ರಾಹುಲ್ ವೈದ್ಯ ಮತ್ತು ವಿರಾಟ್ ಕೊಹ್ಲ
ಮುಂಬೈ: ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅವರ ಅಭಿಮಾನಿಗಳನ್ನು ‘ಜೋಕರ್’ ಎಂದು ಕರೆದು ಸುದ್ದಿಯಾಗಿದ್ದ ಗಾಯಕ ರಾಹುಲ್ ವೈದ್ಯ, ಇದೀಗ ಮತ್ತೊಂದು ಪೋಸ್ಟ್ ಹಂಚಿಕೊಳ್ಳುವ ಮೂಲಕ ಕೊಹ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿರುವ ಅವರು, ಹರ್ದವಿಂದರ್ ಸಂದು ಅವರ ‘ಸಾರಿ ಉಮರ್ ಮೇನ್ ಜೋಕರ್’ ಹಾಡನ್ನು ಹಾಡಿದ್ದಾರೆ. ನಿನ್ನೆಯಿಂದ ಇದು ನನ್ನ ನೆಚ್ಚಿನ ಹಾಡು ಎಂದು ಬರೆದುಕೊಂಡಿದ್ದಾರೆ.
ಏನಿದು ವಿವಾದ?
ಬಾಲಿವುಡ್ ನಟಿಯೊಬ್ಬರ ಫೋಟೊಗೆ ‘ಕಣ್ತಪ್ಪಿ’ ಲೈಕ್ ಕೊಟ್ಟಿರುವ ಕುರಿತಂತೆ ವಿರಾಟ್ ಕೊಹ್ಲಿ ಅವರ ಸ್ಪಷ್ಟನೆಯನ್ನು ಟೀಕಿಸಿದ್ದ ರಾಹುಲ್ ವೈದ್ಯ ಅವರನ್ನು ಕೊಹ್ಲಿ ಇನ್‌ಸ್ಟಾಗ್ರಾಂನಲ್ಲಿ ಬ್ಲಾಕ್ ಮಾಡಿದ್ದರು. ಇದರಿಂದ ಕೋಪಗೊಂಡಿದ್ದ ರಾಹುಲ್, ಕೊಹ್ಲಿ ಮತ್ತು ಅವರ ಅಭಿಮಾನಿ ಬಳಗವನ್ನು ಜೋಕರ್ ಎಂದು ಕರೆದಿದ್ದರು.
‘ಇವತ್ತಿನಿಂದ ನಾನು ಯಾವ ಹುಡುಗಿಯ ಫೋಟೊಗೂ ಲೈಕ್ ಕೊಡಬಹುದು. ಹುಡುಗಿಯರೇ ಇದರಿಂದ ಬೇಸರ ಮಾಡಿಕೊಳ್ಳಬೇಡಿ. ಇದು ನನ್ನಿಂದ ಆದ ತಪ್ಪಲ್ಲ. ಇದು ಇನ್‌ಸ್ಟಾಗ್ರಾಂ ಅಲ್ಗಾರಿದಮ್‌ನಿಂದ ಆದ ತಪ್ಪು’ ಎಂದು ಕೊಹ್ಲಿಯನ್ನು ಲೇವಡಿ ಮಾಡಿದ್ದರು.
ನಟಿಯ ಫೋಟೊಗೆ ಲೈಕ್ ನೀಡಿದ ಬಗ್ಗೆ ಸ್ಪಷ್ಟನೆ ನೀಡುವ ವೇಳೆ ಕೊಹ್ಲಿ, ಇದು ಇನ್‌ಸ್ಟಾಗ್ರಾಂ ಅಲ್ಗಾರಿದಮ್‌ನಿಂದ ಆದ ತಪ್ಪು ಎಂದು ಹೇಳಿದ್ದರು.
‘ಕೊಹ್ಲಿ ನನ್ನನ್ನು ಬ್ಲಾಕ್ ಮಾಡಿದ್ದಾರೆ. ಆದರೆ, ಬ್ಲಾಕ್ ಮಾಡಿರುವುದು ಕೊಹ್ಲಿ ಎಂದು ನಾನು ಹೇಳುವುದಿಲ್ಲ ಸ್ನೇಹಿತರೇ.. ಇದು ಇನ್‌ಸ್ಟಾಗ್ರಾಂನ ತಪ್ಪು’ ಎಂದು ರಾಹುಲ್ ಪರೋಕ್ಷವಾಗಿ ಕಾಲೆಳೆದಿದ್ದರು.
‘ವಿರಾಟ್ ಕೊಹ್ಲಿಗಿಂತ ಆತನ ಅಭಿಮಾನಿಗಳು ದೊಡ್ಡ ಜೋಕರ್‌ಗಳು’ ಎಂದೂ ಹೇಳಿದ್ದರು.
ನಟಿ ಅವನಿತ್ ಕೌರ್ ಫೋಟೊಗೆ ವಿರಾಟ್ ಲೈಕ್!
ಬಾಲಿವುಡ್ ನಟಿ ಅವನಿತ್ ಕೌರ್ ಅವರ ಅಭಿಮಾನಿಗಳು ಪೋಸ್ಟ್ ಮಾಡಿದ್ದ ನಟಿಯ ಫೋಟೊಗೆ ವಿರಾಟ್ ಲೈಕ್ ಕೊಟ್ಟಿದ್ದರು.
ಇದು ಸುದ್ದಿಯಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ್ದ ವಿರಾಟ್ ಕೊಹ್ಲಿ, ‘ನಾನು ಲೈಕ್ ಕೊಟ್ಟಿರುವುದಲ್ಲ. ಇನ್‌ಸ್ಟಾಗ್ರಾಂ ಅಲ್ಗಾರಿದಮ್‌ನಿಂದ ಆದ ತಪ್ಪು’ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.