ADVERTISEMENT

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ಕಿರೀಟಕ್ಕಾಗಿ ಮನೀಷ್–ದಿನೇಶ್ ಹೋರಾಟ

ಕರ್ನಾಟಕ–ತಮಿಳುನಾಡು ಫೈನಲ್ ಇಂದು; ತಾರೆಗಳ ಹಣಾಹಣಿ

ಗಿರೀಶದೊಡ್ಡಮನಿ
Published 24 ಅಕ್ಟೋಬರ್ 2019, 19:14 IST
Last Updated 24 ಅಕ್ಟೋಬರ್ 2019, 19:14 IST
ಮನೀಷ್ ಪಾಂಡೆ
ಮನೀಷ್ ಪಾಂಡೆ   

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಹನ್ನೊಂದು ಆಟಗಾರರು ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಣಕ್ಕಿಳಿಯಲಿದ್ದಾರೆ!

ಹಾಗೆಂದು ಇಲ್ಲಿ ಯಾವುದೇ ಅಂತರರಾಷ್ಟ್ರೀಯ ಪಂದ್ಯ ಆಯೋಜನೆಯಾಗಿಲ್ಲ. ಆದರೆ ಇಲ್ಲಿ ಕರ್ನಾಟಕ ಮತ್ತು ತಮಿಳುನಾಡು ತಂಡಗಳ ನಡುವಣ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಈ ಕ್ರಿಕೆಟಿಗರು ಕಣಕ್ಕಿಳಿಯಲಿದ್ದಾರೆ. ಅಷ್ಟೇ ಅಲ್ಲ ಪ್ರಶಸ್ತಿಗಾಗಿ ಹೋರಾಟ ನಡೆಸಲಿದ್ದಾರೆ.

ಕರ್ನಾಟಕ ತಂಡದ ನಾಯಕ ಮನೀಷ್ ಪಾಂಡೆ, ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್, ಕರುಣ್ ನಾಯರ್ ಮತ್ತು ಮಧ್ಯಮವೇಗಿ ಅಭಿಮನ್ಯು ಮಿಥುನ್ ಭಾರತ ತಂಡದಲ್ಲಿ ಆಡಿದವರು. ತಮಿಳುನಾಡು ತಂಡದ ನಾಯಕ ದಿನೇಶ್ ಕಾರ್ತಿಕ್, ಆರ್. ಅಶ್ವಿನ್, ಅಭಿನವ್ ಮುಕುಂದ್, ವಿಜಯ ಶಂಕರ್, ವಾಷಿಂಗ್ಟನ್ ಸುಂದರ್ ಮತ್ತು ಮುರಳಿ ವಿಜಯ್ ಅವರು ಒಂದಿಲ್ಲೊಂದು ಮಾದರಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದವರೇ ಇದ್ದಾರೆ. ಆದ್ದರಿಂದ ತುರುಸಿನ ಹಣಾಹಣಿ ನಡೆಯುವ ನಿರೀಕ್ಷೆ ಮೂಡಿದೆ.

ADVERTISEMENT

ಈ ಬಾರಿಯ ಟೂರ್ನಿಯುದ್ದಕ್ಕೂ ತಮ್ಮ ಗುಂಪುಗಳಲ್ಲಿ ಅಮೋಘವಾಗಿ ಆಡಿ ಬಂದಿರುವ ಉಭಯ ಬಳಗಗಳೂ ಪ್ರಶಸ್ತಿ ಮೇಲೆ ಕಣ್ಣಿಟ್ಟಿವೆ. ಆತಿಥೇಯ ತಂಡವಾಗಿರುವ ಕಾರಣಕ್ಕೆ ಕರ್ನಾಟಕ ತಂಡದ ಆತ್ಮವಿಶ್ವಾಸ ಉತ್ತುಂಗದಲ್ಲಿದೆ. ಎ ಗುಂಪಿನಲ್ಲಿ ಹೈದರಾಬಾದ್ ವಿರುದ್ಧ ಆಲೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಮಾತ್ರ ಸೋತಿತ್ತು. ಉಳಿದ ಎಲ್ಲ ಪಂದ್ಯಗಳಲ್ಲಿಯೂ ಅಧಿಕಾರಯುತ ಜಯ ಸಾಧಿಸಿತ್ತು.

ರಾಹುಲ್ ಮತ್ತು ದೇವದತ್ತ ಪಡಿಕ್ಕಲ್ ಅವರ ಆರಂಭಿಕ ಜೋಡಿಯು ಪ್ರತಿ ಪಂದ್ಯದಲ್ಲಿಯೂ ತನ್ನ ಮೋಡಿ ತೋರಿಸುತ್ತಿದೆ. ಇದರಿಂದಾಗಿ ದೊಡ್ಡ ಮೊತ್ತದ ಗುರಿ ನೀಡುವ ಮತ್ತು ಸಾಧಿಸುವುದು ತಂಡಕ್ಕೆ ಸುಲಭವಾಗುತ್ತಿದೆ. ಸೆಮಿಫೈನಲ್‌ ಪಂದ್ಯದಲ್ಲಿ ತಂಡಕ್ಕೆ ಬಂದು ಸೇರಿಕೊಂಡ ‘ಟೆಸ್ಟ್ ಹೀರೊ’ ಮಯಂಕ್ ಅಗರವಾಲ್ ಸಿಕ್ಸರ್‌ಗಳನ್ನು ಸಿಡಿಸಿ ತಮ್ಮ ಲಯದಲ್ಲಿ ಮುಂದುವರಿದಿದ್ದರು. ಫೈನಲ್‌ನಲ್ಲಿಯೂ ಮಿಂಚುವ ವಿಶ್ವಾಸದಲ್ಲಿದ್ದಾರೆ. ನಾಯಕ ಮನೀಷ್ ಪಾಂಡೆಯಂತೂ ಅತ್ಯಮೋಘ ಲಯದಲ್ಲಿದ್ದಾರೆ. ಅವರನ್ನು ಔಟ್ ಮಾಡುವುದೇ ಬೌಲರ್‌ಗಳಿಗೆ ದೊಡ್ಡ ಸವಾಲಾಗುತ್ತಿದೆ. ಕರುಣ್ ನಾಯರ್ ಬ್ಯಾಟ್‌ನಿಂದ ಮಾತ್ರ ರನ್‌ಗಳು ಹರಿಯುತ್ತಿಲ್ಲ. ಆದರೆ, ನಾಕೌಟ್ ಹಂತದಲ್ಲಿ ಮಿಂಚುವ ಅವರ ಸ್ವಭಾವದ ಮೇಲೆ ವಿಶ್ವಾಸವಿಡಬಹುದು. ರೋಹನ್ ಕದಂ, ಕೆಳಕ್ರಮಾಂಕದಲ್ಲಿ ಪ್ರವೀಣ ದುಬೆ, ಕೆ. ಗೌತಮ್, ಮಿಥುನ್ ಅವರೂ ಒಂದಷ್ಟು ರನ್‌ಗಳ ಕಾಣಿಕೆ ನೀಡಬಲ್ಲಸಮರ್ಥರು.

ಆದರೆ, ಬೌಲಿಂಗ್‌ನಲ್ಲಿ ಒಂದು ಲೋಪ ಸರಿಪಡಿಸಿಕೊಂಡರೆ ತಂಡವು ಇನ್ನಷ್ಟು ಬಲಿಷ್ಠವಾಗಬಹುದು. ಗಾಯಗೊಂಡಿರುವ ಪ್ರಸಿದ್ಧ ಕೃಷ್ಣ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿರುವ ತಂಡದಲ್ಲಿ ವಿ. ಕೌಶಿಕ್ ಮತ್ತು ಅನುಭವಿ ಮಿಥುನ್ ಅವರೇ ದೊಡ್ಡ ಭರವಸೆ. ಸೆಮಿಫೈನಲ್‌ನಲ್ಲಿ ನಾಲ್ಕು ವಿಕೆಟ್‌ ಕಬಳಿಸಿದ್ದ ಕೌಶಿಕ್ ಉತ್ತಮ ಆರಂಭ ನೀಡಿದ್ದರು. 96ಕ್ಕೆ5 ವಿಕೆಟ್ ಕಳೆದುಕೊಂಡಿದ್ದ ಛತ್ತೀಸಗಡ ತಂಡದ ಉಳಿದ ವಿಕೆಟ್‌ಗಳನ್ನು ಬೇಗನೆ ಕಬಳಿಸುವ ನಾಯಕನ ಯೋಜನೆಗೆ ತಕ್ಕಂತೆ ಸ್ಪಿನ್ನರ್‌ಗಳು ಬೌಲಿಂಗ್ ಮಾಡಲಿಲ್ಲ. ಇದೇ ತರಹ ಪುದುಚೇರಿ ವಿರುದ್ಧವೂ ಆಗಿತ್ತು. ಜೊತೆಯಾಟಗಳಿಗೆ ಕಡಿವಾಣ ಹಾಕುವ ತಂತ್ರಗಳನ್ನು ಸ್ಪಿನ್ನರ್‌ಗಳು ಜಾರಿಗೆ ತರುವ ಅಗತ್ಯ ಇದೆ. ಏಕೆಂದರೆ ಗುಜರಾತ್ ವಿರುದ್ಧ ಸೆಮಿಫೈನಲ್‌ನಲ್ಲಿ ತಮಿಳುನಾಡಿನ ಮಧ್ಯಮಕ್ರಮಾಂಕದ ಶಾರೂಕ್‌ ಖಾನ್ ಅರ್ಧಶತಕ ಬಾರಿಸಿ ಜಯದ ರೂವಾರಿಯಾಗಿದ್ದರು. ಬಾಬಾ ಅಪರಾಜಿತ್ (532 ರನ್), ಆಲ್‌ರೌಂಡರ್ ವಿಜಯಶಂಕರ್ (386 ರನ್) ಮತ್ತು ನಾಯಕ ದಿನೇಶ್ ಕಾರ್ತಿಕ್‌ (407 ರನ್) ಉತ್ತಮ ಲಯದಲ್ಲಿದ್ದಾರೆ. ತಂಡವು ಟೂರ್ನಿಯಲ್ಲಿ ಇಲ್ಲಿಯವರೆಗೆ ಒಂದೂ ಪಂದ್ಯ ಸೋತಿಲ್ಲ. ಆರ್. ಅಶ್ವಿನ್ ಮರಳಿರುವುದರಿಂದ ಬೌಲಿಂಗ್ ವಿಭಾಗವು ಮತ್ತಷ್ಟು ಬಲಶಾಲಿಯಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಬೆಳಿಗ್ಗೆಯ ವಾತಾವರಣದಲ್ಲಿ ಬೌಲರ್‌ಗಳಿಗೆ ಹೆಚ್ಚು ನೆರವು ನೀಡುತ್ತದೆ. ಆದ್ದರಿಂದ ಟಾಸ್ ಗೆಲುವು ಮತ್ತು ಜಯಿಸಿದವರ ನಿರ್ಧಾರವೂ ಫಲಿತಾಂಶದ ಮೇಲೆ ಪ್ರಮುಖ ಪಾತ್ರ ವಹಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.