ADVERTISEMENT

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ದೇವದತ್ತ ಶತಕಕ್ಕೆ ಒಲಿದ ಜಯ

ಒಡಿಶಾ ಎದುರು ಗೆದ್ದ ಕರ್ನಾಟಕ; ಸಮರ್ಥ್ ಅರ್ಧಶತಕ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 14:37 IST
Last Updated 24 ಫೆಬ್ರುವರಿ 2021, 14:37 IST
ದೇವದತ್ತ ಪಡಿಕ್ಕಲ್ 
ದೇವದತ್ತ ಪಡಿಕ್ಕಲ್    

ಬೆಂಗಳೂರು: ಆರಂಭಿಕ ಬ್ಯಾಟ್ಸ್‌ಮನ್‌ ದೇವದತ್ತ ಪಡಿಕ್ಕಲ್‌ ಬುಧವಾರ ಶತಕದಂಚಿನಲ್ಲಿ ಎಡವಲಿಲ್ಲ. ಭರ್ಜರಿ ಬ್ಯಾಟಿಂಗ್‌ ಮೂಲಕ ನೂರರ ಗಡಿಯನ್ನೂ ದಾಟಿದರು, ತಂಡಕ್ಕೆ ಜಯದ ಕಾಣಿಕೆಯನ್ನೂ ನೀಡಿದರು.

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಸಿ ಗುಂಪಿನ ಮೂರನೇ ಪಂದ್ಯದಲ್ಲಿ ಕರ್ನಾಟಕ ತಂಡವು 101 ರನ್‌ಗಳಿಂದ ಒಡಿಶಾ ವಿರುದ್ಧ ಜಯಿಸಿತು.

ನಗರದ ಹೊರವಲಯದಲ್ಲಿರುವ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಒಡಿಶಾ ಫೀ್ಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆತಿಥೇಯ ತಂಡದ ಆರಂಭಿಕ ಜೋಡಿ ಆರ್. ಸಮರ್ಥ್ (60; 83ಎಸೆತ, 4ಬೌಂ) ಮತ್ತು ದೇವದತ್ತ (152; 140ಎ, 14ಬೌಂ, 5ಸಿ) ಮೊದಲ ವಿಕೆಟ್ ಜೊತೆಯಾಟದಲ್ಲಿ 140 ರನ್‌ಗಳನ್ನು ಸೇರಿಸಿದರು. ಈ ಅಡಿಪಾಯದ ಮೇಲೆ ತಂಡವು 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 329 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಒಡಿಶಾ ತಂಡವು 44 ಓವರ್‌ಗಳಲ್ಲಿ 228 ರನ್‌ ಗಳಿಸಲಷ್ಟೇ ಶಕ್ತವಾಯಿತು. ಶುಭ್ರಾಂಶು ಸೆನಾಪತಿ (78; 92ಎ, 3ಬೌಂ, 2ಸಿ) ಮತ್ತು ಅಂಕಿತ್ ಯಾದವ್ (56; 63ಎ) ಅವರ ಅರ್ಧಶತಕಗಳು ತಂಡದ ಜಯಕ್ಕೆ ಸಾಕಾಗಲಿಲ್ಲ.

ADVERTISEMENT

ಕರ್ನಾಟಕ ತಂಡದ ನಾಯಕ ಸಮರ್ಥ್ ಹೋದ ಪಂದ್ಯದಲ್ಲಿ ಬಿಹಾರ ವಿರುದ್ಧ ಶತಕ ಬಾರಿಸಿದ್ದರು. ಅದೇ ಪಂದ್ಯದಲ್ಲಿ ದೇವದತ್ತ ಮೂರು ರನ್‌ಗಳ ಅಂತರದಿಂದ ಶತಕ ತಪ್ಪಿಸಿಕೊಂಡಿದ್ದರು. ಆದರೆ ಇಲ್ಲಿ ಒಡಿಶಾ ಬೌಲರ್‌ಗಳಿಗೆ ಅವರನ್ನು ತಡೆಯಲು ಸಾಧ್ಯವಾಗಲಿಲ್ಲ. 108.17ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಸೂರೆ ಮಾಡಿದರು. ಹೋದ ವರ್ಷ ಐಪಿಎಲ್‌ನಲ್ಲಿ ಮಿಂಚಿದ್ದ ದೇವದತ್ತ ಇಲ್ಲಿಯೂ ಅದೇ ಸೊಗಸು ತೋರಿದರು.

ಸಮರ್ಥ್ ಔಟಾದ ನಂತರ, ಎರಡನೇ ವಿಕೆಟ್ ಜೊತೆಯಾಟದಲ್ಲಿ ದೇವದತ್ತ ಮತ್ತು ಕೆ.ವಿ. ಸಿದ್ಧಾರ್ಥ್ (41;32ಎ) 65 ರನ್‌ಗಳನ್ನು ಸೇರಿಸಿದರು. 46ನೇ ಓವರ್‌ನಲ್ಲಿ ಸೂರ್ಯಕಾಂತ್ ಪ್ರಧಾನ್ ಎಸೆತದಲ್ಲಿ ದೇವದತ್ತ ರಾಜೇಶ್ ಧೂಪರ್‌ಗೆ ಕ್ಯಾಚಿತ್ತರು. ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅಭಿಮನ್ಯು ಮಿಥುನ್ (ಔಟಾಗದೆ 40; 17ಎ) ಐದು ಸಿಕ್ಸರ್‌ಗಳನ್ನು ಸಿಡಿಸಿದರು. ಇದರಿಂದಾಗಿ ತಂಡವು ಮುನ್ನೂರರ ಗಡಿ ದಾಟಿತು.

ಬೌಲಿಂಗ್‌ನಲ್ಲಿ ಮಿಂಚಿದ ಪ್ರಸಿದ್ಧ ಕೃಷ್ಣ ಮತ್ತು ಶ್ರೇಯಸ್ ಗೋಪಾಲ್ ತಲಾ ಮೂರು ವಿಕೆಟ್ ಗಳಿಸಿ ಒಡಿಶಾ ತಂಡದ ಪತನಕ್ಕೆ ಕಾರಣರಾದರು.

ಈ ಜಯದೊಂದಿಗೆ ಹಾಲಿ ಚಾಂಪಿಯನ್ ಕರ್ನಾಟಕವು ಪಾಯಿಂಟ್ ಪಟ್ಟಿಯಲ್ಲಿ ಎಂಟು ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ತಲುಪಿದೆ. 12 ಪಾಯಿಂಟ್ ಗಳಿಸಿ ಅಗ್ರಸ್ಥಾನದಲ್ಲಿರುವ ಕೇರಳ ತಂಡವನ್ನು ಶುಕ್ರವಾರ ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.