ADVERTISEMENT

ವಿನಯಕುಮಾರ್‌ಗೆ ಕೋಚ್ ಆಗುವ ಸಾಮರ್ಥ್ಯವಿದೆ: ಪ್ರಕಾಶ್

ದಾವಣಗೆರೆಯ ಕೋಚ್ ಪ್ರಕಾಶ್ ಎಲ್.ಎಂ. ಹೇಳಿಕೆ

ಡಿ.ಕೆ.ಬಸವರಾಜು
Published 27 ಫೆಬ್ರುವರಿ 2021, 2:14 IST
Last Updated 27 ಫೆಬ್ರುವರಿ 2021, 2:14 IST
ವಿನಯ್‌ಕುಮಾರ್ ಜೊತೆ ಕೋಚ್ ಪ್ರಕಾಶ್
ವಿನಯ್‌ಕುಮಾರ್ ಜೊತೆ ಕೋಚ್ ಪ್ರಕಾಶ್   

ದಾವಣಗೆರೆ: ‘ದಾವಣಗೆರೆ ಜಿಲ್ಲೆಗೆ ಅಷ್ಟೇ ಅಲ್ಲ. ಇಡೀ ಕರ್ನಾಟಕಕ್ಕೆ ಅಪಾರ ಹೆಸರು ಹಾಗೂ ಕೀರ್ತಿ ತಂದುಕೊಟ್ಟ ಹಿರಿಮೆ ವಿನಯಕುಮಾರ್ ಅವರದು. ಜಿಲ್ಲೆಗೆ ಬಂದಾಗ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ಅಭ್ಯಾಸ ಮಾಡಲು ಹೋಗುತ್ತಿದ್ದರು. ಆಗ ಅಲ್ಲಿಗೆ ಹೆಚ್ಚಿನ ಅಭಿಮಾನಿಗಳು ಬಂದು ಮಾತನಾಡಿಸಿ ಶುಭಾಶಯ ಕೋರುತ್ತಿದ್ದರು’ ಎಂದು ವಿನಯಕುಮಾರ್ ಅವರ ಕೋಚ್ ಪ್ರಕಾಶ್ ಎಲ್.ಎಂ. ‘ಪ್ರಜಾವಾಣಿ’ಯ ಜೊತೆ ನೆನಪು ಹಂಚಿಕೊಂಡರು.

‘ಇಲ್ಲಿನ ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ನಿರ್ಮಾಣವಾಗುತ್ತಿರುವಕೆಎಸ್‌ಸಿಎ ಸ್ಟೇಡಿಯಂ ಭೂಮಿಪೂಜೆಗೆ ದಾವಣಗೆರೆಗೆ ಬಂದಾಗಲಂತೂ ಪುಟ್ಟ ಮಕ್ಕಳಿಂದ ಎಲ್ಲರೂ ಬಂದು ಮಾತನಾಡಿಸಿ ಹೋಗುತ್ತಿದ್ದರು. ಭಾರತ ತಂಡಕ್ಕೆ ಆಯ್ಕೆಯಾದ ವೇಳೆ ಇಡೀ ದಾವಣಗೆರೆಯಲ್ಲಿ ಹಬ್ಬದಂತೆ ಸಂಭ್ರಮಿಸಿದ್ದನ್ನು ಮರೆಯಲು ಸಾಧ್ಯವಿಲ್ಲ. ತುಂಬಾ ಅಭಿಮಾನಿಗಳು ಇದ್ದಾರೆ’ ಎನ್ನುತ್ತಾರೆ.

‘ದಾವಣಗೆರೆಯಲ್ಲಿ ಯುನೈಟೆಡ್ ಕ್ರಿಕೆಟರ್ಸ್ ತಂಡದಲ್ಲಿ ಆಟವಾಡಲು ಆರಂಭಿಸಿ, ರಣಜಿ ಟ್ರೋಫಿಗೆ ಹೋಗುವವರಿಗೂ ತುಮಕೂರು ವಲಯದಿಂದ ಆಡುತ್ತಿದ್ದರು. ಆ ಬಳಿಕ ವಿಜಯಾ ಬ್ಯಾಂಕ್‌ನಲ್ಲಿ ಕೆಲಸವೂ ಸಿಕ್ಕಿತು.

ADVERTISEMENT

‘ಇನ್ನೂ ಎರಡು ವರ್ಷ ಕ್ರಿಕೆಟ್‌ ಆಡಬೇಕಿತ್ತು ಎನಿಸುತ್ತಿತ್ತು. ಅವರು ಭವಿಷ್ಯದ ಯೋಜನೆ ಹಾಗೂ ರಾಜ್ಯದ ಯುವ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎನ್ನುವ ದೃಷ್ಟಿಯಿಂದಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದಾರೆ. ವಿನಯಕುಮಾರ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ವೇಳೆವೆಂಕಟೇಶ್ ಪ್ರಸಾದ್ ಅವರು ನಿವೃತ್ತರಾಗಿದ್ದರು’ ಎಂದು ಸ್ಮರಿಸಿದರು.

‘ಎರಡು ವರ್ಷಗಳಲ್ಲಿ 6 ಟ್ರೋಫಿ ಗೆದ್ದುಕೊಟ್ಟ ಏಕೈಕ ನಾಯಕ ವಿನಯಕುಮಾರ್. ಯಶಸ್ವಿ ನಾಯಕನಾಗಿರುವುದರಿಂದ ಕೋಚ್ ಆಗುವ ಎಲ್ಲಾ ಗುಣಲಕ್ಷಣಗಳು ಇವೆ. ಅದೇ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ಅನಿಸಿಕೆ ಹಂಚಿಕೊಂಡರು.

ಸಾಲು ಟ್ರೋಫಿ ಗೆದ್ದಿದ್ದು ಖುಷಿ

‘ಚಿಕ್ಕ ವಯಸ್ಸಿನಿಂದಲೂ ಆಟ ಶುರು ಮಾಡಿದ್ದ. ಕರ್ನಾಟಕ, ಭಾರತ ತಂಡದಲ್ಲಿ ಆಡಿ ಬಹುಮಾನಗಳನ್ನು ಗೆದ್ದಿದ್ದಾನೆ. ರಣಜಿ ತಂಡದಲ್ಲಿ ನಿರಂತರವಾಗಿ ಕಪ್‌ಗಳನ್ನು ಗೆದ್ದಿದ್ದು ಹೆಚ್ಚಿನ ಖುಷಿ ಕೊಡುತ್ತದೆ. ಅವಕಾಶ ಇದ್ದಿದ್ದರೆ ಇನ್ನಷ್ಟು ದಿವಸ ಆಡಿ ಹೆಚ್ಚಿನ ಸಾಧನೆ ಮಾಡಬಹುದಿತ್ತು. ಮಗ ಮನೆಯಲ್ಲಿರುತ್ತಾನೆ ಎಂಬುದು ಮತ್ತೊಂದು ಖುಷಿ. ಮುಂದೆ ಯಾವ ನಿರ್ಧಾರ ಕೈಗೊಳ್ಳುತ್ತಾನೋ ಗೊತ್ತಿಲ್ಲ’ ಎನ್ನುತ್ತಾರೆ ವಿನಯ್‌ ಕುಮಾರ್‌ ಅವರ ತಾಯಿ ಸೌಭಾಗ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.