ದೇವದತ್ತ ಪಡಿಕ್ಕಲ್ (ಸಂಗ್ರಹ ಚಿತ್ರ)
ವಡೋದರಾ: ಆಸ್ಟ್ರೇಲಿಯಾ ಪ್ರವಾಸದಿಂದ ಮರಳಿ ಬಂದ ನಂತರ ದೇಶಿ ಕ್ರಿಕೆಟ್‌ನಲ್ಲಿ ಮೊದಲ ಪಂದ್ಯವಾಡಿದ ದೇವದತ್ತ ಪಡಿಕ್ಕಲ್ ಶತಕ ಸಂಭ್ರಮ ಆಚರಿಸಿದರು. ಅವರ ಅಮೋಘ ಬ್ಯಾಟಿಂಗ್ ಬಲದಿಂದ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿತು.
ನಾಲ್ಕು ಬಾರಿಯ ಚಾಂಪಿಯನ್ ಕರ್ನಾಟಕ ತಂಡವು ಶನಿವಾರ ಮೋತಿಭಾಗ್‌ನಲ್ಲಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಬರೋಡಾ ತಂಡದ ಎದುರು 5 ರನ್‌ಗಳಿಂದ ರೋಚಕ ಜಯ ಸಾಧಿಸಿತು. ಟಾಸ್ ಗೆದ್ದ ಬರೋಡಾ ತಂಡದ ನಾಯಕ ಕೃಣಾಲ್ ಪಾಂಡ್ಯ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ನಿಕಿನ್ ಜೋಸ್ ಅವರಿಗೆ ವಿಶ್ರಾಂತಿ ನೀಡಿದ ಕರ್ನಾಟಕ ತಂಡಕ್ಕೆ ನಾಯಕ ಮಯಂಕ್ ಅಗರವಾಲ್ ಮತ್ತು ದೇವದತ್ತ ಇನಿಂಗ್ಸ್ ಆರಂಭಿಸಿದರು.
ಕ್ರೀಸ್‌ಗೆ ಬಂದವರೇ ದೇವದತ್ತ ರನ್ ಸೂರೆ ಮಾಡಲು ಆರಂಭಿಸಿದರು. ಈ ಟೂರ್ನಿಯಲ್ಲಿ ನಾಲ್ಕು ಶತಕ ಹೊಡೆದಿರುವ ಮಯಂಕ್ (6; 15ಎ) ಅವರ ಆಟಕ್ಕೆ ತಡೆಯೊಡ್ಡುವಲ್ಲಿ ಲಕ್ಮನ್ ಮೆರಿವಾಲಾ ಯಶಸ್ವಿಯಾದರು. ಐದನೇ ಓವರ್‌ನಲ್ಲಿ ಮಯಂಕ್ ಪೆವಿಲಿಯನ್ ಸೇರಿದರು.
ಆತ್ಮವಿಶ್ವಾಸದಿಂದ ಆಡುತ್ತಿದ್ದ ಪಡಿಕ್ಕಲ್ (102; 99ಎ) ಅವರೊಂದಿಗೆ ಸೇರಿಕೊಂಡ ಕೆ.ವಿ. ಅನೀಶ್ 2ನೇ ವಿಕೆಟ್ ಜೊತೆಯಾಟದಲ್ಲಿ 130 ರನ್ ಸೇರಿಸಿದರು. ಇದರಿಂದಾಗಿ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 281 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಬರೋಡಾ ತಂಡಕ್ಕೆ 49.5 ಓವರ್‌ಗಳಲ್ಲಿ 276 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ತಂಡದ ಆರಂಭಿಕ ಬ್ಯಾಟರ್ ಶಾಶ್ವತ್ ರಾವತ್ (104; 126ಎ, 4X9, 6X1) ಮತ್ತು ಅತಿಥ್ ಶೇಟ್ (56; 59ಎ, 4X7, 6X1) ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಕರ್ನಾಟಕದ ಬೌಲರ್‌ಗಳಾದ ಕೌಶಿಕ್, ಪ್ರಸಿದ್ಧಕೃಷ್ಣ, ಅಭಿಲಾಷ್ ಶೆಟ್ಟಿ ಹಾಗೂ ಶ್ರೇಯಸ್ ತಲಾ 2 ವಿಕೆಟ್ ಗಳಿಸಿದರು.
ಆಸ್ಟ್ರೇಲಿಯಾ ಎ ವಿರುದ್ಧದ ಸರಣಿಯಲ್ಲಿ ಆಡಿದ್ದರು. ನಂತರ ಬಾರ್ಡರ್–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತ ತಂಡದಲ್ಲಿಯೂ ಇದ್ದರು. ಆ ಅನುಭವದೊಂದಿಗೆ ಮರಳಿದ್ದ ಅವರು ಇಲ್ಲಿ ಸೊಗಸಾದ ಶತಕ ಬಾರಿಸಿದರು. ಬೆಂಗಳೂರಿನ ಎಡಗೈ ಬ್ಯಾಟರ್ 15 ಬೌಂಡರಿ, 2 ಸಿಕ್ಸರ್ ಸಿಡಿಸಿದರು. ಅನೀಶ್ 64 ಎಸೆತಗಳಲ್ಲಿ 52 ರನ್ ಗಳಿಸಿದರು. 4 ಬೌಂಡರಿ, 1 ಸಿಕ್ಸರ್ ಹೊಡೆದರು.
ಅಭಿನವ್ ಮನೋಹರ್ (21; 18ಎ) ಮತ್ತು ಶ್ರೇಯಸ್ ಗೋಪಾಲ್ (16; 12ಎ) ಚುರುಕಾಗಿ ಬ್ಯಾಟಿಂಗ್ ಮಾಡಿ ತಂಡದ ಮೊತ್ತ ಹೆಚ್ಚಿಸಿದರು.
ಕರ್ನಾಟಕ: 50 ಓವರ್‌ಗಳಲ್ಲಿ 8ಕ್ಕೆ281 (ದೇವದತ್ತ ಪಡಿಕ್ಕಲ್ 102, ಕೆ.ವಿ. ಅನೀಶ್ 52, ಸ್ಮರಣ್ ಆರ್. 28, ಕೆ.ಎಲ್. ಶ್ರೀಜಿತ್ 28, ಅಭಿನವ್ ಮನೋಹರ್ 21, ರಾಜ್ ಲಿಂಬಾನಿ 47ಕ್ಕೆ3, ಅತಿಥ್ ಸೇಠ್ 41ಕ್ಕೆ3)
ಬರೋಡಾ: 49.5 ಓವರ್‌ಗಳಲ್ಲಿ 276 (ಶಾಶ್ವತ್ ರಾವತ್ 104, ಅತಿಥ್ ಶೇಠ್ 56, ಕೃಣಾಲ್ ಪಾಂಡ್ಯ 30, ಭಾನು ಪನಿಯಾ 22, ಭಾರ್ಗವ್ ಭಟ್ 20, ವಿ. ಕೌಶಿಕ್ 39ಕ್ಕೆ2, ಪ್ರಸಿದ್ಧ ಕೃಷ್ಣ 60ಕ್ಕೆ2, ಅಭಿಲಾಷ್ ಶೆಟ್ಟಿ 70ಕ್ಕೆ2, ಶ್ರೇಯಸ್ ಗೋಪಾಲ್ 38ಕ್ಕೆ2)
ಫಲಿತಾಂಶ: ಕರ್ನಾಟಕ ತಂಡಕ್ಕೆ 5 ರನ್‌ಗಳ ಜಯ. ಪಂದ್ಯಶ್ರೇಷ್ಠ: ದೇವದತ್ತ ಪಡಿಕ್ಕಲ್.
ಇಂದಿನ ಕ್ವಾರ್ಟರ್‌ಫೈನಲ್
ಗುಜರಾತ್ –ಹರಿಯಾಣ
ವಿದರ್ಭ–ರಾಜಸ್ಥಾನ
ಆರಂಭ: ಬೆಳಿಗ್ಗೆ 9.
ವಡೋದರಾ: ಅರಿಷಿನ್ ಕುಲಕರ್ಣಿ (107; 137ಎ, 4X14) ಅವರ ಶತಕದ ಬಲದಿಂದ ಮಹಾರಾಷ್ಟ್ರ ತಂಡವು ಕ್ವಾರ್ಟರ್‌ಫೈನಲ್‌ನಲ್ಲಿ 70 ರನ್‌ಗಳಿಂದ ಪಂಜಾಬ್ ಎದುರು ಜಯಿಸಿತು. ಕೊತಂಬಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
ಮಹಾರಾಷ್ಟ್ರ ತಂಡವು 50 ಓವರ್‌ಗಳಲ್ಲಿ 6ಕ್ಕೆ275 ರನ್ ಗಳಿಸಿತು. ಅದಕ್ಕುತ್ತರವಾಗಿ ಪಂಜಾಬ್ ತಂಡವು 44.4 ಓವರ್‌ಗಳಲ್ಲಿ 205 ರನ್ ಗಳಿಸಿ ಸೋತಿತು. ಮುಕೇಶ್ ಚೌಧರಿ 3 ಮತ್ತು ಪ್ರದೀಪ್ ದಾಧೆ 2 ವಿಕೆಟ್ ಗಳಿಸಿದರು.
ಸಂಕ್ಷಿಪ್ತ ಸ್ಕೋರು: ಮಹಾರಾಷ್ಟ್ರ: 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 275 (ಅರಿಷಿನ್ ಕುಲಕರ್ಣಿ 107, ಅಂಕಿತ್ ಭಾವ್ನೆ 60, ನಿಖಿಲ್ ನಾಯಕ್ ಔಟಾಗದೆ 52, ಸತ್ಯಜೀತ್ ಬಚಾವ್ ಔಟಾಗದೇ 20, ಅರ್ಷದೀಪ್ ಸಿಂಗ್ 56ಕ್ಕೆ3, ನಮನ್ ಧೀರ್ 29ಕ್ಕೆ2)
ಪಂಜಾಬ್: 44.4 ಓವರ್‌ಗಳಲ್ಲಿ 205 (ಅನ್ಮೋಲ್‌ಪ್ರೀತ್ ಸಿಂಗ್ 48, ಸನ್ವೀರ್ ಸಿಂಗ್ 24, ಅರ್ಷದೀಪ್ ಸಿಂಗ್ 49, ಮುಕೇಶ್ ಚೌಧರಿ 44ಕ್ಕೆ3, ಪ್ರದೀಪ್ ದಾಧೆ 31ಕ್ಕೆ2)
ಫಲಿತಾಂಶ: ಮಹಾರಾಷ್ಟ್ರ ತಂಡಕ್ಕೆ 70 ರನ್ ಜಯ.
ಮಾಹಿತಿ: ಬಿಸಿಸಿಐ ಡಾಟ್ ಟಿವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.