ಬ್ರೆವಿಸ್ ವಿಕೆಟ್ ಪಡೆದ ಹುಮ್ಮಸ್ಸಿನಲ್ಲಿ ವರುಣ್
ರಾಯಿಟರ್ಸ್ ಚಿತ್ರ
ಕೋಲ್ಕತ್ತ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕೆ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರಿಗೆ ಪಂದ್ಯ ಸಂಭಾವನೆಯ ಶೇ 25ರಷ್ಟು ದಂಡ ವಿಧಿಸಲಾಗಿದೆ ಮತ್ತು ಅವರ ಶಿಸ್ತಿನ ದಾಖಲೆಯಲ್ಲಿ ಒಂದು ಡಿಮೆರಿಟ್ ಅಂಕ ಸೇರಿಸಲಾಗಿದೆ.
ಬುಧವಾರ ನಡೆದ ಪಂದ್ಯದಲ್ಲಿ ಸಿಎಸ್‌ಕೆ ಎದುರು 2 ವಿಕೆಟ್‌ಗಳಿಂದ ಸೋತ ಕೆಕೆಆರ್ ತಂಡ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿತ್ತು.
‘ನೀತಿಸಂಹಿತೆಯ 2.5ರ ವಿಧಿಯ ಅಡಿ ಲೆವೆಲ್ 1 ತಪ್ಪು ಮಾಡಿದ್ದನ್ನು ವರುಣ್ ಒಪ್ಪಿಕೊಂಡಿದ್ದು, ಮ್ಯಾಚ್ ರೆಫ್ರಿ ನಿರ್ಧಾರಕ್ಕೆ ಸಮ್ಮತಿಸಿದ್ದಾರೆ. ಇಂಥ ಪ್ರಕರಣಗಳಲ್ಲಿ ಮ್ಯಾಚ್ ರೆಫ್ರಿ ತೀರ್ಮಾನ ಅಂತಿಮ’ ಎಂದು ಐಪಿಎಲ್ ಹೇಳಿಕೆ ತಿಳಿಸಿದೆ. ಆದರೆ ತಪ್ಪಿನ ವಿವರ ನೀಡಿಲ್ಲ. ಈ ವಿಧಿಯು ಆಟಗಾರನ ಭಾಷೆ, ದೇಹಭಾಷೆ, ವರ್ತನೆಗೆ ಸಂಬಂಧಿಸಿದೆ.
ಅರ್ಧ ಶತಕ ಸಿಡಿಸಿದ ಡೆವಾಲ್ಡ್ ಬ್ರೆವಿಸ್ ಅವರ ವಿಕೆಟ್ ಪಡೆದ ಉತ್ಸಾಹದಲ್ಲಿ ಚಕ್ರವರ್ತಿ ಅವರು ಫೀಲ್ಡ್ ತೊರೆಯುವಂತೆ ದಕ್ಷಿಣ ಆಫ್ರಿಕದ ಬ್ಯಾಟರ್‌ಗೆ ಸಂಜ್ಞೆ ಮಾಡಿದ್ದರು. ಬ್ರೆವಿಸ್ ಅವರ ಆಟ ಸಿಎಸ್‌ಕೆ ಚೇತರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.