ADVERTISEMENT

ಬ್ಯಾಟಿಂಗ್ ಬಗ್ಗೆ ಗಮನಹರಿಸಲು ಕೊಹ್ಲಿ ಎಲ್ಲ ಮಾದರಿ ನಾಯಕತ್ವ ಬಿಡಬಹುದು: ಶಾಸ್ತ್ರಿ

ಪಿಟಿಐ
Published 12 ನವೆಂಬರ್ 2021, 17:09 IST
Last Updated 12 ನವೆಂಬರ್ 2021, 17:09 IST
ವಿರಾಟ್ ಕೊಹ್ಲಿ: ಪಿಟಿಐ ಚಿತ್ರ
ವಿರಾಟ್ ಕೊಹ್ಲಿ: ಪಿಟಿಐ ಚಿತ್ರ   

ನವದೆಹಲಿ: ಟಿ–20 ತಂಡದ ನಾಯಕತ್ವ ತ್ಯಜಿಸಿರುವ ವಿರಾಟ್ ಕೊಹ್ಲಿ ಬೇರೆ ಮಾದರಿಯ ಕ್ರಿಕೆಟ್‌ನ ನಾಯಕತ್ವವನ್ನೂ ತೊರೆದು ಬ್ಯಾಟಿಂಗ್ ಬಗ್ಗೆ ಗಮನ ಹರಿಸಬಹುದು ಎಂದು ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ಟಿ–20 ವಿಶ್ವಕಪ್ ಬಳಿಕ ತಂಡದ ನಾಯಕತ್ವ ತ್ಯಜಿಸಿದ ಕೊಹ್ಲಿ, ನ್ಯೂಜಿಲೆಂಡ್ ವಿರುದ್ಧದ ಟಿ–20 ಸರಣಿ ಮತ್ತು ಮೊದಲ ಟೆಸ್ಟ್ ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ.

ತಮ್ಮ ಮೇಲಿನ ಒತ್ತಡ ಕಡಿಮೆ ಮಾಡಿಕೊಳ್ಳಲು ಬೇರೆ ಮಾದರಿಯ ಕ್ರಿಕೆಟ್‌ನ ನಾಯಕತ್ವವನ್ನೂ ವಿರಾಟ್ ಕೊಹ್ಲಿ ಬಿಡುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ರವಿಶಾಸ್ತ್ರಿ, ‘ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಕೊಹ್ಲಿ ನಾಯಕತ್ವದಲ್ಲಿ ಭಾರತವು ಕಳೆದ 5 ವರ್ಷಗಳಿಂದ ಮೊದಲ ಸ್ಥಾನದಲ್ಲಿದೆ. ಆದರೆ, ಮಾನಸಿಕವಾಗಿ ಆಯಾಸಗೊಂಡಿರುವ ಅವರು ನಾಯಕತ್ವ ತ್ಯಜಿಸುವ ಇಚ್ಛೆ ಹೊಂದಿದ್ದಾರೆ. ತಮ್ಮ ಬ್ಯಾಟಿಂಗ್ ಬಗ್ಗೆ ಗಮನ ಹರಿಸಬೇಕೆಂದು ಹೇಳುತ್ತಿದ್ದರು’ ಎಂದು ಶಾಸ್ತ್ರಿ ತಿಳಿಸಿದ್ದಾರೆ.

‘ಈ ಕೂಡಲೇ ಅದು ಆಗುವುದಿಲ್ಲ. ಆದರೆ, ಭವಿಷ್ಯದಲ್ಲಿ ವೈಟ್ ಬಾಲ್‌ ಕ್ರಿಕೆಟ್ ನಾಯ‌ಕತ್ವವನ್ನು ತ್ಯಜಿಸಬಹುದು. ಅವರು ಟೆಸ್ಟ್ ನಾಯಕತ್ವದ ಬಗ್ಗೆ ಗಮನ ಹರಿಸಿದ್ದಾರೆ. ಅವರ ಫಿಟ್‌ನೆಸ್ ಆಧಾರದ ಮೇಲೆ ಮುಂದಿನ ನಿರ್ಧಾರಗಳನ್ನು ಮಾಡಲಿದ್ದಾರೆ. ಹಲವಾರು ಯಶಸ್ವಿ ಆಟಗಾರರು ತಮ್ಮ ಬ್ಯಾಟಿಂಗ್ ಬಗ್ಗೆ ಗಮನಹರಿಸಲು ನಾಯಕತ್ವ ತ್ಯಜಿಸಿದ್ದಾರೆ’ ಎಂದು ಅವರುಹೇಳಿದ್ದಾರೆ.

‘ಆಟದ ಬಗ್ಗೆ ಅವರಿಗೆ ಹಸಿವಿದೆ. ತಂಡದ ಬೇರೆಲ್ಲ ಆಟಗಾರರಿಗಿಂತ ಫಿಟ್ ಆಗಿದ್ಧಾರೆ ಎಂಬುದು ಸ್ಪಷ್ಟ. ದೀರ್ಘಕಾಲ ನೀವು ಕ್ರಿಕೆಟ್‌ನಲ್ಲಿ ಉಳಿಯಲು ಫಿಟ್‌ನೆಸ್ ಬಹಳ ಮುಖ್ಯ. ನಾಯಕತ್ವ ತ್ಯಜಿಸುವುದು ಅವರ ನಿರ್ಧಾರ. ಒಂದೊಮ್ಮೆ ವೈಟ್ ಬಾಲ್ ಕ್ರಿಕೆಟ್‌ನ ನಾಯಕತ್ವ ತೊರೆದರೆ, ರೆಡ್ ಬಾಲ್ ಕ್ರಿಕೆಟ್‌ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್‌ನ ಅತ್ಯುತ್ತಮ ರಾಯಭಾರಿ’ ಎಂದು ಶಾಸ್ತ್ರಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.