
ಕ್ರಿಕೆಟ್
(ಸಾಂಕೇತಿಕ ಚಿತ್ರ)
ಬೆಂಗಳೂರು: ಕರ್ನಾಟಕ ತಂಡದ ಆರಂಭ ಆಟಗಾರ ಆರ್. ರೋಹಿತ್ ರೆಡ್ಡಿ ಹಾಗೂ ಆಲ್‌ರೌಂಡರ್ ಸುಕೃತ್ ಜೆ. ಅವರು ವಿಜಯ್ ಮರ್ಚೆಂಟ್ ಟ್ರೋಫಿ (16 ವರ್ಷದೊಳಗಿನವರ) ಕ್ರಿಕೆಟ್ ಟೂರ್ನಿಯ ಬರೋಡಾ ವಿರುದ್ಧದ ಪಂದ್ಯದಲ್ಲಿ ಅಂತಿಮ ದಿನವಾದ ಶನಿವಾರ ಶತಕ ಗಳಿಸಿ ಅಜೇಯವಾಗಿ ಉಳಿದರು. ಅದರೊಂದಿಗೆ, ರಾಯಪುರದ ಶಹೀದ್ ವೀರ ನಾರಾಯಣ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಎಲೀಟ್ ಡಿ ಗುಂಪಿನ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತು.
1 ವಿಕೆಟ್‌ಗೆ 6 ರನ್‌ಗಳೊಂದಿಗೆ ಆಟ ಮುಂದುವರಿಸಿದ ರಾಜ್ಯ ತಂಡವು 65 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಕುಸಿಯುವ ಭೀತಿಯಲ್ಲಿತ್ತು. ಆಗ, ರೋಹಿತ್–ಸುಕೃತ್ ಜೋಡಿ ಮುರಿಯದ ಆರನೇ ವಿಕೆಟ್ ಜೊತೆಯಾಟದಲ್ಲಿ 172 ರನ್ ಸೇರಿಸಿದರು.
ಟೂರ್ನಿಯಲ್ಲಿ ರಾಜ್ಯ ತಂಡಕ್ಕೆ ಇದು ಸತತ ಮೂರನೇ ಡ್ರಾ ಆಗಿದೆ. ಮಧ್ಯ ಪ್ರದೇಶ ಹಾಗೂ ಉತ್ತರಾಖಂಡ ವಿರುದ್ಧ ಡ್ರಾ ಮಾಡಿಕೊಂಡಿದ್ದ ಆರೂಷ್ ಜೈನ್ ಪಡೆಯು ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ 3 ಅಂಕ ಪಡೆಯಿತು. ಆದರೂ, 9 ಪಾಯಿಂಟ್ಸ್‌ಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಸೀಮಿತವಾಯಿತು. ಆಂಧ್ರ ಪ್ರದೇಶ ಹಾಗೂ ಮಧ್ಯ ಪ್ರದೇಶ ತಂಡಗಳು ತಲಾ 13 ಅಂಕಗಳೊಂದಿಗೆ ಮೊದಲೆರಡು ಸ್ಥಾನಗಳಲ್ಲಿವೆ.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಕರ್ನಾಟಕ: 234; ಬರೋಡಾ: 177; ಎರಡನೇ ಇನಿಂಗ್ಸ್: ಕರ್ನಾಟಕ: 81.5 ಓವರ್‌ಗಳಲ್ಲಿ 5 ವಿಕೆಟ್‌ಗೆ 237 (ಆರ್. ರೋಹಿತ್ ರೆಡ್ಡಿ ಔಟಾಗದೇ 105, ಸುಕೃತ್ ಜೆ. ಔಟಾಗದೇ 100; ಯುವರಾಜ್ ಸಿನ್ಹ್ 40ಕ್ಕೆ2). ಫಲಿತಾಂಶ: ಪಂದ್ಯ ಡ್ರಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.