ADVERTISEMENT

ಕೆಕೆಆರ್ ಪಾಳಯಕ್ಕೆ ಹುರುಪು ತುಂಬಿದ ಹರಭಜನ್

ಪಿಟಿಐ
Published 7 ಏಪ್ರಿಲ್ 2021, 17:00 IST
Last Updated 7 ಏಪ್ರಿಲ್ 2021, 17:00 IST
ಸಹ ಆಟಗಾರನೊಂದಿಗೆ ಹರಭಜನ್ ಸಿಂಗ್ –ಟ್ವಿಟರ್ ಚಿತ್ರ
ಸಹ ಆಟಗಾರನೊಂದಿಗೆ ಹರಭಜನ್ ಸಿಂಗ್ –ಟ್ವಿಟರ್ ಚಿತ್ರ   

ಮುಂಬೈ: ನಲವತ್ತರ ಹರಯದಲ್ಲೂ ಯುವಕನ ಉತ್ಸಾಹದಲ್ಲಿ ಓಡಾಡುವ ಹರಭಜನ್ ಸಿಂಗ್ ಅವರು ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಆಟಗಾರರಿಗೆ ಹುಮ್ಮಸ್ಸು ತುಂಬಿದ್ದಾರೆ ಎಂದು ಉಪನಾಯಕ ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.

ವೃತ್ತಿಜೀವನದ ಕೊನೆಯ ಘಟ್ಟದಲ್ಲೂ ಹರಭಜನ್ ಸಿಂಗ್ ತೋರುತ್ತಿರುವ ಉತ್ಸಾಹ ಮತ್ತು ಕ್ರೀಡೆಯ ಮೇಲಿನ ಅವರ ಪ್ರೀತಿ ಯುವ ಆಟಗಾರರಿಗೆ ಮಾದರಿಯಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700ಕ್ಕೂ ಅಧಿಕ ವಿಕೆಟ್‌ಗಳನ್ನು ಕಬಳಿಸಿರುವ ಅವರು ಒಂದು ವಾರದಿಂದ ತಂಡದ ಆಟಗಾರರಲ್ಲಿ ಅಚ್ಚರಿ ಮೂಡಿಸಿದ್ದಾರೆ ಎಂದು ಕಾರ್ತಿಕ್ ಹೇಳಿದ್ದಾರೆ.

ಹಿಂದಿನ ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳಲ್ಲಿ ಆಡಿದ್ದ ಹರಭಜನ್ ಸಿಂಗ್ ಅವರನ್ನು ಈ ಬಾರಿ ಆಟಗಾರರ ಹರಾಜಿನ ಮೊದಲ ಹಂತದಲ್ಲಿ ಯಾರೂ ಖರೀದಿಸಿರಲಿಲ್ಲ. ಕೊನೆಯಲ್ಲಿ ₹ ಎರಡು ಕೋಟಿಗೆ ಕೋಲ್ಕತ್ತ ನೈಟ್ ರೈಡರ್ಸ್‌ ಖರೀರಿದಿಸಿತ್ತು.

ADVERTISEMENT

’ಎಲ್ಲರೂ ಬರುವ ಮೊದಲೇ ಹರಭಜನ್ ಸಿಂಗ್ಅಭ್ಯಾಸಕ್ಕೆ ಹಾಜರಾಗುತ್ತಾರೆ. ನನಗೆ ಅವರ ಇಂಥ ಶಿಸ್ತಿನ ಬಗ್ಗೆ ಗೊತ್ತಿರಲಿಲ್ಲ. ಆದ್ದರಿಂದ ಈಗ ವಿಶಿಷ್ಟವಾಗಿ ಕಾಣಿಸುತ್ತಿದ್ದಾರೆ’ ಎಂದು ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಅಭ್ಯಾಸದ ನಡುವೆ ಕೆಕೆಆರ್‌ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಕಾರ್ತಿಕ್ ಹೇಳಿದ್ದಾರೆ.

‘ಸಂಜೆ ಏಳು ಗಂಟೆಗೆ ಅಭ್ಯಾಸ ‍ಪಂದ್ಯ ಇದೆ ಎಂದಾದರೆ ಹರಭಜನ್ ಸಿಂಗ್ ನಾಲ್ಕು ಗಂಟೆಗೇ ಕ್ರೀಡಾಂಗಣ ತಲುಪುತ್ತಾರೆ. ಮೊದಲು ಬ್ಯಾಟಿಂಗ್ ಅಭ್ಯಾಸ ಮಾಡುವ ಅವರು ನಂತರ ಶಕೀಬ್ ಅಲ್ ಹಸನ್, ಏಯಾನ್ ಮಾರ್ಗನ್ ಮತ್ತಿತರರಿಗೆ ಬೌಲಿಂಗ್ ಮಾಡುತ್ತಾರೆ. ಅಭ್ಯಾಸ ಪಂದ್ಯದಲ್ಲೂ ಬೌಲಿಂಗ್ ಮಾಡುತ್ತಾರೆ. 20 ಓವರ್ ಪೂರ್ತಿ ಫೀಲ್ಡಿಂಗ್ ಮಾಡುತ್ತಾರೆ. ಬದುಕಿನಲ್ಲಿ ಎಲ್ಲವನ್ನೂ ಸಾಧಿಸಿದ್ದರೂ ಆಟದ ಮೇಲಿನ ಅವರ ಪ್ರೀತಿ ಅಭಿನಂದನಾರ್ಹ’ ಎಂದು ಅವರು ಹೇಳಿದರು.

ಕೆಕೆಆರ್‌ ಈ ಬಾರಿಯ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಸೆಣಸಲಿದೆ. ಪಂದ್ಯ ಚೆನ್ನೈನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.