ADVERTISEMENT

Vijay Hazare Trophy: ಶತಕ, ದಾಖಲೆಗಳ ಭರಾಟೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 23:28 IST
Last Updated 24 ಡಿಸೆಂಬರ್ 2025, 23:28 IST
<div class="paragraphs"><p>ವಿರಾಟ್ ಕೊಹ್ಲಿ</p></div>

ವಿರಾಟ್ ಕೊಹ್ಲಿ

   
ಕ್ರಿಸ್‌ಮಸ್ ಮುನ್ನಾದಿನವಾದ ಬುಧವಾರ ಆರಂಭವಾದ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ರನ್‌ಗಳ ಹೊಳೆ ಹರಿಯಿತು. ದೇಶಿ ಕ್ರಿಕೆಟ್ ಇತಿಹಾಸದ ಪುಟದಲ್ಲಿ ದಾಖಲೆಗಳು ಸೇರಿದವು. 14ರ ಪೋರ ವೈಭವ್ ಸೂರ್ಯವಂಶಿ, ದಿಗ್ಗಜರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅನುಭವಿ ಇಶಾನ್ ಕಿಶನ್ ಸೇರಿದಂತೆ ಹಲವರು ಶತಕ ಹೊಡೆದರು.

ಕರ್ನಾಟಕದ ಕಹಳೆ : ಹಾಲಿ ಚಾಂಪಿಯನ್ ಕರ್ನಾಟಕ ತಂಡವು ಟೂರ್ನಿಯಲ್ಲಿ ಭರ್ಜರಿ ಆರಂಭ ಮಾಡಿತು. ಅಹಮದಾಬಾದಿನಲ್ಲಿ ನಡೆದ ಎ ಗುಂಪಿನ ಮೊದಲ ಪಂದ್ಯದಲ್ಲಿ ಜಾರ್ಖಂಡ್ ತಂಡ ನೀಡಿದ್ದ 413 ರನ್‌ಗಳ ಗುರಿಯನ್ನು 15 ಎಸೆತಗಳು ಬಾಕಿಯಿರುವಾಗಲೇ ಸಾಧಿಸಿತು. ಅತಿ ದೊಡ್ಡ ಗುರಿ ಬೆನ್ನಟ್ಟಿ ಗೆದ್ದ ದಾಖಲೆ ಕರ್ನಾಟಕದ್ದಾಯಿತು. ದೇವದತ್ತ ಪಡಿಕ್ಕಲ್ ಅಮೋಘ ಶತಕ (147) ಗಳಿಸಿ ಕರ್ನಾಟಕದ ಗೆಲುವಿನ ರೂವಾರಿಯಾದರು. ಇದಕ್ಕೂ ಮುನ್ನ ಜಾರ್ಖಂಡ್‌ ತಂಡ ನಾಯಕ ಇಶಾನ್‌ (125;39ಎ) ಅವರು ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಭಾರತದ ಆಟಗಾರರ ಪೈಕಿ ಎರಡನೇ ಅತಿ ವೇಗದ ಶತಕ (33) ದಾಖಲಿಸಿದರು.

ರೋಹಿತ್ ಅಬ್ಬರ: ಮುಂಬೈ ತಂಡದ ರೋಹಿತ್ ಶರ್ಮಾ ಅವರು ದೀರ್ಘಕಾಲದ ನಂತರ ದೇಶಿ ಏಕದಿನ ಕಣಕ್ಕಿಳಿದರು. ಸಿಕ್ಕಿಂ ಎದುರು ರೋಹಿತ್ 94 ಎಸೆತಗಳಲ್ಲಿ 155 ರನ್ ಗಳಿಸಿದರು.

ADVERTISEMENT

ದಾಖಲೆ ‘ವೈಭವ’: ರಾಂಚಿಯಲ್ಲಿ ನಡೆದ ಪಂದ್ಯದಲ್ಲಿ 14 ವರ್ಷದ ಪೋರ ವೈಭವ ಸೂರ್ಯವಂಶಿ 36 ಎಸೆತಗಳಲ್ಲಿ ಶತಕ ದಾಖಲಿಸಿದರು. ಅವರು 84 ಎಸೆತಗಳಲ್ಲಿ 190 ರನ್ ಹೊಡೆದರು. ಅದರಲ್ಲಿ 16 ಬೌಂಡರಿ, 15 ಸಿಕ್ಸರ್‌ಗಳು ಸೇರಿವೆ. ಬಿಹಾರದ ಆಯುಷ್ ಲೋರುಖಾ (116 ರನ್) ಮತ್ತು ಸಕೀಬುಲ್ ಗನಿ (ಔಟಾಗದೇ 128, 40ಎ) ಶತಕ ಗಳಿಸಿದರು. ಸಕೀಬುಲ್ ಅವರು 32 ಎಸೆತಗಳಲ್ಲಿ ಮೂರಂಕಿ ದಾಟುವ ಮೂಲಕ ಭಾರತದ ಆಟಗಾರರ ಪೈಕಿ ಅತಿ ವೇಗದ ಶತಕ (32ಎ) ದಾಖಲಿಸಿದರು. ಇದರಿಂದಾಗಿ ತಂಡವು 6 ವಿಕೆಟ್‌ಗಳಿಗೆ 574 ರನ್ ಗಳಿಸಿತು. ವಿಜಯ್ ಹಜಾರೆ ಟೂರ್ನಿ ಇತಿಹಾಸದಲ್ಲಿಯೇ ಇದು ಗರಿಷ್ಠ ಮೊತ್ತವಾಗಿದೆ. ಪಂದ್ಯದಲ್ಲಿ ಬಿಹಾರವು 397 ರನ್‌ಗಳಿಂದ ಜಯಿಸಿದ್ದು ದಾಖಲೆ.

ಸಮಲ್ ದ್ವಿಶತಕ: ಬೆಂಗಳೂರು ಹೊರವಲಯದ ಆಲೂರಿನಲ್ಲಿ ನಡೆದ ಡಿ ಗುಂಪಿನ ಪಂದ್ಯದಲ್ಲಿ ಒಡಿಶಾ ತಂಡದ ಆರಂಭ ಆಟಗಾರ ಸ್ವಸ್ತಿಕ್ ಸಮಲ್ (212; 169ಎ, 21ಬೌಂಡರಿ, 8ಸಿಕ್ಸರ್) ದ್ವಿಶತಕ ಹೊಡೆದರು.

ದೇವದತ್ತ ಪಡಿಕ್ಕಲ್

ದೆಹಲಿ ಗೆಲುವಿನಲ್ಲಿ ಮಿಂಚಿದ ಕೊಹ್ಲಿ

ದೆಹಲಿ ತಂಡದ ಪರ ಕಣಕ್ಕಿಳಿದ ‘ಚೇಸಿಂಗ್ ಮಾಸ್ಟರ್’ ವಿರಾಟ್ ಕೊಹ್ಲಿ ಏಳು ತಿಂಗಳುಗಳ ನಂತರ ಬೆಂಗಳೂರಿನಲ್ಲಿ ಆಟವಾಡಿದರು. ಆಂಧ್ರ ಎದುರು ಭರ್ಜರಿ ಶತಕ ದಾಖಲಿಸಿದರು. ದೆಹಲಿ ತಂಡವು 4 ವಿಕೆಟ್‌ಗಳಿಂದ ಗೆದ್ದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.