ADVERTISEMENT

Ranji Trophy | ವಿದರ್ಭ 3ನೇ ಸಲ ರಣಜಿ ಚಾಂಪಿಯನ್, ಕೇರಳ ರನ್ನರ್-ಅಪ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮಾರ್ಚ್ 2025, 10:17 IST
Last Updated 2 ಮಾರ್ಚ್ 2025, 10:17 IST
<div class="paragraphs"><p>ವಿದರ್ಭ ರಣಜಿ ಚಾಂಪಿಯನ್</p></div>

ವಿದರ್ಭ ರಣಜಿ ಚಾಂಪಿಯನ್

   

ನಾಗ್ಪುರ: ವಿದರ್ಭ ಕ್ರಿಕೆಟ್ ತಂಡವು 3ನೇ ಬಾರಿ ರಣಜಿ ಟ್ರೋಫಿ ಜಯಿಸಿತು. 

ಈ ವರ್ಷದ ಟೂರ್ನಿಯುದ್ದಕ್ಕೂ ಅಮೋಘವಾಗಿ ಆಡಿದ ವಿದರ್ಭ ಪಡೆಯು ಫೈನಲ್‌ನಲ್ಲಿ ಕೇರಳ ತಂಡದ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 37 ರನ್‌ಗಳ  ಮುನ್ನಡೆ ಗಳಿಸಿ, ಚಾಂಪಿಯನ್‌ ಪಟ್ಟಕ್ಕೇರಿತು. ಕೇರಳ ತಂಡವು ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಸಲ ಫೈನಲ್‌ ಪ್ರವೇಶಿಸಿತ್ತು. 

ADVERTISEMENT

ಆದರೆ ವಿದರ್ಭ ತಂಡವು ಈ ಬಾರಿಯ ದೇಶಿ ಋತುವಿನಲ್ಲಿ ತೋರಿದ ಶಿಸ್ತು ಮತ್ತು ಬದ್ಧತೆಗೆ ಜಯ ಒಲಿಯಿತು. ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ವಿದರ್ಭ ರನ್ನರ್ಸ್ ಅಪ್ ಆಗಿತ್ತು.  2017–18 ಮತ್ತು 2018–19ರಲ್ಲಿ ರಣಜಿ ಟ್ರೋಫಿ ಜಯಿಸಿದ್ದ ವಿದರ್ಭ ತಂಡವು ಮತ್ತೊಮ್ಮೆ ಕಿರೀಟ ಧರಿಸಿದೆ. ಹೋದ ಸಲ ರಣಜಿ ಟೂರ್ನಿಯಲ್ಲಿ ರನ್ನರ್ಸ್ ಅಪ್ ಆಗಿತ್ತು.  ನಾಯಕ ಅಕ್ಷಯ್ ವಾಡಕರ್ ಮತ್ತು ಮುಖ್ಯ ಕೋಚ್ ಉಸ್ಮಾನ್ ಗಣಿ ಅವರ ಮಾರ್ಗದರ್ಶನದಲ್ಲಿ ತಂಡವು ಅಮೋಘ ಸಾಧನೆ ಮಾಡಿದೆ. ಇದರೊಂದಿಗೆ ದೇಶಿ ಕ್ರಿಕೆಟ್‌ನಲ್ಲಿ ಪ್ರತಿಷ್ಠಿತ ತಂಡಗಳ ಸಾಲಿಗೆ ಸೇರಿದೆ. 

ಈ ಟೂರ್ನಿಯಲ್ಲಿ ವಿದರ್ಭ ತಂಡವು ಲೀಗ್ ಹಂತದಲ್ಲಿ 8 ಪಂದ್ಯಗಳಲ್ಲಿ 7ರಲ್ಲಿ ಗೆದ್ದಿತ್ತು. ಒಟ್ಟು 46 ಅಂಕ ಗಳಿಸಿತ್ತು. ಕ್ವಾರ್ಟರ್‌ಫೈನಲ್‌ನಲ್ಲಿ ತಮಿಳುನಾಡು ಮತ್ತು ಸೆಮಿಫೈನಲ್‌ನಲ್ಲಿ ಹೋದ ಬಾರಿಯ ಚಾಂಪಿಯನ್ ಮುಂಬೈ ತಂಡಗಳನ್ನು ಸೋಲಿಸಿದ್ದ ವಿದರ್ಭ ಫೈನಲ್‌ಗೆ ತಲುಪಿತ್ತು. 

ಆದರೆ ಕೇರಳಕ್ಕೆ ಅದೃಷ್ಟ ಹೆಚ್ಚು ಜೊತೆಯಾಗಿತ್ತು. ಕ್ವಾರ್ಟರ್‌ಫೈನಲ್‌ನಲ್ಲಿ ಜಮ್ಮು–ಕಾಶ್ಮೀರ ಎದುರು 1 ರನ್ ಮುನ್ನಡೆ ಹಾಗೂ ಸೆಮಿಫೈನಲ್‌ನಲ್ಲಿ ಗುಜರಾತ್ ಎದುರು ನಡೆದ ರೋಚಕ ಹೋರಾಟದಲ್ಲಿ 2 ರನ್‌ ಇನಿಂಗ್ಸ್ ಮುನ್ನಡೆ ಪಡೆದು ಪ್ರಶಸ್ತಿ ಸನಿಹ ಬಂದಿತ್ತು. 

ಆದರೆ ಫೈನಲ್‌ನಲ್ಲಿ ವಿದರ್ಭ ತಂಡ ಮೇಲುಗೈ ಸಾಧಿಸಿತು. ವಿದರ್ಭ ಮೊದಲ ಇನಿಂಗ್ಸ್‌ನಲ್ಲಿ 379 ರನ್ ಗಳಿಸಿತ್ತು. ಕೇರಳವು 342 ರನ್‌ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಎರಡನೇ ಇನಿಂಗ್ಸ್‌ನಲ್ಲಿ ವಿದರ್ಭ ತಂಡವು 143.5 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 375 ರನ್ ಗಳಿಸಿತು. 

ಪಂದ್ಯದ ಕೊನೆಯ ದಿನವಾದ ಭಾನುವಾರ ಕರುಣ್ ನಾಯರ್ (135; 295ಎಸೆತ,  4X10, 6X2) ಶತಕ ಪೂರೈಸಿದರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಹೊಡೆದಿದ್ದ ದಾನಿಶ್  ಈ ಇನಿಂಗ್ಸ್‌ನಲ್ಲಿ 73 ಮತ್ತು ದರ್ಶನ್ ನಲ್ಕಂಡೆ (ಔಟಾಗದೇ 51) ಅರ್ಧಶತಕ ದಾಖಲಿಸಿದರು. 

21 ವರ್ಷದ ದಾನಿಶ್ ಅವರು ಪಂದ್ಯದ ಆಟಗಾರ ಗೌರವಕ್ಕೆ ಪಾತ್ರರಾದರು. ಇದೊಂದೇ ರಣಜಿ ಋತುವಿನಲ್ಲಿ ಒಟ್ಟು 69 ವಿಕೆಟ್ ಗಳಿಸಿದ ಎಡಗೈ ಸ್ಪಿನ್ನರ್ ಹರ್ಷ ದುಬೆ ಅವರು ಸರಣಿಯ ಆಟಗಾರ ಪ್ರಶಸ್ತಿ ಗಳಿಸಿದರು. 

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್:

ವಿದರ್ಭ: 123.1 ಓವರ್‌ಗಳಲ್ಲಿ 379.

ಕೇರಳ: 125 ಓವರ್‌ಗಳಲ್ಲಿ 342.

ಎರಡನೇ ಇನಿಂಗ್ಸ್:

ವಿದರ್ಭ: 143.5 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 375 (ದಾನಿಶ್ ಮಾಲೆವರ್ 73, ಕರುಣ್ ನಾಯರ್ 135, ಯಶ್ ರಾಥೋಡ್ 24, ಅಕ್ಷಯ್ ವಾಡಕರ್ 25, ಅಕ್ಷಯ್ ಕರ್ಣೇವರ್ 30, ದರ್ಶನ್ ನಲ್ಕಂಡೆ ಔಟಾಗದೇ 51, ಆದಿತ್ಯ ಸರವಟೆ 96ಕ್ಕೆ4)

ಫಲಿತಾಂಶ: ಪಂದ್ಯ ಡ್ರಾ.

ಪಂದ್ಯದ ಆಟಗಾರ: ದಾನಿಶ್ ಮಾಲೆವರ್.

ಸರಣಿ ಆಟಗಾರ: ಹರ್ಷ ದುಬೆ.

ವಿದರ್ಭ ತಂಡಕ್ಕೆ ₹3 ಕೋಟಿ ಬಹುಮಾನ

ಕೇರಳ ತಂಡವನ್ನು ಫೈನಲ್‌ನಲ್ಲಿ ಸೋಲಿಸಿ ಭಾನುವಾರ ರಣಜಿ ಟ್ರೋಫಿ ಗೆದ್ದ ವಿದರ್ಭ ತಂಡದ ಆಟಗಾರರಿಗೆ ವಿದರ್ಭ ಕ್ರಿಕೆಟ್‌ ಸಂಸ್ಥೆ ₹3 ಕೋಟಿ ಬಹುಮಾನ ಪ್ರಕಟಿಸಿದೆ. ನೆ

ರವು ಸಿಬ್ಬಂದಿಗೆ ಪ್ರತ್ಯೇಕವಾಗಿ ನಗದು ಬಹುಮಾನ ಘೋಷಿಸಿದೆ. ಪ್ರಥಮ ದರ್ಜೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಅಕ್ಷಯ್ ವಾಖರೆ ಅವರನ್ನು ವಿದರ್ಭ ಕ್ರಿಕೆಟ್‌ ಸಂಸ್ಥೆ ಸನ್ಮಾನಿಸಿತು. ವಿದರ್ಭ ಮೂರನೇ ಬಾರಿ ರಣಜಿ ಟ್ರೋಫಿ ಗೆಲ್ಲುತ್ತಿದೆ.

ಈ ಹಿಂದೆ 2017–18ರಲ್ಲಿ, 2018–19ರಲ್ಲಿ ಜಯಿಸಿತ್ತು.ಇದೇ ವೇಳೆ ಒಂದೇ ಋತುವಿನಲ್ಲಿ ಅತಿ ಹೆಚ್ಚು (69) ವಿಕೆಟ್ ಪಡೆದ ದಾಖಲೆಗೆ ಪಾತ್ರರಾದ ಹರ್ಷ ದುಬೆ ಅವರಿಗೆ ₹25 ಲಕ್ಷ ನಗದು ಬಹುಮಾನ ನೀಡಲಾಯಿತು. ಕರುಣ್ ನಾಯರ್ (53.93 ಸರಾಸರಿಯಲ್ಲಿ 863 ರನ್) ಮತ್ತು ಯಶ್‌ ರಾಥೋಡ್‌ (53.33 ಸರಾಸರಿಯಲ್ಲಿ 960 ರನ್) ಅವರಿಗೆ ತಲಾ 10 ಲಕ್ಷ ₹ ಬಹುಮಾನ ಹೆಚ್ಚುವರಿಯಾಗಿ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.