್ದರು.

ಹೊಸ ಚೆಂಡಿನಲ್ಲಿ ದಾಳಿ ನಡೆಸಿದ ಅವರು ಆರಂಭಿಕರಾದ ಕ್ರಿಸ್ ಲಿನ್ (0) ಮತ್ತು ಶುಭಮನ್ ಗಿಲ್‌ (14) ಅವರ ವಿಕೆಟ್ ಉರುಳಿಸಿದ್ದರು. ಇಬ್ಬರೂ ಅವರ ಇನ್‌ಸ್ವಿಂಗ್‌ ಅಸ್ತ್ರಕ್ಕೆ ಬಲಿಯಾಗಿದ್ದರು.

ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್‌ ಮೂರು ವಿಕೆಟ್‌ಗಳ ರೋಚಕ ಜಯ ಸಾಧಿಸಿತ್ತು. ನೈಟ್‌ ರೈಡರ್ಸ್‌ ಆರು ವಿಕೆಟ್‌ಗಳಿಗೆ 175 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ ರಾಯಲ್ಸ್‌ ನಿರಂತರ ವಿಕೆಟ್ ಕಳೆದುಕೊಂಡಿತ್ತು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ರಿಯಾನ್ ಪರಾಗ್‌ (47; 31 ಎಸೆತ, 2 ಸಿಕ್ಸರ್‌, 5 ಬೌಂಡರಿ) ಮತ್ತು ಜೊಫ್ರಾ ಆರ್ಚರ್ (27; 12 ಎ, 2 ಸಿಕ್ಸರ್‌, 2 ಬೌಂಡರಿ) ಅಂತಿಮ ಓವರ್‌ಗಳಲ್ಲಿ ಕೆಚ್ಚೆದೆಯಿಂದ ಆಡಿ ತಂಡವನ್ನು ಗೆಲ್ಲಿಸಿದರು.

ADVERTISEMENT

ರಿಯಾನ್ ಪರಾಗ್‌ ಹಿಟ್‌ ವಿಕೆಟ್‌ ಔಟಾದ ನಂತರ ಆರ್ಚರ್ ಏಕಾಂಗಿ ಹೋರಾಟ ನಡೆಸಿದ್ದರು. ಪ್ರಸಿದ್ಧ ಕೃಷ್ಣ ಹಾಕಿದ 20ನೇ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಕ್ರಮವಾಗಿ ಬೌಂಡರಿ ಮತ್ತು ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

‘ಇನ್‌ಸ್ವಿಂಗರ್‌ಗಳನ್ನು ಆಗಾಗ ಪ್ರಯೋಗಿಸುತ್ತಿರುತ್ತೇನೆ. ಆದರೆ ಈ ಬಾರಿ ಕೌಂಟಿಯಲ್ಲಿ ಅದು ಹೆಚ್ಚು ಪರಿಣಾಮಕಾರಿಯಾಗಿ ಬಳಕೆಯಾಗಿದೆ. ಔಟ್ ಸ್ವಿಂಗರ್‌ಗಳ ಮೇಲೆ ಹೆಚ್ಚು ಅವಲಂಬಿತನಾಗಿದ್ದೆ. ಕಳೆದ ವರ್ಷ ಐಪಿಎಲ್‌ನಲ್ಲಿ ಆಡಲು ಅವಕಾಶ ಸಿಗಲಿಲ್ಲ. ಹೀಗಾಗಿ ಕೌಂಟಿ ಕ್ರಿಕೆಟ್ ಆಡಲು ಹೋದೆ. ಅಲ್ಲಿ ಇನ್‌ಸ್ವಿಂಗ್ ಬೌಲಿಂಗ್‌ ಕಡೆಗೆ ಗಮನ ಹರಿಸಿದೆ’ ಎಂದು ವರುಣ್‌ ತಿಳಿಸಿದರು.

ಕಳೆದ ವರ್ಷ ಅವರು ಲೇಸಿಸ್ಟರ್‌ಶೈರ್ ಪರವಾಗಿ ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.