
ಬೆಂಗಳೂರು: ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಅವರಿಗೆ ಬೆಂಗಳೂರು ಎಂದರೆ ಎರಡನೇ ತವರಿದ್ದಂತೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಳೆದ ಹತ್ತೊಂಬತ್ತು ವರ್ಷಗಳಿಂದ ಆಡುತ್ತಿರುವ ವಿರಾಟ್ ಬೆಂಗಳೂರಿನ ಒಂದು ಪೀಳಿಗೆಯನ್ನೇ ಪ್ರಭಾವಿಸಿರುವ ಆಟಗಾರ. ಅವರಿಗಾಗಿ ಮಿಡಿಯುವ ದೊಡ್ಡ ಅಭಿಮಾನಿ ಬಳಗವೇ ಉದ್ಯಾನನಗರಿಯಲ್ಲಿದೆ.
ಆದರೆ; ಜೂನ್ 4ರಂದು ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದಿದ್ದ ಕಾಲ್ತುಳಿತ ಪ್ರಕರಣದಿಂದಾಗಿ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳು ನಡೆದಿಲ್ಲ. ಇದೀಗ ಮತ್ತೆ ಕೊಹ್ಲಿ ಆಟವನ್ನು ಚಿನ್ನಸ್ವಾಮಿ ಅಂಗಳದಲ್ಲಿ ನೋಡುವ ಅವಕಾಶ ಕೂಡಿ ಬಂದಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಡಿ ಗುಂಪಿನ ಪಂದ್ಯ ನಡೆಯಬೇಕಿತ್ತು. ಅದರಲ್ಲಿ ಆಂಧ್ರದ ಎದುರು ಆಡುವ ದೆಹಲಿ ತಂಡದಲ್ಲಿ ವಿರಾಟ್ ಕಣಕ್ಕಿಳಿಯಬೇಕಿತ್ತು. ಅದನ್ನು ನೋಡಲು ಸಾವಿರಾರು ಅಭಿಮಾನಿಗಳು ತವಕಿಸಿದ್ದರು. ಆದರೆ ಸುರಕ್ಷತೆಯ ಕಾರಣದಿಂದಾಗಿ ಪಂದ್ಯವು ನಗರದ ಹೊರವಲಯದಲ್ಲಿರುವ ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಕ್ರೀಡಾಂಗಣಕ್ಕೆ ಸ್ಥಳಾಂತರಗೊಂಡಿದೆ. ಅಲ್ಲಿ ಪ್ರೇಕ್ಷಕರಿಗೆ ಪ್ರವೇಶವಿಲ್ಲ.
ಆದರೆ ಬಿಸಿಸಿಐ ಈಚೆಗೆ ಮಾಡಿರುವ ನಿಯಮದ ಅನ್ವಯ ಅಂತರರಾಷ್ಟ್ರೀಯ ಪಂದ್ಯಗಳಿಂದ ಬಿಡುವು ಸಿಕ್ಕಾಗ ದೇಶಿ ಟೂರ್ನಿಗಳಲ್ಲಿ ಖ್ಯಾತನಾಮ ಆಟಗಾರರು ಆಡುವುದು ಕಡ್ಡಾಯ. ಟೂರ್ನಿಯಲ್ಲಿ ಕನಿಷ್ಠ ಎರಡು ಪಂದ್ಯಗಳನ್ನಾದರೂ ಆಡಲೇ ಬೇಕು. ಟೆಸ್ಟ್ ಮತ್ತು ಟಿ20 ಮಾದರಿಗಳಿಂದ ನಿವೃತ್ತರಾಗಿರುವ ಕೊಹ್ಲಿ ಏಕದಿನ ತಂಡದಲ್ಲಿದ್ದಾರೆ. ಆದ್ದರಿಂದ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿದ್ದಾರೆ. ವಿರಾಟ್ ಅವರು ಈ ಪಂದ್ಯದಲ್ಲಿ ಒಂದು ರನ್ ಗಳಿಸಿದರೆ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 16 ಸಾವಿರ ರನ್ ಪೇರಿಸಿದ ಆಟಗಾರರ ಸಾಲಿಗೆ ಸೇರಲಿದ್ದಾರೆ.
ವಿಕೆಟ್‌ಕೀಪರ್–ಬ್ಯಾಟರ್ ರಿಷಭ್ ಪಂತ್ ನಾಯಕತ್ವದಲ್ಲಿ ದೆಹಲಿ ತಂಡವು ಕಣಕ್ಕಿಳಿಯಲಿದೆ. ಆಂಧ್ರ ತಂಡವನ್ನು ಯುವ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಮುನ್ನಡೆಸುವರು.
ಆದರೆ ರಿಷಭ್ ಅವರು ಕಳೆದ ಒಂದು ವರ್ಷದಿಂದ ಸೀಮಿತ ಓವರ್‌ಗಳ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿಲ್ಲ. ದೆಹಲಿ ತಂಡದಲ್ಲಿ ಅನುಭವಿ ವೇಗಿ ಇಶಾಂತ್ ಶರ್ಮಾ, ನವದೀಪ್ ಸೈನಿ, ಬ್ಯಾಟರ್ ಆಯುಷ್ ಬಡೋನಿ, ಐಪಿಎಲ್‌ನಲ್ಲಿ ಮಿಂಚಿದ್ದ ಪ್ರಿಯಾಂಶ್ ಆರ್ಯ, ಯಶ್ ದುಳ್ ಅವರೂ ಇದ್ದಾರೆ.
ಆಂಧ್ರ ತಂಡದಲ್ಲಿ ರಿಕಿ ಭಯ್, ಅಶ್ವಿನ್ ಹೆಬ್ಬಾರ್, ಸೌರಭ್ ಕುಮಾರ್ ಅವರು ಪ್ರಮುಖರಾಗಿದ್ದಾರೆ. ಮೇಲ್ನೋಟಕ್ಕೆ ದೆಹಲಿ ತಂಡವೇ ಬಲಾಢ್ಯವಾಗಿದೆ. ವಿರಾಟ್ ಕೂಡ ಇರುವುದರಿಂದ ದೆಹಲಿ ತಂಡದ ಶಕ್ತಿ ದುಪ್ಪಟ್ಟಾಗುವ ನಿರೀಕ್ಷೆ ಇದೆ. 2010ರಲ್ಲಿ ವಿರಾಟ್ ಕೊನೆ ಬಾರಿ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಆಡಿದ್ದರು.
ಡಿ ಗುಂಪಿನ ಮೂರು ಪಂದ್ಯಗಳು (ಗುಜರಾತ್–ಸರ್ವಿಸಸ್, ಹರಿಯಾಣ–ರೈಲ್ವೆಸ್ ಹಾಗೂ ಒಡಿಶಾ –ಸೌರಾಷ್ಟ್ರ) ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಲಿವೆ.
ಪಂದ್ಯ ಆರಂಭ: ಬೆಳಿಗ್ಗೆ 9
ಕಣದಲ್ಲಿ ರೋಹಿತ್ ಶರ್ಮಾ
ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರೂ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಆಡಲಿದ್ದಾರೆ. ಜೈಪುರದಲ್ಲಿ ನಡೆಯಲಿರುವ ಸಿ ಗುಂಪಿನ ಪಂದ್ಯದಲ್ಲಿ ಅವರು ಮುಂಬೈ ತಂಡದಲ್ಲಿ ಆಡಲಿದ್ದಾರೆ. ಸಿಕ್ಕಿಂ ಎದುರು ಪಂದ್ಯ ನಡೆಯಲಿದೆ. ಶಾರ್ದೂಲ್ ಠಾಕೂರ್ ನಾಯಕತ್ವದ ಮುಂಬೈ ತಂಡದಲ್ಲಿ ಸರ್ಫರಾಜ್ ಖಾನ್ ಮುಷೀರ್ ಖಾನ್ ತನುಷ್ ಕೋಟ್ಯಾನ್ ಶಮ್ಸ್ ಮುಲಾನಿ ಅವರಂತಹ ಅನುಭವಿಗಳೂ ಆಡುತ್ತಿದ್ದಾರೆ. ಇದರಿಂದಾಗಿ ಲೀ ಯಾಂಗ್ ಲೆಪ್ಚಾ ನಾಯಕತ್ವದ ತಂಡವು ಮುಂಬೈಗೆ ಸುಲಭದ ತುತ್ತಾಗುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.