ADVERTISEMENT

ರಾಹುಲ್ ಪಾತ್ರವೇನು ಎಂಬುದನ್ನು ವಿರಾಟ್ ಕೊಹ್ಲಿ ನಿರ್ಧರಿಸುತ್ತಾರೆ: ಗಂಗೂಲಿ

ಏಜೆನ್ಸೀಸ್
Published 25 ಜನವರಿ 2020, 11:16 IST
Last Updated 25 ಜನವರಿ 2020, 11:16 IST
   

ನವದೆಹಲಿ:ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್‌. ರಾಹುಲ್‌ ಅವರು ಮುಂದಿನ ದಿನಗಳಲ್ಲಿ ಯಾವ ಪಾತ್ರ ನಿರ್ವಹಿಸಲಿದ್ದಾರೆ ಎಂಬುದನ್ನು ತಂಡದ ನಾಯಕ ವಿರಾಟ್‌ ಕೊಹ್ಲಿ ನಿರ್ಧರಿಸಲಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಇತ್ತೀಚೆಗೆ ಮುಕ್ತಾಯವಾದಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಹಾಗೂ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ರಾಹುಲ್‌ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಆಗಿ ಉತ್ತಮ ನಿರ್ವಹಣೆ ತೋರಿದ್ದರು. ಹೀಗಾಗಿ ಅವರನ್ನು ಹೊಗಳಿರುವ ಗಂಗೂಲಿ, ತಂಡದ ವಿಕೆಟ್‌ ಕೀಪರ್‌ ಆಗಿ ರಾಹಲ್‌ ಮುಂದುವರಿಯಲಿದ್ದಾರೆಯೇ ಎಂಬುದಕ್ಕೆ ಈ ರೀತಿ ಪ್ರತಿಕ್ರಿಯಿಸಿದರು.

‘ರಾಹುಲ್‌ ಪಾತ್ರ ಏನು ಎಂಬುದನ್ನು ನಾಯಕ ವಿರಾಟ್ ಕೊಹ್ಲಿ ಮತ್ತು ತಂಡದ ಆಡಳಿತವು ನಿರ್ಧರಿಸಲಿದೆ’

ADVERTISEMENT

‘ಏಕದಿನ ಮತ್ತು ಟಿ20 ಸರಣಿಯಲ್ಲಿ ಅವರು ಉತ್ತಮವಾಗಿ ಆಡಿದ್ದಾರೆ. ಟೆಸ್ಟ್‌ ಕ್ರಿಕೆಟ್‌ ಅನ್ನು ಉತ್ತಮವಾಗಿಯೇ ಆರಂಭಿಸಿದ್ದ ರಾಹುಲ್‌ ಬಳಿಕ ತುಸು ವೈಫಲ್ಯ ಕಂಡಿದ್ದರು. ಆದರೆ, ಸೀಮಿತ ಓವರ್‌ಗಳ ಮಾದರಿಯಲ್ಲಿ ಅತ್ಯುತ್ತಮವಾಗಿ ಆಡುತ್ತಿದ್ದಾರೆ. ಅವರು ಅದೇ ಪ್ರದರ್ಶನ ಮುಂದುವರಿಸುವ ವಿಶ್ವಾಸವಿದೆ. ಆದರೆ, ಯಾವುದೇ ನಿರ್ಧಾರವನ್ನು ತಂಡದ ಆಡಳಿತ ಮಂಡಳಿಯೇ ತೆಗೆದುಕೊಳ್ಳಲಿದೆ’ ಎಂದು ತಿಳಿಸಿದ್ದಾರೆ.

ಇದೇ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ ನಡೆಯಲಿದೆ. ಅದಕ್ಕೆ ಕೆಲವೇ ತಿಂಗಳುಗಳಿರುವಾಗ ತಂಡದ ವಿಕೆಟ್‌ ಕೀಪರ್‌ ಸ್ಥಾನಕ್ಕಾಗಿ ಆರಂಭವಾಗಿರುವ ಪೈಪೋಟಿ ಕುರಿತು ಕೇಳಲಾದ ಪ್ರಶ್ನೆಗೆ, ‘ತಂಡದ ಆಯ್ಕೆದಾರರು, ನಾಯಕ ವಿರಾಟ್ ಕೊಹ್ಲಿ, ಮುಖ್ಯಕೋಚ್‌ ರವಿಶಾಸ್ತ್ರಿ ಅದನ್ನು ನಿರ್ಧರಿಸುತ್ತಾರೆ. ಅವರ ಯೋಜನೆಯಂತೆ ಅದೆಲ್ಲವು ನಡೆಯಲಿದೆ’ ಎಂದರು.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವೇಗಿಪ್ಯಾಟ್‌ ಕಮಿನ್ಸ್‌ ಎಸೆದ ಚೆಂಡು,ಬ್ಯಾಟಿಂಗ್ ಮಾಡುತ್ತಿದ್ದ ರಿಷಭ್‌ ಪಂತ್‌ ಅವರ ಹೆಲ್ಮೆಟ್‌ಗೆ ಅಪ್ಪಳಿಸಿತ್ತು. ಹೀಗಾಗಿ ಅವರು ವಿಕೆಟ್‌ ಕೀಪಿಂಗ್‌ ಮಾಡಿರಲಿಲ್ಲ. ಅವರನ್ನು ಚಿಕಿತ್ಸೆಗೆ ದಾಖಲಿಸಿದ್ದರಿಂದಾಗಿ ಮುಂದಿನ ಪಂದ್ಯಗಳಲ್ಲಿ ರಾಹುಲ್‌ ಕೀಪಿಂಗ್‌ ಗ್ಲೌಸ್‌ ತೊಟ್ಟಿದ್ದರು. ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು.

ಆ ಸರಣಿಯ ಮೊದಲ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ, ಎರಡನೇ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಮತ್ತು ಮೂರನೇ ಪಂದ್ಯದಲ್ಲಿ ಗಾಯಗೊಂಡ ಶಿಖರ್‌ ಧವನ್‌ ಬದಲು ಇನಿಂಗ್ಸ್‌ ಆರಂಭಿಸಿದ್ದರು. ಈ ಪಂದ್ಯಗಳಲ್ಲಿ ಕ್ರಮವಾಗಿ 47, 80 ಮತ್ತು 19 ರನ್ ಗಳಿಸಿದ್ದರು. ಸದ್ಯ ನಡೆಯುತ್ತಿರುವ ನ್ಯೂಜಿಲೆಂಡ್‌ ವಿರುದ್ಧದ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಇನಿಂಗ್ಸ್‌ ಆರಂಭಿಸಿ 56 ರನ್‌ ಗಳಿಸಿದ್ದರು.

ಯಾವುದೇ ಕ್ರಮಾಂಕದಲ್ಲಿಯೂ ಉತ್ತಮ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ರಾಹುಲ್‌ಗೆ ಇದೆ. ಹೀಗಾಗಿ ಅವರನ್ನೇ ವಿಕೆಟ್‌ ಕೀಪರ್‌ ಆಗಿ ಮುಂದುವರಿಸುವುದರೆ ಹೆಚ್ಚುವರಿಯಾಗಿ ಮತ್ತೊಬ್ಬ ಬ್ಯಾಟ್ಸ್‌ಮನ್‌ ಇಲ್ಲವೆ ಆಲ್ರೌಂಡರ್‌ಗೆ ಸ್ಥಾನ ನೀಡಬಹುದು ಎಂಬುದು ಕೊಹ್ಲಿಯ ಲೆಕ್ಕಾಚಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.