ಬೆಂಗಳೂರು: ವಿಜಯ್ ಹಜಾರೆ ಟ್ರೋಫಿ ವಿಜೇತ ಕರ್ನಾಟಕ ತಂಡಕ್ಕೆ ಭಾನುವಾರ ಸಂಭ್ರಮವೋ ಸಂಭ್ರಮ. ಐದು ವರ್ಷಗಳ ನಂತರ ದೇಶಿ ಕ್ರಿಕೆಟ್‌ನ ಏಕದಿನ ಮಾದರಿಯ ಕಿರೀಟ ಧರಿಸಿದ ಮಯಂಕ್ ಅಗರವಾಲ್ ನಾಯಕತ್ವದ ತಂಡಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ₹ 50 ಲಕ್ಷ ಬಹುಮಾನ ನೀಡಿ ಸನ್ಮಾನಿಸಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ ನಡೆದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಂಡದ ಆಟಗಾರರನ್ನು ಸನ್ಮಾನಿಸಿ ಬಹುಮಾನದ ಚೆಕ್ ಪ್ರದಾನ ಮಾಡಲಾಯಿತು.
ರಣಜಿ ಟ್ರೋಫಿ (23 ವಿಕೆಟ್) ಮತ್ತು ವಿಜಯ್ ಹಜಾರೆ (18 ವಿಕೆಟ್) ಟ್ರೋಫಿ ಟೂರ್ನಿಗಳಲ್ಲಿ ಕರ್ನಾಟಕದ ಪರವಾಗಿ ಅತ್ಯಧಿಕ ವಿಕೆಟ್ ಪಡೆದ ವಾಸುಕಿ ಕೌಶಿಕ್ ಅವರನ್ನೂ ಗೌರವಿಸಲಾಯಿತು. ಆಲ್‌ರೌಂಡರ್ ಧೀರಜ್ ಜೆ ಗೌಡ ಅವರು 19 ವರ್ಷದೊಳಗಿನವರ ಕೂಚ್ ಬಿಹಾರ್ ಟ್ರೋಫಿ ಟೂರ್ನಿಯಲ್ಲಿ ಅತ್ಯಧಿಕ ರನ್ ಸ್ಕೋರರ್ ಮತ್ತು ವಿಕೆಟ್ ಪಡೆದ ಬೌಲರ್ ಗೌರವ ಗಳಿಸಿದರು. ವಿನೂ ಮಂಕಡ್ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಪ್ರಶಸ್ತಿಯೂ ಅವರಿಗೆ ಒಲಿಯಿತು.
ಕಳೆದ ರಣಜಿ ಟೂರ್ನಿಯಲ್ಲಿ ಮಿಂಚಿದ್ದ ಬ್ಯಾಟರ್ ಆರ್. ಸ್ಮರಣ್ ಹಾಗೂ ವಿಜಯ್ ಹಜಾರೆ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ (651) ಮಯಂಕ್ ಅಗರವಾಲ್ ಅವರಿಗೆ ಪ್ರಶಸ್ತಿ ನೀಡಲಾಯಿತು.
ವಿವಿಧ ಟೂರ್ನಿಗಳಲ್ಲಿ ಗೆದ್ದ ಶಾಲಾ ತಂಡಗಳು ಮತ್ತು ಕ್ಲಬ್ ತಂಡಗಳಿಗೂ ಈ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಖಜಾಂಚಿಯಾಗಿ ಆಯ್ಕೆಯಾಗಿರುವ ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮಹಿಳೆಯರ 19 ವರ್ಷದೊಳಗಿನವರ ಟಿ20 ವಿಶ್ವಕಪ್ ಜಯಿಸಿದ ಭಾರತ ತಂಡದ ನಾಯಕಿಯಾಗಿದ್ದ ನಿಕಿ ಪ್ರಸಾದ್, ಆಟಗಾರ್ತಿ ಮಿಥಿಲಾ ವಿನೋದ್ ಮತ್ತು ವಿಡಿಯೊ ಅನಾಲಿಸ್ಟ್ ಮಾಲಾ ರಂಗಸ್ವಾಮಿ ಅವರಿಗೆ ತಲಾ ₹ 2 ಲಕ್ಷ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಭಾನುವಾರ ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾಲಾ ರಂಗಸ್ವಾಮಿ ನಿಕಿ ಪ್ರಸಾದ್ ಮಿಥಿಲಾ ವಿನೋದ್ ಅವರನ್ನು ಗೌರವಿಸಲಾಯಿತು. ಜಯಶ್ರೀ ಸಂಜಯ್ ಪಾಲ್ ಕೆ.ಶ್ರೀರಾಮ್ ಎಂ.ಎಸ್. ವಿನಯ್ ಇದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.