ADVERTISEMENT

ಐಸಿಸಿ ರ‍್ಯಾಂಕಿಂಗ್‌: ಅಗ್ರಪಟ್ಟ ಕಾಪಾಡಿಕೊಂಡ ಕೊಹ್ಲಿ, 5ನೇ ಸ್ಥಾನಕ್ಕೆ ಸ್ಟಾರ್ಕ್

ಪಿಟಿಐ
Published 17 ಡಿಸೆಂಬರ್ 2019, 5:40 IST
Last Updated 17 ಡಿಸೆಂಬರ್ 2019, 5:40 IST
   

ದುಬೈ: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ಸೋಮವಾರ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಬಿಡುಗಡೆ ಮಾಡಿರುವ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ.

ಬಲಗೈ ಬ್ಯಾಟ್ಸ್‌ಮನ್‌ ವಿರಾಟ್‌ ಅವರ ಖಾತೆಯಲ್ಲಿ ಒಟ್ಟು 928 ಪಾಯಿಂಟ್ಸ್‌ ಇದೆ. ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್‌ ಅವರಿಗಿಂತಲೂ 17 ಪಾಯಿಂಟ್ಸ್‌ ಹೆಚ್ಚು ಹೊಂದಿದ್ದಾರೆ.

ಭಾನುವಾರ ಮುಗಿದಿದ್ದ ನ್ಯೂಜಿಲೆಂಡ್‌ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಸ್ಮಿತ್‌, ಎರಡು ಇನಿಂಗ್ಸ್‌ಗಳಿಂದ 59 ರನ್‌ ಕಲೆಹಾಕಿದ್ದರು. ಅವರ ಖಾತೆಯಲ್ಲಿ 911 ಪಾಯಿಂಟ್ಸ್‌ ಇದೆ.

ADVERTISEMENT

ಇದೇ ಟೆಸ್ಟ್‌ನಲ್ಲಿ ಎರಡು ಇನಿಂಗ್ಸ್‌ಗಳಿಂದ 193ರನ್‌ ಬಾರಿಸಿದ್ದ ಆಸ್ಟ್ರೇಲಿಯಾದ ಮಾರ್ನಸ್‌ ಲಾಬುಶೇನ್‌ ಐದನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಒಟ್ಟು ಪಾಯಿಂಟ್ಸ್‌ ಅನ್ನು 786ಕ್ಕೆ ಹೆಚ್ಚಿಸಿಕೊಂಡಿರುವ ಅವರು ಮೂರು ಸ್ಥಾನ ಮೇಲೇರಿದ್ದಾರೆ.

ಭಾರತದ ಚೇತೇಶ್ವರ ಪೂಜಾರ (791) ಮತ್ತು ಅಜಿಂಕ್ಯ ರಹಾನೆ (759) ಅವರು ಕ್ರಮವಾಗಿ ನಾಲ್ಕು ಮತ್ತು ಆರನೇ ಸ್ಥಾನಗಳಲ್ಲಿ ಮುಂದುವರಿದಿದ್ದಾರೆ.

ಪಾಕಿಸ್ತಾನದ ಬಾಬರ್‌ ಅಜಂ ಮೊದಲ ಸಲ ಅಗ್ರ ಹತ್ತರೊಳಗೆ ಸ್ಥಾನ ಗಳಿಸಿದ್ದಾರೆ. ಭಾನುವಾರ ಕೊನೆಗೊಂಡಿದ್ದ ಶ್ರೀಲಂಕಾ ಎದುರಿನ ಮೊದಲ ಟೆಸ್ಟ್‌ನಲ್ಲಿ ಅಜೇಯ ಶತಕ (102ರನ್‌) ದಾಖಲಿಸಿದ್ದ ಅವರು 13ರಿಂದ ಒಂಬತ್ತನೇ ಸ್ಥಾನಕ್ಕೆ ‍ಪ್ರಗತಿ ಕಂಡಿದ್ದಾರೆ.

ಟ್ವೆಂಟಿ–20 ಮಾದರಿಯಲ್ಲಿ ಅಗ್ರಸ್ಥಾನ ಹೊಂದಿರುವ ಬಾಬರ್‌, ಏಕದಿನ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಆರಕ್ಕೆ ಇಳಿದ ಬೂಮ್ರಾ: ಬೌಲರ್‌ಗಳ ಕ್ರಮಾಂಕ ಪಟ್ಟಿಯಲ್ಲಿ ಭಾರತದ ಜಸ್‌ಪ್ರೀತ್‌ ಬೂಮ್ರಾ ಆರನೇ ಸ್ಥಾನಕ್ಕೆ ಇಳಿದಿದ್ದಾರೆ. ಗಾಯದ ಕಾರಣ ಅವರು ಹಿಂದಿನ ಕೆಲ ಸರಣಿಗಳಲ್ಲಿ ಆಡಿರಲಿಲ್ಲ.

ಆಸ್ಟ್ರೇಲಿಯಾದ ಪ್ಯಾಟ್‌ ಕಮಿನ್ಸ್‌ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ಎದುರಿನ ಮೊದಲ ಟೆಸ್ಟ್‌ನಲ್ಲಿ ಒಟ್ಟು ಏಳು ವಿಕೆಟ್‌ ಉರುಳಿಸಿದ್ದ ನ್ಯೂಜಿಲೆಂಡ್‌ನ ನೀಲ್‌ ವಾಗ್ನರ್‌ ಮೂರನೇ ಸ್ಥಾನಕ್ಕೆ ಮರಳಿದ್ದಾರೆ. 834 ಪಾಯಿಂಟ್ಸ್‌ ಗಳಿಸಿರುವ ಅವರು ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದ್ದಾರೆ.

ನ್ಯೂಜಿಲೆಂಡ್‌ನ ಮತ್ತೊಬ್ಬ ಅನುಭವಿ ಬೌಲರ್‌ ಟಿಮ್‌ ಸೌಥಿ, ಹತ್ತನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅವರು ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ನಲ್ಲಿ ಒಟ್ಟು ಒಂಬತ್ತು ವಿಕೆಟ್‌ ಪಡೆದಿದ್ದರು.

ಅಸ್ಟ್ರೇಲಿಯಾದ ಮಿಷೆಲ್‌ ಸ್ಟಾರ್ಕ್‌ ಐದನೇ ಸ್ಥಾನಕ್ಕೇರಿದ್ದಾರೆ. ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಪಟ್ಟಿಯಲ್ಲಿ ಭಾರತ ತಂಡ ಅಗ್ರಸ್ಥಾನದಲ್ಲಿದೆ. ಕೊಹ್ಲಿ ಪಡೆ ಒಟ್ಟು 360 ಪಾಯಿಂಟ್ಸ್‌ ಹೊಂದಿದೆ.

ಆಸ್ಟ್ರೇಲಿಯಾ (216), ಶ್ರೀಲಂಕಾ (80), ನ್ಯೂಜಿಲೆಂಡ್‌ (60) ಮತ್ತು ಇಂಗ್ಲೆಂಡ್‌ (56) ಕ್ರಮವಾಗಿ ಎರಡರಿಂದ ಐದನೇ ಸ್ಥಾನಗಳಲ್ಲಿವೆ.

ಕೊಹ್ಲಿ ಕ್ರಿಕೆಟ್‌ನ ರೊನಾಲ್ಡೊ ಇದ್ದಂತೆ: ಲಾರಾ
ವಿಶಾಖಪಟ್ಟಣ
: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ಕ್ರಿಕೆಟ್‌ ಲೋಕದ ಕ್ರಿಸ್ಟಿಯಾನೊ ರೊನಾಲ್ಡೊ ಇದ್ದ ಹಾಗೆ. ಪೋರ್ಚುಗಲ್‌ನ ಫುಟ್‌ಬಾಲ್‌ ತಾರೆ ರೊನಾಲ್ಡೊ ಅವರಂತೆ ಕೊಹ್ಲಿ ಕೂಡ ಆಟದ ಬಗ್ಗೆ ಅಪಾರ ಬದ್ಧತೆ ಹೊಂದಿದ್ದಾರೆ’ ಎಂದು ವೆಸ್ಟ್‌ ಇಂಡೀಸ್‌ ತಂಡದ ಹಿರಿಯ ಕ್ರಿಕೆಟಿಗ ಬ್ರಯಾನ್‌ ಲಾರಾ ಅಭಿಪ್ರಾಯಪಟ್ಟಿದ್ದಾರೆ.

‘ಫಿಟ್‌ನೆಸ್‌ ಕಾಪಾಡಿಕೊಳ್ಳುವ ವಿಚಾರದಲ್ಲಿ ಕೊಹ್ಲಿ, ಇತರ ಕ್ರಿಕೆಟಿಗರಿಗಿಂತಲೂ ಒಂದು ಹೆಜ್ಜೆ ಮುಂದಿದ್ದಾರೆ. ಮಾನಸಿಕವಾಗಿವೂ ಸದೃಢರಾಗಿದ್ದಾರೆ. ಅವರ ಆಟ ಪದಗಳಿಗೆ ನಿಲುಕದ್ದು. ಕೊಹ್ಲಿ ಅವರನ್ನು ಹೊರಗಿಟ್ಟು ಸಾರ್ವಕಾಲಿಕ ಶ್ರೇಷ್ಠ ಆಟಗಾರರ ತಂಡವನ್ನು ಆಯ್ಕೆಮಾಡುವುದು ಅಸಾಧ್ಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಇಂಗ್ಲೆಂಡ್‌ ತಂಡದ ಬೆನ್‌ ಸ್ಟೋಕ್ಸ್‌ ಕೂಡ ಪ್ರತಿಭಾನ್ವಿತ ಆಟಗಾರ. ವಿಶ್ವಕಪ್‌ ಫೈನಲ್‌ ಮತ್ತು ಹೆಡಿಂಗ್ಲೆಯಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಆ್ಯಷಸ್‌ ಟೆಸ್ಟ್‌ ಪಂದ್ಯದಲ್ಲಿ ಅವರಿಂದ ಮೂಡಿಬಂದ ಆಟ ಪದಗಳಿಗೆ ನಿಲುಕದ್ದು. ಸಂದಿಗ್ಧತೆಗಳನ್ನು ಮೆಟ್ಟಿನಿಂತು ಅವರು ಆ ರೀತಿ ಆಡಿದ್ದು ನಿಜಕ್ಕೂ ಮೆಚ್ಚುವಂತಹದ್ದು’ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.