ADVERTISEMENT

ನಾಲ್ಕು ದಿನಗಳ ಟೆಸ್ಟ್‌ಗೆ ವಿರಾಟ್ ಕೊಹ್ಲಿ ವಿರೋಧ

ಪಿಟಿಐ
Published 4 ಜನವರಿ 2020, 12:31 IST
Last Updated 4 ಜನವರಿ 2020, 12:31 IST
ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ    

ಗುವಾಹಟಿ: ‘ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ನಾಲ್ಕು ದಿನಗಳ ಟೆಸ್ಟ್‌ ಪ್ರಸ್ತಾವಕ್ಕೆ ನನ್ನ ಸಹಮತವಿಲ್ಲ’ ಎಂದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ.

ಶನಿವಾರ ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ಸಾಂಪ್ರದಾಯಿಕ ಟೆಸ್ಟ್‌ ಮಾದರಿಯ ಪಾವಿತ್ರಕ್ಕೆ ಧಕ್ಕೆ ಉಂಟಾಗುವಂತಹ ಯಾವುದೇ ಬದಲಾವಣೆಗಳನ್ನು ಮಾಡಿದರೂ ಅದನ್ನು ವಿರೋಧಿಸುತ್ತೇನೆ’ ಎಂದರು.

‘ಟೆಸ್ಟ್‌ ಮಾದರಿಗೆ ಅದರದ್ದೇ ಆದ ಪರಂಪರೆ ಇದೆ. ಅದನ್ನು ಹಾಗೆಯೇ ಇರಲು ಬಿಡಬೇಕು. ಈಗ ನಾಲ್ಕು ದಿನಗಳ ಟೆಸ್ಟ್‌ ಪ್ರಸ್ತಾವ ಮುಂದಿಡಲಾಗಿದೆ. ಮುಂದೆ ಪಂದ್ಯವನ್ನು ಮೂರು ದಿನಗಳಿಗೆ ಇಳಿಸುವಂತೆ ಮತ್ಯಾರೊ ಹೇಳಬಹುದು. ಇದಕ್ಕೆ ಕೊನೆಯೆಂಬುದೇ ಇಲ್ಲ’ ಎಂದು ನುಡಿದಿದ್ದಾರೆ.

ADVERTISEMENT

ಟೆಸ್ಟ್‌ ಚಾಂಪಿಯನ್‌ಷಿಪ್‌ನ ಭಾಗವಾಗಿ 2023ರಿಂದ 2031ರ ಅವಧಿಯಲ್ಲಿ ನಾಲ್ಕು ದಿನಗಳ ಟೆಸ್ಟ್‌ ಪಂದ್ಯಗಳನ್ನು ಆಯೋಜಿಸಲು ಚಿಂತನೆ ನಡೆಸುತ್ತಿರುವುದಾಗಿ ಇತ್ತೀಚೆಗೆ ಐಸಿಸಿ ಹೇಳಿತ್ತು. ಪಂದ್ಯಗಳ ಆಯೋಜನೆಯ ವೆಚ್ಚ, ಆಟಗಾರರ ಮೇಲಿನ ಹೊರೆ ಕಡಿಮೆ ಮಾಡುವುದು ಹಾಗೂ ಟೆಸ್ಟ್‌ನತ್ತ ಹೆಚ್ಚು ಅಭಿಮಾನಿಗಳನ್ನು ಸೆಳೆಯುವ ಉದ್ದೇಶಗಳಿಂದ ಈ ತೀರ್ಮಾನ ಕೈಗೊಳ್ಳಲು ನಿರ್ಧರಿಸಿರುವುದಾಗಿಯೂ ತಿಳಿಸಿತ್ತು.

ಹೊಸ ಪ್ರಸ್ತಾವನೆಗೆ ಈ ವರ್ಷ ಐಸಿಸಿ ಕ್ರಿಕೆಟ್‌ ಸಮಿತಿ ಅನುಮೋದನೆ ನೀಡುವ ನಿರೀಕ್ಷೆ ಇದೆ. ಐಸಿಸಿಯನ್ನು ಪ್ರತಿನಿಧಿಸುವ ವಿವಿಧ ಕ್ರಿಕೆಟ್‌ ಮಂಡಳಿಗಳ ಪ್ರತಿನಿಧಿಗಳು ಯೋಜನೆಯ ಪರ ಮತ ಚಲಾಯಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.