ADVERTISEMENT

ಐಸಿಸಿ ರ‍್ಯಾಂಕಿಂಗ್; ಕುಸಿದ ಕೊಹ್ಲಿ

ಪಿಟಿಐ
Published 26 ಫೆಬ್ರುವರಿ 2020, 20:05 IST
Last Updated 26 ಫೆಬ್ರುವರಿ 2020, 20:05 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ದುಬೈ : ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಬುಧವಾರ ಪ್ರಕಟವಾದ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಳೆದುಕೊಂಡಿದ್ದಾರೆ.

ಈಚೆಗೆ ನ್ಯೂಜಿಲೆಂಡ್ ಎದುರು ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಅವರು ಕೇವಲ 21 ರನ್‌ ಗಳಿಸಿದ್ದರು. ಭಾರತ ತಂಡವೂ ಸೋತಿತ್ತು. ಕೊಹ್ಲಿ ಖಾತೆಯಲ್ಲಿ 906 ಪಾಯಿಂಟ್‌ಗಳಿವೆ. ಅವರು ಇದೀಗ ಎರಡನೇ ಸ್ಥಾನಕ್ಕೆ ಜಾರಿದ್ದಾರೆ. ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಅಗ್ರಸ್ಥಾನಕ್ಕೇರಿದ್ದಾರೆ.

ಭಾರತ ತಂಡದ ಉಪನಾಯಕ ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ ಮತ್ತು ಮಯಂಕ್ ಅಗರವಾಲ್ ಅವರು ಕ್ರಮವಾಗಿ 8, 9 ಮತ್ತು 10ನೇ ಸ್ಥಾನದಲ್ಲಿದ್ದಾರೆ.

ADVERTISEMENT

ಬೌಲಿಂಗ್ ವಿಭಾಗದಲ್ಲಿ ಭಾರತದ ಸ್ಪಿನ್ನರ್ ಆರ್. ಅಶ್ವಿನ್ ಒಂಬತ್ತನೇ ಸ್ಥಾನಕ್ಕಿಳಿದಿದ್ದಾರೆ. ಅವರು ಈ ಮೊದಲು ಎಂಟರಲ್ಲಿದ್ದರು. ನ್ಯೂಜಿಲೆಂಡ್ ಎದುರಿನ ಟೆಸ್ಟ್‌ನಲ್ಲಿ ಐದು ವಿಕೆಟ್ ಗಳಿಸಿದ್ದ ಇಶಾಂತ್ ಶರ್ಮಾ 18ರಿಂದ 17ನೇ ಸ್ಥಾನಕ್ಕೇರಿದ್ದಾರೆ. ಕಿವೀಸ್ ಬೌಲರ್ ಟಿಮ್ ಸೌಥಿ ಆರು ಮತ್ತು ಟ್ರೆಂಟ್ ಬೌಲ್ಟ್‌ 13ನೇ ಸ್ಥಾನಕ್ಕೇರಿದ್ದಾರೆ. ಆಲ್‌ರೌಂಡರ್‌ ಪಟ್ಟಿಯಲ್ಲಿ ರವೀಂದ್ರ ಜಡೇಜ ಮತ್ತು ಆರ್. ಅಶ್ವಿನ್ ಕ್ರಮವಾಗಿ ಮೂರು ಮತ್ತು ಐದನೇ ಸ್ಥಾನ ಗಳಿಸಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಪಟ್ಟಿಯಲ್ಲಿ ಭಾರತವು 360 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಆಸ್ಟ್ರೇಲಿಯಾ (296) ಎರಡನೇ ಮತ್ತು ನ್ಯೂಜಿಲೆಂಟ್ (120) ಮೂರನೇ ಸ್ಥಾನದಲ್ಲಿವೆ. ಕಿವೀಸ್ ತಂಡವು ಈಚೆಗೆ ಶ್ರೀಲಂಕಾ ಎದುರು ನಡೆದಿದ್ದ ಟೆಸ್ಟ್ ಸರಣಿಯಲ್ಲಿ 1–1ರಿಂದ ಸಮಬಲ ಸಾಧಿಸಿತ್ತು. ಅದರಲ್ಲಿ 60 ಮತ್ತು ವೆಲ್ಲಿಂಗ್ಟನ್‌ನಲ್ಲಿ ಭಾರತದ ವಿರುದ್ಧ ಜಯಿಸಿ 60 ಪಾಯಿಂಟ್ ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.