
ಅಹಮದಾಬಾದ್: ಸತತ ನಾಲ್ಕು ಗೆಲುವುಗಳಿಂದ ತುಂಬು ಆತ್ಮವಿಶ್ವಾಸದಲ್ಲಿರುವ ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ತಂಡವು ಅಜೇಯ ಓಟ ಮುಂದುವರಿಸುವತ್ತ ಚಿತ್ತ ನೆಟ್ಟಿದೆ. ಶನಿವಾರ ಎ ಗುಂಪಿನ ಪಂದ್ಯದಲ್ಲಿ ತ್ರಿಪುರ ತಂಡವನ್ನು ಎದುರಿಸಲಿದೆ.
ಗುಂಪು ಹಂತದಲ್ಲಿ ಕರ್ನಾಟಕ ತಂಡವು ಇನ್ನೂ ಮೂರು ಪಂದ್ಯಗಳಲ್ಲಿ ಆಡಬೇಕಿದೆ. ಆ ಪಂದ್ಯಗಳಲ್ಲಿ ತ್ರಿಪುರ, ರಾಜಸ್ಥಾನ ಮತ್ತು ಮಧ್ಯಪ್ರದೇಶ ತಂಡಗಳನ್ನು ಎದುರಿಸಲಿದೆ. ಗುಂಪಿನಲ್ಲಿ ತಲಾ 16 ಅಂಕ ಗಳಿಸಿರುವ ಮಧ್ಯಪ್ರದೇಶ ಮತ್ತು ಕರ್ನಾಟಕ ತಂಡಗಳು ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿವೆ. ಆದರೆ ನೆಟ್ ರನ್‌ರೇಟ್‌ನಲ್ಲಿ ಮಧ್ಯಪ್ರದೇಶ ತುಸು ಮುಂದಿದೆ.
ಮೂರು ಶತಕ ಗಳಿಸಿರುವ ದೇವದತ್ತ ಪಡಿಕ್ಕಲ್, ತಲಾ ಒಂದು ಶತಕ ಹೊಡೆದು ಲಯದಲ್ಲಿರುವ ನಾಯಕ ಮಯಂಕ್ ಮತ್ತು ಅನುಭವಿ ಕರುಣ್ ನಾಯರ್ ಅವರನ್ನು ಕಟ್ಟಿಹಾಕುವುದೇ ಎದುರಾಳಿ ಬೌಲರ್‌ಗಳಿಗೆ ದೊಡ್ಡ ಸವಾಲಾಗಲಿದೆ. ಮುಂಬರುವ ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿಯಲ್ಲಿ ಆಡುವ ಭಾರತ ತಂಡದ ಆಯ್ಕೆ ಸಮಿತಿಯ ಗಮನ ಸೆಳೆಯುವಷ್ಟು ರನ್‌ಗಳನ್ನು ದೇವದತ್ತ ಪಡಿಕ್ಕಲ್ ಮತ್ತು ಕರುಣ್ ನಾಯರ್ ಗಳಿಸಿದ್ದಾರೆ. ಅವರಿಗೆ ಅವಕಾಶ ಸಿಗುವುದೇ ಎಂಬ ಕುತೂಹಲ ಗರಿಗೆದರಿದೆ.
ಸ್ಮರಣ್ ರವಿಚಂದ್ರನ್, ಕೆ.ಎಲ್. ಶ್ರೀಜಿತ್, ಅಭಿನವ್ ಮನೋಹರ್ ಮತ್ತು ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಅವರು ತಂಡದ ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದಾರೆ. ಬೌಲಿಂಗ್‌ನಲ್ಲಿ ಕರ್ನಾಟಕ ತಂಡವು ಸ್ಥಿರ ಪ್ರದರ್ಶನ ನೀಡಬೇಕಿದೆ. ಬೌಲರ್‌ಗಳು ವಿಕೆಟ್ ಗಳಿಸುತ್ತಿದ್ದರೂ ರನ್‌ಗಳನ್ನು ಬಿಟ್ಟುಕೊಡುತ್ತಿದ್ದಾರೆ. ಈ ವಿಷಯದಲ್ಲಿ ನಿಯಂತ್ರಣ ಸಾಧಿಸಬೇಕಿದೆ.
ಆದರೆ ಮಣಿಶಂಕರ್ ಮುರಾಸಿಂಗ್ ನಾಯಕತ್ವದ ತ್ರಿಪುರ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಸಾಧಿಸಿದೆ. 8 ಅಂಕ ಗಳಿಸಿದೆ. ಉತ್ತಮ ತಂಡವೇ ಆಗಿರುವ ರಾಜಸ್ಥಾನ ಮತ್ತು ಪುದುಚೇರಿ ಎದುರು ಜಯ ಸಾಧಿಸಿರುವ ತ್ರಿಪುರ ಆಟಗಾರರು ಭರ್ತಿ ಆತ್ಮವಿಶ್ವಾಸದಲ್ಲಿದ್ದಾರೆ. ತಂಡದ ಆರಂಭಿಕ ಬ್ಯಾಟರ್ ತೇಜಸ್ವಿ ಜೈಸ್ವಾಲ್, ಉದಿಯನ್ ಬೋಸ್ ಮತ್ತು ಶ್ರೀದಾಮ್ ಪೌಲ್ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆಲ್‌ರೌಂಡರ್ ವಿಜಯಶಂಕರ್ ಅವರು ಬೌಲಿಂಗ್‌ನಲ್ಲಿ ಮಿಂಚಿದ್ದಾರೆ. ಆದರೆ ಬ್ಯಾಟಿಂಗ್‌ನಲ್ಲಿ ಲಯಕ್ಕೆ ಮರಳುವ ಪ್ರಯತ್ನದಲ್ಲಿದ್ದಾರೆ.
ಪಂದ್ಯ ಆರಂಭ: ಬೆಳಿಗ್ಗೆ 9
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.