
ಬೆಂಗಳೂರು: ಮೂರನೇ ಕ್ರಮಾಂಕದ ಆಟಗಾರ ಟಿ.ಹರ್ಷ ಸಾಯಿ ಸಾತ್ವಿಕ್ (133, 217ಎ, 4x11, 6x1) ಮತ್ತು ನಾಯಕ ಕೆ.ಭಾನು ಶ್ರೀಹರ್ಷ (174, 223ಎ, 4x16, 6x6) ಅವರ ಅಮೋಘ ಶತಕಗಳ ನೆರವಿನಿಂದ ಆಂಧ್ರ ಪ್ರದೇಶದ ತಂಡ ವಿಜಯ್ ಮರ್ಚೆಂಟ್ ಟ್ರೋಫಿ (16 ವರ್ಷದೊಳಗಿನವರ) ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡದ ಎದುರು ಹೋರಾಟ ತೋರಿತು.
ಆದರೆ ಛತ್ತೀಸಗಢದ ಭಿಲಾಯಿಯಲ್ಲಿ ‘ಡ್ರಾ’ ಆದ ಈ ಮೂರು ದಿನಗಳ ಪಂದ್ಯದಲ್ಲಿ ಕರ್ನಾಟಕ 64 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಪಡೆದು ಮೂರು ಪಾಯಿಂಟ್ಸ್ ಪಡೆಯಿತು. ಆಂಧ್ರ ಒಂದು ಪಾಯಿಂಟ್ ಗಳಿಸಿತು. ಸತತ ನಾಲ್ಕನೇ ಡ್ರಾ ದಿಂದಾಗಿ ಕರ್ನಾಟಕ, ಆರು ತಂಡಗಳ ‘ಡಿ’ ಗುಂಪಿನಲ್ಲಿ 12 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕಿಳಿಯಿತು. ಮಧ್ಯಪ್ರದೇಶ (20) ಮತ್ತು ಆಂಧ್ರ (14) ಮೊದಲ ಎರಡು ಸ್ಥಾನ ಪಡೆದಿವೆ. ಇನ್ನೊಂದು ಸುತ್ತಿನ ಪಂದ್ಯ ಉಳಿದಿದೆ.
ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್‌ಗೆ 473 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಇದಕ್ಕೆ ಉತ್ತರವಾಗಿ ಬುಧವಾರ ಎರಡನೇ ದಿನದಾಟದ ಕೊನೆಗೆ 2 ವಿಕೆಟ್‌ಗೆ 189 ರನ್ ಗಳಿಸಿದ್ದ ಆಂಧ್ರ ಮೊದಲ ಇನಿಂಗ್ಸ್‌ನಲ್ಲಿ 409 ರನ್ ಗಳಿಸಿತು. ಹರ್ಷ ಸಾಯಿ ಮತ್ತು ಭಾನು ಶ್ರೀಹರ್ಷ ಅವರು ಮೂರನೆ ವಿಕೆಟ್‌ಗೆ 273 ರನ್ ಸೇರಿಸಿ ದ್ದರಿಂದ ಕರ್ನಾಟಕದ ಗೆಲುವಿನಾಸೆ ಮೊದಲ ಅವಧಿಯಲ್ಲೇ ಕರಗಿತು.
ಕರ್ನಾಟಕದ ಕಡೆ ಸ್ಪಿನ್ನರ್‌ಗಳಾದ ಸಮರ್ಥ ಕುಲಕರ್ಣಿ ಮತ್ತು ಸುವಿಕ್ ಗಿಲ್ ತಲಾ ಮೂರು ವಿಕೆಟ್‌ಗಳನ್ನು ಪಡೆದರು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಕರ್ನಾಟಕ: 9 ವಿಕೆಟ್‌ಗೆ 473 ಡಿ; ಆಂಧ್ರ: 132.3 ಓವರುಗಳಲ್ಲಿ 409 (ಟಿ.ಹರ್ಷ ಸಾಯಿ ಸಾತ್ವಿಕ್ 133, ಕೆ.ಭಾನು ಶ್ರೀಹರ್ಷ 174, ರಿಶಿ ಕುಮಾರ್ ರೆಡ್ಡಿ ಔಟಾಗದೇ 26; ಸಮರ್ಥ ಕುಲಕರ್ಣಿ 64ಕ್ಕೆ3, ಸುವಿಕ್ ಗಿಲ್ 91ಕ್ಕೆ3).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.