ADVERTISEMENT

ಮಾಧ್ಯಮಗೋಷ್ಠಿಯಿಂದ ವಿರಾಟ್ ಕೊಹ್ಲಿ ದೂರ: ಗುಟ್ಟು ಬಿಚ್ಚಿಟ್ಟ ರಾಹುಲ್ ದ್ರಾವಿಡ್

​ಪ್ರಜಾವಾಣಿ ವಾರ್ತೆ
Published 2 ಜನವರಿ 2022, 13:52 IST
Last Updated 2 ಜನವರಿ 2022, 13:52 IST
ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್   

ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ ಭಾರತದ ಪ್ರವಾಸ ಆರಂಭವಾದಾಗಿನಿಂದಲೂ ಪಂದ್ಯ ಆರಂಭದ ಮುನ್ನಾದಿನದ ಪತ್ರಿಕಾಗೋಷ್ಠಿಗಳಿಗೆ ವಿರಾಟ್ ಕೊಹ್ಲಿ ಗೈರು ಹಾಜರಾಗಿದ್ದಾರೆ.

ಈ ಕುರಿತು ನಡೆದಿದ್ದ ಚರ್ಚೆಗೆ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಭಾನುವಾರ ತೆರೆ ಎಳೆದರು.

‘ಈ ಸರಣಿಯ ಮೂರನೇ ಪಂದ್ಯವು ವಿರಾಟ್‌ಗೆ 100ನೇ ಟೆಸ್ಟ್ ಪಂದ್ಯವಾಗಲಿದೆ. ಆಗ ಅವರು ಮಾಧ್ಯಮಗೋಷ್ಠಿಗೆ ಹಾಜರಾಗಲಿದ್ದಾರೆ. ಆಗ ಅವರ ನೂರನೇ ಪಂದ್ಯದ ಕುರಿತು ನೀವೆಲ್ಲರೂ ಪ್ರಶ್ನೆಗಳನ್ನು ಕೇಳಬಹುದು’ ಎಂದು ದ್ರಾವಿಡ್ ಹೇಳಿದರು.

ADVERTISEMENT

ಜನವರಿ 11ರಿಂದ ಕೇಪ್‌ಟೌನ್‌ನಲ್ಲಿ ಮೂರನೇ ಟೆಸ್ಟ್ ನಡೆಯಲಿದೆ.

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನ ನಡೆದಿದ್ದ ಪತ್ರಿಕಾ ಸಂವಾದದಲ್ಲಿ ವಿರಾಟ್ ಕೊಹ್ಲಿ ತಮ್ಮನ್ನು ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿದ್ದರ ಕುರಿತು ನೀಡಿದ್ದ ಹೇಳಿಕೆಯು ಚರ್ಚೆಗೆ ಗ್ರಾಸವಾಗಿತ್ತು. ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ನೀಡಿದ್ದ ಹೇಳಿಕೆಗೆ ಕೊಹ್ಲಿಯ ಮಾತುಗಳು ವ್ಯತಿರಿಕ್ತವಾಗಿದ್ದವು. ಅಲ್ಲದೇ ಅವರು ಬ್ಯಾಟಿಂಗ್‌ನಲ್ಲಿ ಫಾರ್ಮ್‌ ಕಳೆದುಕೊಂಡಿದ್ದಾರೆ. ಕಳೆದೆರಡು ವರ್ಷಗಳಿಂದ ಒಂದೂ ಶತಕ ಹೊಡೆದಿಲ್ಲ. ಆದ್ದರಿಂದ ಈ ಎಲ್ಲ ವಿಷಯಗಳ ಕುರಿತು ಮಾಧ್ಯಮದ ಪ್ರತಿನಿಧಿಗಳ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಅವರು ಪತ್ರಿಕಾಗೋಷ್ಠಿಗೆ ಬರುತ್ತಿಲ್ಲ ಎಂಬ ಮಾತುಗಳೂ ಕೇಳಿಬಂದಿದ್ದವು.

‘ತಂಡಕ್ಕೆ ವಿರಾಟ್ ಯಾವಾಗಲೂ ಆಧಾರಸ್ತಂಭವೇ ಆಗಿದ್ದಾರೆ. ಅವರು ತಂಡದ ಆಟಗಾರರ ಸ್ಥೈರ್ಯವನ್ನು ಉನ್ನತ ಮಟ್ಟದಲ್ಲಿರುವಂತೆ ನೋಡಿಕೊಳ್ಳುತ್ತಾರೆ. ಎಲ್ಲರನ್ನೂ ಹುರಿದುಂಬಿಸುತ್ತ ತಂಡದಲ್ಲಿ ಶಕ್ತಿ ಪ್ರವಹಿಸುವಂತೆ ಮಾಡುತ್ತಾರೆ. ಅವರಿರುವುದರಿಂದ ನನ್ನ ಕೆಲಸ ಸುಲಭ’ ಎಂದು ದ್ರಾವಿಡ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.