ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ
ಪಿಟಿಐ ಚಿತ್ರ
ಭಾರತ ಕ್ರಿಕೆಟ್ ತಂಡದ ವಿರಾಟ್ ಕೊಹ್ಲಿ ಅವರು ಇಂದು ಟೆಸ್ಟ್ ಮಾದರಿಗೆ ವಿದಾಯ ಘೋಷಿಸಿದ್ದಾರೆ.
2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಈ ಮಾದರಿಗೆ ಪದಾರ್ಪಣೆ ಮಾಡಿದ್ದ ಅವರು, ಸಾರ್ವಕಾಲಿಕ ಶ್ರೇಷ್ಠ ಹಾಗೂ ದಿಗ್ಗಜ ಬ್ಯಾಟರ್‌ಗಳಲ್ಲಿ ಒಬ್ಬರೆನಿಸಿದ್ದಾರೆ. 123 ಪಂದ್ಯಗಳ 210 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿ, 46.85ರ ಸರಾಸರಿಯಲ್ಲಿ 9,230 ರನ್ ಕಲೆಹಾಕಿದ್ದಾರೆ. ಅವರ ಬ್ಯಾಟ್‌ನಿಂದ 7 ದ್ವಿಶತಕ, 30 ಶತಕ ಹಾಗೂ 31 ಅರ್ಧಶತಕಗಳು ಬಂದಿವೆ.
2014ರಿಂದ 2022ರವರೆಗೆ ಟೀಂ ಇಂಡಿಯಾ ಮುನ್ನಡೆಸಿದ್ದ ಕೊಹ್ಲಿ, ಈ ಮಾದರಿಯಲ್ಲಿ ಭಾರತ ಕಂಡ ಅತ್ಯುತ್ತಮ ನಾಯಕ ಎನಿಸಿದ್ದಾರೆ. ಅವರ ನಾಯಕತ್ವದಲ್ಲಿ 68 ಪಂದ್ಯಗಳಲ್ಲಿ ಆಡಿದ್ದ ಭಾರತ, 40ರಲ್ಲಿ ಜಯ ಸಾಧಿಸಿತ್ತು. 17ರಲ್ಲಿ ಸೋತರೆ, ಉಳಿದ 11 ಡ್ರಾ ಆಗಿದ್ದವು.
ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ 2024ರಲ್ಲೇ ಗುಡ್‌ಬೈ ಹೇಳಿರುವ ಕೊಹ್ಲಿಯ ಆಟವನ್ನು ಇನ್ನು ಮುಂದೆ ಏಕದಿನ ಮಾದರಿ ಹಾಗೂ ಐಪಿಎಲ್‌ನಲ್ಲಷ್ಟೇ ಕಣ್ತುಂಬಿಕೊಳ್ಳಬೇಕಾಗಿದೆ.
ವಿದಾಯ ಘೋಷಣೆ ಸುದ್ದಿ ಹೊರಬೀಳುತ್ತಿದ್ದಂತೆ, ದಿಗ್ಗಜರು, ಕ್ರಿಕೆಟ್ ಪಂಡಿತರು, ವಿವಿಧ ವಲಯಗಳ ಗಣ್ಯರು ಹಾಗೂ ಅಭಿಮಾನಿಗಳು ಕೊಹ್ಲಿ ಅವರ ಸಾಧನೆಗಳ ಗುಣಗಾನ ಮಾಡುತ್ತಿದ್ದಾರೆ.
ಬ್ಯಾಟಿಂಗ್ ದಂತಕತೆ, ಭಾರತ ರತ್ನ ಸಚಿನ್ ತೆಂಡೂಲ್ಕರ್ ಅವರು, ಸಾಮಾಜಿಕ ಮಾಧ್ಯಮ ಎಕ್ಸ್/ಟ್ವಿಟರ್‌ನಲ್ಲಿ ಕೊಹ್ಲಿಯನ್ನು ಕೊಂಡಾಡಿಸಿದ್ದಾರೆ.
'ಎಂಥಾ ಅದ್ಭುತ ಟೆಸ್ಟ್ ವೃತ್ತಿಜೀವನ ನಿಮ್ಮದು! ನೀವು ಭಾರತೀಯ ಕ್ರಿಕೆಟ್‌ಗೆ ರನ್‌ಗಳಷ್ಟೇ ಅಲ್ಲದೆ, ಅದಕ್ಕೂ ಮಿಗಿಲಾದದ್ದನ್ನು ಕೊಟ್ಟಿದ್ದೀರಿ – ನವ ಪೀಳಿಗೆಯ ಉತ್ಸಾಹಭರಿತ ಅಭಿಮಾನಿಗಳು ಮತ್ತು ಆಟಗಾರರನ್ನು ನೀಡಿದ್ದೀರಿ' ಎಂದು ಬರೆದುಕೊಂಡಿದ್ದಾರೆ.
ಹಾಗೆಯೇ, 12 ವರ್ಷಗಳ ಹಿಂದಿನ ಸ್ಮರಣೀಯ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.
ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿರುವ ಸಚಿನ್, 2013ರಲ್ಲಿ ತಮ್ಮ ಕೊನೇ ಟೆಸ್ಟ್ ಪಂದ್ಯ ಆಡಿದ್ದರು. ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ಆ ಪಂಧ್ಯ ನಡೆದಿತ್ತು. ಆಗಷ್ಟೇ ಟೀಂ ಇಂಡಿಯಾದಲ್ಲಿ ಸ್ಥಾನ ಗಟ್ಟಿಗೊಳಿಸಿಕೊಳ್ಳುತ್ತಿದ್ದ 24 ವರ್ಷದ ವಿರಾಟ್, ಸಚಿನ್ ಅವರ ಬಳಿ ತೆರಳಿದ್ದರು. ತಮ್ಮ ತಂದೆಯಿಂದ ಪಡೆದ ಪವಿತ್ರ ದಾರವನ್ನು ನೀಡಲು ಮುಂದಾಗಿದ್ದರು. ಆಗ ಏನಾಯಿತು ಎಂಬುದನ್ನು ಟ್ವಿಟರ್ ಮೂಲಕ ತಿಳಿಸಿದ್ದಾರೆ ಸಚಿನ್.
'ನಿಮ್ಮ ದಿವಂಗತ ತಂದೆಯವರಿಂದ ಪಡೆದ ದಾರವನ್ನು ನನಗೆ ಉಡುಗೊರೆಯಾಗಿ ನೀಡಲು ಬಂದಿರಿ. ಅದನ್ನು ಸ್ವೀಕರಿಸುವುದು ನನಗೆ ತೀರಾ ವೈಯಕ್ತಿಕ ಎನಿಸಿತ್ತು. ಆದರೆ, ನಿಮ್ಮ ಆ ನಡೆ ಹೃದಯಸ್ಪರ್ಶಿಯಾಗಿತ್ತು ಮತ್ತು ಆ ನೆನೆಪು ಅಂದಿನಿಂದ ನನ್ನೊಂದಿಗೆ ಉಳಿದಿದೆ. ಆಗ ನಿಮಗೆ ನೀಡಲು ನನ್ನ ಬಳಿ ಅಂತಹದ್ದೇ ಮಹತ್ವದ ದಾರ ಇರಲಿಲ್ಲವಾದರೂ, ನನ್ನ ಅಪಾರವಾದ ಮೆಚ್ಚುಗೆ ಮತ್ತು ಶುಭಾಶಯ ನಿಮ್ಮೊಂದಿಗೆ ಇರಲಿದೆ ಎಂಬುದು ತಿಳಿದಿರಲಿ' ಎಂದಿದ್ದಾರೆ.
ಮುಂದುವರಿದು, 'ನಿಮ್ಮ ಪರಂಪೆಯು ಈ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳಲು ಅಸಂಖ್ಯ ಯುವಕರಿಗೆ ಸ್ಫೂರ್ತಿಯಾಗಿದೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೊಹ್ಲಿ ನೀಡಿದ ಉಡುಗೊರೆಯನ್ನು ನಯವಾಗಿ ತಿರಸ್ಕರಿಸಿದ್ದ ಬಗ್ಗೆ ಸಚಿನ್ ಈ ಹಿಂದೆಯೂ ಹೇಳಿಕೊಂಡಿದ್ದರು. ಆ ದಾರವು ಅಮೂಲ್ಯವಾದ್ದದ್ದು. ಅದು ಬೇರೆಯವರ ಬಳಿ ಇರುವುದಕ್ಕಿಂತ, ನಿಮ್ಮೊಂದಿಗೇ ಇರಬೇಕು ಎಂದು ತಿಳಿಸಿ, ವಾಪಸ್ ನೀಡಿದ್ದಾಗಿ ಹೇಳಿದ್ದರು.
ಟೀಂ ಇಂಡಿಯಾ 2011ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದಾಗ, ಸಚಿನ್ ಅವರನ್ನು ಕೊಹ್ಲಿ (ಸುರೇಶ್ ರೈನಾ ಅವರೊಂದಿಗೆ) ಮೈದಾನದಲ್ಲೇ ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಿಸಿದ್ದರು.
ಸಚಿನ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 15,921 ರನ್ ಗಳಿಸಿದ್ದಾರೆ. ಅವರ ದಾಖಲೆಯನ್ನು ಮುರಿಯಬಲ್ಲ ಆಟಗಾರ ಎನಿಸಿದ್ದ ಕೊಹ್ಲಿ, 10,000 ರನ್ ಗಡಿಯನ್ನೂ ದಾಟದೆ ವಿದಾಯ ಹೇಳಿದ್ದಾರೆ.
ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಮುನ್ನವೇ ಅವರ ತಂದೆ ನಿಧನರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.