ADVERTISEMENT

ಹೆಣ್ಣು ಮಗುವಿಗೆ ಜನ್ಮ ನೀಡಿದ ಅನುಷ್ಕಾ ಶರ್ಮಾ; ವಿರಾಟ್ ಕೊಹ್ಲಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 16:48 IST
Last Updated 11 ಜನವರಿ 2021, 16:48 IST
ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿಗೆ ಹೆಣ್ಣು ಮಗುವಿನ ಜನನ
ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿಗೆ ಹೆಣ್ಣು ಮಗುವಿನ ಜನನ   

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸೋಮವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ಸುದ್ದಿಯನ್ನು ವಿರಾಟ್ ಕೊಹ್ಲಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಪತ್ನಿ ಹಾಗೂ ಮಗಳು ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

‘ಇಂದು ಮಧ್ಯಾಹ್ನ ನಮ್ಮ ಪುತ್ರಿಯ ಜನನವಾಗಿದೆ. ಈ ಸಿಹಿ ಸುದ್ದಿಯನ್ನು ಅತ್ಯುತ್ಸುಕತೆಯಿಂದ ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನಿಮ್ಮ ಪ್ರೀತಿ, ಪ್ರಾರ್ಥನೆ ಹಾಗೂ ಶುಭಾಶಯಗಳಿಗೆ ಧನ್ಯವಾದಗಳು. ಅನುಷ್ಕಾ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದು, ಜೀವನದಲ್ಲಿ ಈ ಸೌಭಾಗ್ಯವನ್ನು ಅನುಭವಿಸಲು ಸಾಧ್ಯವಾಗಿರುವುದು ನಮ್ಮ ಅದೃಷ್ಟ. ಈ ಸಂದರ್ಭದಲ್ಲಿ ನಮ್ಮ ಖಾಸಗಿತನವನ್ನು ನೀವೆಲ್ಲರೂ ಗೌರವಿಸುವುದಾಗಿ ಭಾವಿಸುತ್ತೇನೆ. ದೇವರ ಆಶೀರ್ವಾದದೊಂದಿಗೆ ನಾವು ಬದುಕಿನ ಈ ಹೊಸ ಅಧ್ಯಾಯ ಆರಂಭಿಸಲು ಬಯಸಿದ್ದೇವೆ’ ಎಂದು ಉಲ್ಲೇಖಿಸಿದ್ದಾರೆ.

ADVERTISEMENT

ಭಾರತದ ಅತ್ಯಂತ ಜನಪ್ರಿಯ ಸೆಲೆಬ್ರಿಟಿಗಳಾಗಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ 2017ರ ಡಿಸೆಂಬರ್ 11ರಂದು ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.

ಭಾರತ ಕ್ರಿಕೆಟ್ ತಂಡವು ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡುತ್ತಿದೆ. ಅಡಿಲೇಡ್ ಓವಲ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ವಿರಾಟ್ ಕೊಹ್ಲಿ, ಬಳಿಕ ಪಿತೃತ್ವ ರಜೆಯ ಮೇರೆಗೆ ಸ್ವದೇಶಕ್ಕೆ ಮರಳಿದ್ದರು. ‘ಜೀವನದ ಅತ್ಯಂತ ಸ್ಮರಣೀಯ ಕ್ಷಣಕ್ಕಾಗಿ ಯಾವುದೇ ಬೆಲೆ ತೆರಲು ಸಿದ್ಧನಾಗಿದ್ದೇನೆ’ ಎಂದು ಸಂದರ್ಶನವೊಂದರಲ್ಲಿ ವಿರಾಟ್ ತಿಳಿಸಿದ್ದರು.

ಏತನ್ಮಧ್ಯೆ ಆಸ್ಟ್ರೇಲಿಯಾ ವಿರುದ್ಧ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಆಟಗಾರರ ವಿರುದ್ಧ ಎದುರಾಗಿರುವ ಜನಾಂಗೀಯ ನಿಂದನೆಯನ್ನು ಖಂಡಿಸಿರುವ ವಿರಾಟ್ ಕೊಹ್ಲಿ, ಇದು ಗೂಂಡಾ ವರ್ತನೆಯ ಪರಮಾವಧಿ ಎಂದು ಹೇಳಿಕೆ ನೀಡಿದ್ದಾರೆ.

ವಿರಾಟ್ ಕೊಹ್ಲಿ– ಅನುಷ್ಕಾ ದಂಪತಿಗೆ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. ಕೊಹ್ಲಿ ಅವರು ನಾಯಕರಾಗಿರುವ ಐಪಿಎಲ್ ಫ್ರ್ಯಾಂಚೈಸ್‌ ರಾಯಲ್ ಚಾಲೆಂಜರ್ಸ್‌ ಬೆಂಗಳೂರು, ಮಾಜಿ ಕ್ರಿಕೆಟಿಗ ಆರ್‌.ಪಿ. ಸಿಂಗ್‌, ಆಫ್‌ಸ್ಪಿನ್ನರ್ ಆರ್‌.ಅಶ್ವಿನ್, ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್‌ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.