ADVERTISEMENT

ರೋಹಿತ್ ಶರ್ಮಾ ಜತೆ ಮನಸ್ತಾಪ ಇಲ್ಲ: ವಿರಾಟ್ ಕೊಹ್ಲಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2019, 14:01 IST
Last Updated 29 ಜುಲೈ 2019, 14:01 IST
   

ಮುಂಬೈ: ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳುವ ಮುನ್ನ ಸುದ್ದಿಗೋಷ್ಠಿ ನಡೆಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ತಂಡದಲ್ಲಿ ಭಿನ್ನಾಭಿಪ್ರಾಯಗಳೇನೂ ಇಲ್ಲ. ಈಗ ಕೇಳಿ ಬಂದಿದ್ದೆಲ್ಲ ವದಂತಿ ಎಂದು ಹೇಳಿದ್ದಾರೆ.

ಟೀಂ ಇಂಡಿಯಾ ಉಪ ನಾಯಕ ರೋಹಿತ್ ಶರ್ಮಾ ಮತ್ತು ನಾಯಕ ವಿರಾಟ್ ಕೊಹ್ಲಿ ನಡುವೆ ಶೀತಲ ಸಮರವೇರ್ಪಟ್ಟಿದೆ ಎಂದು ವದಂತಿ ಹಬ್ಬಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಕೊಹ್ಲಿ, ಈ ರೀತಿಯ ಸುದ್ದಿಗಳನ್ನು ಓದಿನಾನು ದಿಗ್ಭ್ರಮೆಗೊಂಡಿದ್ದೇನೆ.ನಾವು ಯಾವ ರೀತಿ ಆಡಿದ್ದೇವೆ ಎಂಬುದರ ಬಗ್ಗೆ ಜನರು ಮಾತನಾಡುತ್ತಾರೆ.ಆದರೆ ಇಲ್ಲಿ ಸುಳ್ಳು ಸುದ್ದಿ ಹಬ್ಬುತ್ತಾ ಋಣಾತ್ಮಕ ವಿಷಯಗಳ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಕೊಹ್ಲಿ ಹೇಳಿದ್ದಾರೆ.

ನಾನೂ ಇದನ್ನು ನೋಡುತ್ತಾ ಇದ್ದೇನೆ, ಈ ರೀತಿಯ ವಿಷಯಗಳನ್ನು ಜನರು ಸೃಷ್ಟಿಸುತ್ತಿರುವುದು ದುರದೃಷ್ಟಕರ. ನೀವು ಡ್ರೆಸ್ಸಿಂಗ್ ರೂಂಗೆ ಬಂದರೆ ತಿಳಿಯುತ್ತದೆ ಅಲ್ಲಿನ ವಾತಾವರಣ ಹೇಗಿದೆ ಎಂಬುದು.ಇಂತಾ ಸುಳ್ಳುಗಳು ನಿಜ ಸುದ್ದಿಯಂತೆಯೇಇರುತ್ತವೆ.

ADVERTISEMENT

ಟೀಂ ಇಂಡಿಯಾವನ್ನು ಉನ್ನತ ಸ್ಥಾನಕ್ಕೇರಿಸುವ ಬಗ್ಗೆಯೇ ನಾವು ಚಿಂತಿಸುತ್ತಿದ್ದೇವೆ. ಆದರೆ ಇಲ್ಲಿ ಕೆಲವರು ನಮ್ಮನ್ನು ಕೆಳಗೆಳೆಯಲು ಯತ್ನಿಸುತ್ತಿದ್ದಾರೆ. ನಾವು ಹಿರಿಯ ಆಟಗಾರರು.ಡ್ರೆಸ್ಸಿಂಗ್ ರೂಂ ಬಗ್ಗೆ ಜನರು ಇಲ್ಲ ಸಲ್ಲದ ಸುಳ್ಳು ಹಬ್ಬಿಸುತ್ತಿದ್ದಾರೆ.ಇದು ಆಕ್ಷೇಪಾರ್ಹ.ನಮ್ಮ ತಂಡದಲ್ಲಿ ಅಂತದ್ದೇನೂ ನಡೆದಿಲ್ಲ. ಡ್ರೆಸ್ಸಿಂಗ್ ರೂಂನಲ್ಲಿ ಅಂತದ್ದೊಂದು ವಾತಾವರಣ ಇದ್ದಿದ್ದರೆ ನಾವು ಉತ್ತಮವಾಗಿ ಪ್ರದರ್ಶನ ನೀಡಲು ಸಾಧ್ಯವಾಗುತ್ತಿರಲಿಲ್ಲ. ಒಳ್ಳೆಯಮೈತ್ರಿ, ವಿಶ್ವಾಸ ಮತ್ತು ತಂಡವನ್ನು ಅರ್ಥೈಸಿಕೊಳ್ಳುವುದರಿಂದಲೇ ನಮಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು ಎಂದು ಕೊಹ್ಲಿ ಹೇಳಿದ್ದಾರೆ.

ಮಧ್ಯಮ ಕ್ರಮಾಂಕದ ಆಟಗಾರರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ಈ ಪ್ರಶ್ನೆಗೆ ಹೇಗೆ ಉತ್ತರಿಸಬೇಕು ಎಂದು ನನಗೆ ಗೊತ್ತಿಲ್ಲ, ಮಧ್ಯಮ ಕ್ರಮಾಂಕದ ಬಗ್ಗೆ ಟೀಕಿಸುವುದು ಸರಿಯಲ್ಲ.ಇದಕ್ಕೆ ಸೂಕ್ತವಾದ ವ್ಯಕ್ತಿಯೊಬ್ಬನನ್ನು ನಾವು ಪತ್ತೆ ಹಚ್ಚುತ್ತೇವೆ ಎಂದಿದ್ದಾರೆ.

ತರಬೇತುದಾರರ ಬಗ್ಗೆ ಮಾತನಾಡಿದ ಕೊಹ್ಲಿ, ನಮ್ಮ ತರಬೇತುದಾರರೊಂದಿಗೆ ನಾವು ಉತ್ತಮ ಮೈತ್ರಿ ಹೊಂದಿದ್ದೇವೆ.ಹಾಗಾಗಿ ಅದೇ ತರಬೇತುದಾರರು ಮುಂದುವರಿಯಲಿ ಎಂದು ನಾವು ಬಯಸುತ್ತೇವೆ.ಸಿಎಸಿ ಈವರೆಗೆ ನನ್ನನ್ನು ಭೇಟಿ ಮಾಡಿಲ್ಲ. ಅವರಿಗೆ ನನ್ನ ಅಭಿಪ್ರಾಯ ಬೇಕು ಎಂದನಿಸಿದರೆ ನಾನು ಅವರ ಜತೆ ಮಾತನಾಡುವೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.