
ವಡೋದರ: ಇಲ್ಲಿನ ಕೊಟಂಬಿ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ನ್ಯೂಜಿಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ 4 ವಿಕೆಟ್ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ 93 ರನ್ ಕಲೆಹಾಕಿದ ವಿರಾಟ್ ಕೊಹ್ಲಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಪಂದ್ರಶ್ರೇಷ್ಠ ಪ್ರಶಸ್ತಿ ಪಡೆದ ಕೊಹ್ಲಿಯವರು ಏಕದಿನ ಕ್ರಿಕೆಟ್‌ನಲ್ಲಿ 45ನೇ ಬಾರಿ ಈ ಪ್ರಶಸ್ತಿ ಪಡೆದ ಸಾಧನೆ ಮಾಡಿದರು. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ವಿಶ್ವದ ಮೂರನೇ ಆಟಗಾರ ಎನಿಸಿಕೊಂಡರು.
ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ ಅವರು, ತಾಯಿಯ ಕುರಿತು ಭಾವನಾತ್ಮಕ ವಿಚಾರ ಹಂಚಿಕೊಂಡಿದ್ದಾರೆ. ಇದು ಅಭಿಮಾನಿಗಳ ಮನಗೆದ್ದಿದೆ.
ಪಂದ್ಯದ ಬಳಿಕ ಹರ್ಷ ಬೋಗ್ಲೆ ಅವರು, ವಿರಾಟ್ ಕೊಹ್ಲಿಯವರಿಗೆ ಎಷ್ಟು ಪಂದ್ಯಶ್ರೇಷ್ಠ ಪ್ರಶಸ್ತಿಗಳು ಬಂದಿವೆ, ಅವುಗಳನ್ನು ಎಲ್ಲಿ ಇಟ್ಟಿದ್ದೀರಾ? ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಅವರು, ಎಷ್ಟು ಎಂಬುದು ತಿಳಿದಿಲ್ಲ. ಆದರೆ, ಎಲ್ಲಾ ಪ್ರಶಸ್ತಿಗಳನ್ನು ತಾಯಿಗೆ ಕಳುಹಿಸಿರುವುದಾಗಿಯೂ ಮತ್ತು ಅವುಗಳನ್ನು ಗುರುಗ್ರಾಮದಲ್ಲಿರುವ ತಾಯಿಯ ಮನೆಯಲ್ಲಿ ಇಡಲು ಇಷ್ಟಪಡುವುದಾಗಿ ತಿಳಿಸಿದರು.
‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನ್ನ ಬಳಿ ಎಷ್ಟು ಪಂದ್ಯಶ್ರೇಷ್ಠ ಪ್ರಶಸ್ತಿಗಳಿವೆ ಎಂಬುದು ನನಗೆ ತಿಳಿದಿಲ್ಲ. ನಾನು ಅವುಗಳನ್ನು ಗುರುಗ್ರಾಮದಲ್ಲಿರುವ ನನ್ನ ತಾಯಿಗೆ ಕಳುಹಿಸುತ್ತೇನೆ. ಅವರು ಅವುಗಳನ್ನು ಜೋಪಾನವಾಗಿ ಇಡಲು ಇಷ್ಟಪಡುತ್ತಾರೆ’ ಎಂದು ಹೇಳಿದರು.
‘ನನ್ನ ಇಡೀ ಕ್ರಿಕೆಟ್ ಪ್ರಯಾಣವನ್ನು ಒಮ್ಮೆ ಹಿಂತಿರುಗಿ ನೋಡಿದರೆ, ನಾನು ಕಂಡ ಕನಸುಗಳು ನನಸಾಗಿರುವುದಕ್ಕಿಂತ ಕಡಿಮೆ ಇಲ್ಲ. ನನಗೆ, ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇತ್ತು. ಈ ಮಟ್ಟಕ್ಕೆ ತಲುಪಲು ನಾನು ಸಾಕಷ್ಟು ಶ್ರಮಪಟ್ಟಿದ್ದೇನೆ. ದೇವರು ನನ್ನ ಜೊತೆಯಲ್ಲಿದ್ದನು’ ಎಂದಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಮೂರನೇ, ಒಟ್ಟಾರೆ ಎರಡನೇ ಸ್ಥಾನ
ಏಕದಿನ ಕ್ರಿಕೆಟ್‌ನಲ್ಲಿ 62 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿರುವ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. 48 ಬಾರಿ ಈ ಪ್ರಶಸ್ತಿ ಪಡೆದಿರುವ ಶ್ರೀಲಂಕಾದ ಸನತ್ ಜಯಸೂರ್ಯ ಎರಡು ಮತ್ತು 45 ಬಾರಿ ಪಡೆದಿರುವ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಇನ್ನೂ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 71 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿರುವ ವಿರಾಟ್ ಕೊಹ್ಲಿ ಅವರು ಸಚಿನ್ ತೆಂಡೂಲ್ಕರ್ ನಂತರದ ಸ್ಥಾನದಲ್ಲಿದ್ದಾರೆ. ಸಚಿನ್ ಅವರು 76 ಬಾರಿ ಈ ಸಾಧನೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.