ADVERTISEMENT

Vijay Hazare Trophy: ಮಯಂಕ್ ಶತಕದ ಭರಾಟೆ; ಎಂಟರ ಘಟ್ಟಕ್ಕೆ ಕರ್ನಾಟಕ

​ಪ್ರಜಾವಾಣಿ ವಾರ್ತೆ
Published 5 ಜನವರಿ 2025, 16:20 IST
Last Updated 5 ಜನವರಿ 2025, 16:20 IST
ಕರ್ನಾಟಕ ತಂಡದ ನಾಯಕ ಮಯಂಕ್ ಅಗರವಾಲ್ 
ಕರ್ನಾಟಕ ತಂಡದ ನಾಯಕ ಮಯಂಕ್ ಅಗರವಾಲ್    

ಬೆಂಗಳೂರು: ಮಯಂಕ್ ಅಗರವಾಲ್ ಅಮೋಘ ಶತಕದ ಬಲದಿಂದ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಸಿ ಗುಂಪಿನ ಕೊನೆಯ ಪಂದ್ಯದಲ್ಲಿ ಜಯಿಸಿತು. ಇದರೊಂದಿಗೆ ನೇರವಾಗಿ ಎಂಟರ ಘಟ್ಟಕ್ಕೆ ಪ್ರವೇಶಿಸಿತು. 

ಕರ್ನಾಟಕ ತಂಡದ ನಾಯಕ ಮಯಂಕ್ (ಔಟಾಗದೆ 116; 119ಎ, 4X9, 6X4) ಟೂರ್ನಿಯಲ್ಲಿ ನಾಲ್ಕನೇ ಶತಕ ದಾಖಲಿಸಿದರು. ಅಲ್ಲದೇ ಅವರು ಒಟ್ಟು ಏಳು ಪಂದ್ಯಗಳಿಂದ 613 ರನ್‌ ಗಳಿಸಿದರು. ಕರ್ನಾಟಕ 9 ವಿಕೆಟ್‌ಗಳಿಂದ ಜಯಿಸಿತು. 

ಗುಜರಾತ್ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ  ಕರ್ನಾಟಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಾಗಾಲ್ಯಾಂಡ್ ತಂಡದ ನಾಯಕ ರಾಂಗ್ಸೆನ್ ಜೊನಾಥನ್ (51; 73ಎ, 4X4, 6X1) ಮತ್ತು ಚೇತನ್ ಬಿಷ್ಟ್ (ಔಟಾಗದೆ 77;  73ಎ, 4X6, 6X2) ಅವರಿಬ್ಬರೂ ಅರ್ಧಶತಕ ಗಳಿಸಿದರು. ಇದರಿಂದಾಗಿ ತಂಡವು 48.3 ಓವರ್‌ಗಳಲ್ಲಿ 206 ರನ್ ಗಳಿಸಿತು. ಕರ್ನಾಟಕದ ಸ್ಪಿನ್ನರ್ ಶ್ರೇಯಸ್ ಗೋಪಾಲ್ (24ಕ್ಕೆ4) ಮತ್ತು ಅಭಿಲಾಷ್ ಶೆಟ್ಟಿ (42ಕ್ಕೆ2) ಎದುರಾಳಿ ತಂಡವನ್ನು ಕಟ್ಟಿಹಾಕಿದರು. 

ADVERTISEMENT

ಸಾಧಾರಣ ಗುರಿ ಬೆನ್ನಟ್ಟಿದ ಕರ್ನಾಟಕ ತಂಡದ ಆರಂಭಿಕ ಬ್ಯಾಟರ್ ನಿಕಿನ್ ಜೋಸ್ (1 ರನ್) ನಾಲ್ಕನೇ ಓವರ್‌ನಲ್ಲಿ ವಿಕೆಟ್ ಕಳೆದುಕೊಂಡರು. ಆದರೆ ಉತ್ತಮ ಫಾರ್ಮ್‌ನಲ್ಲಿರುವ ಮಯಂಕ್  ಮತ್ತು ಕೆ.ವಿ. ಅನೀಶ್ (ಔಟಾಗದೆ 82; 95ಎ, 4X10) ಮುರಿಯದ ಎರಡನೇ ವಿಕೆಟ್ ಜೊತೆಯಾಟದಲ್ಲಿ 198 ರನ್‌ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇನ್ನಿತರ ಗುಂಪುಗಳಿಂದ ಗುಜರಾತ್, ಮಹಾರಾಷ್ಟ್ರ, ವಿದರ್ಭ ಮತ್ತು ಬರೋಡಾ ತಂಡಗಳೂ ಕ್ವಾರ್ಟರ್‌ಫೈನಲ್ ಪ್ರವೇಶಿಸಿದವು.

ಸಂಕ್ಷಿಪ್ತ ಸ್ಕೋರು

ನಾಗಾಲ್ಯಾಂಡ್: 48.3 ಓವರ್‌ಗಳಲ್ಲಿ 206 (ಹೆಮ್ ಚೆಟ್ರಿ 24, ರಾಂಗ್ಸೆನ್ ಜೊನಾಥನ್ 51, ಚೇತನ್ ಬಿಷ್ಟ್ ಔಟಾಗದೆ 77, ಅಭಿಲಾಷ್ ಶೆಟ್ಟಿ 42ಕ್ಕೆ2, ಶ್ರೇಯಸ್ ಗೋಪಾಲ್ 24ಕ್ಕೆ4)

ಕರ್ನಾಟಕ: 37.5 ಓವರ್‌ಗಳಲ್ಲಿ 1 ವಿಕೆಟ್‌ಗೆ 207 (ಮಯಂಕ್ ಅಗರವಾಲ್ ಔಟಾಗದೆ 116, ಕೆ.ವಿ. ಅನೀಶ್ ಔಟಾಗದೆ 82, ಇಮ್ಲಿವತಿ ಲೆಮ್ತೂರ್ 38ಕ್ಕೆ1)

ಫಲಿತಾಂಶ: ಕರ್ನಾಟಕ ತಂಡಕ್ಕೆ 9 ವಿಕೆಟ್‌ಗಳ ಜಯ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.