ADVERTISEMENT

ಮಹಿಳಾ ಐಪಿಎಲ್‌ ಆಯೋಜನೆಗೆ ಗಂಗೂಲಿ ಒಲವು

ಪಿಟಿಐ
Published 2 ಆಗಸ್ಟ್ 2020, 21:29 IST
Last Updated 2 ಆಗಸ್ಟ್ 2020, 21:29 IST
ಭಾರತ ಮಹಿಳಾ ಕ್ರಿಕೆಟ್ ತಂಡ
ಭಾರತ ಮಹಿಳಾ ಕ್ರಿಕೆಟ್ ತಂಡ   

ನವದೆಹಲಿ: ಮಹಿಳೆಯರಿಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಅಥವ ಚಾಲೆಂಜರ್ಸ್ ಸರಣಿಯನ್ನು ಆಯೋಜಿಸುವ ಚಿಂತನೆ ನಡೆದಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಸೆಪ್ಟೆಂಬರ್ 19 ರಿಂದ ನವೆಂಬರ್ 8ರವರೆಗೆ ಯುಎಇಯಲ್ಲಿ ಐಪಿಎಲ್‌ ನಡೆಯಲು ಉದ್ದೇಶಿಸಲಾಗಿದೆ. ಭಾರತದಲ್ಲಿ ಕೊರೊನ ವೈರಸ್‌ ಸೋಂಕು ಹೆಚ್ಚಳದ ಕಾರಣ ಟೂರ್ನಿಯನ್ನು ಯುಎಇಯಲ್ಲಿ ನಡೆಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಮಹಿಳಾ ಐಪಿಎಲ್‌ ಬಗ್ಗೆಯೂ ಯೋಚಿಲಾಗುತ್ತಿದೆ.

’ಮಹಿಳಾ ಐಪಿಎಲ್‌ ಕುರಿತ ಯೋಜನೆ ರೂಪಿಸುವ ಕಾರ್ಯ ಚಾಲ್ತಿಯಲ್ಲಿದೆ. ಅಲ್ಲದೇ ರಾಷ್ಟ್ರೀಯ ಮಹಿಳಾ ಕ್ರಿಕೆಟ್‌ ತಂಡದ ಶಿಬಿರ ಆಯೋಜನೆಯ ಬಗ್ಗೆಯೂ ರೂಪುರೇಷೆ ಸಿದ್ಧಗೊಳ್ಳುತ್ತಿದೆ‘ ಎಂದಿದ್ದಾರೆ.

ADVERTISEMENT

ಪುರುಷರ ಐಪಿಎಲ್ ಆಯೋಜನೆಯ ಭರದಲ್ಲಿ ಮಹಿಳಾ ಕ್ರಿಕೆಟ್‌ ಚಟುವಟಿಕೆಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಈಚೆಗೆ ಟೀಕೆಗಳು ವ್ಯಕ್ತವಾಗಿದ್ದವು. ಭಾರತ ಮಹಿಳಾ ತಂಡವು ಇಂಗ್ಲೆಂಡ್‌ಗೆ ತೆರಳುವುದು ರದ್ದಾಗಿದ್ದರಿಂದ ಆಸ್ಟ್ರೇಲಿಯಾ, ಇಂಗ್ಲೆಂಡ್‌ನ ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿಯರೂ ಟೀಕಿಸಿದ್ದರು.

ಕೂಲಿಂಗ್ ಆಫ್‌ ನಿಯಮದಡಿಯಲ್ಲಿ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರು ಬಿಸಿಸಿಐ ಅಧಿಕಾರದ ಅವಧಿಯು ಮುಕ್ತಾಯವಾಗಿದೆ. ಆದರೆ, ನಿಯಮಗಳ ತಿದ್ದುಪಡಿ ಕೋರಿ ಕೋರ್ಟ್‌ನಲ್ಲಿ ಬಿಸಿಸಿಐ ಅರ್ಜಿ ಸಲ್ಲಿಸಿದೆ. ನ್ಯಾಯಾಲಯದ ತೀರ್ಪು ಬರುವವರೆಗೂ ಇಬ್ಬರೂ ಅಧಿಕಾರದಲ್ಲಿ ಮುಂದುವರಿದಿದ್ದಾರೆ.

’ಮಹಿಳಾ ಚಾಲೆಂಜರ್ಸ್‌ ಟೂರ್ನಿಯನ್ನು ನವೆಂಬರ್ 1ರಿಂದ 10 ರವರೆಗೆ ಆಯೋಜಿಸುವ ಸಾಧ್ಯತೆ ಇದೆ. ಅದಕ್ಕೂ ಮುನ್ನ ರಾಷ್ಟ್ರೀಯ ತರಬೇತಿ ಶಿಬಿರವನ್ನು ಆಯೋಜಿಸಲಾಗುತ್ತಿದೆ‘ ಎಂದು ಮಂಡಳಿಯ ಕೆಲವು ಮೂಲಗಳು ಈಚೆಗೆ ಹೇಳಿದ್ದವು.

’ಆರೋಗ್ಯದ ಸುರಕ್ಷತೆ ನಮ್ಮ ಮೊದಲ ಆದ್ಯತೆ. ನಮ್ಮ ಯಾವುದೇ ಪುರುಷ ಅಥವಾ ಮಹಿಳಾ ಆಟಗಾರರು ಸಂಪೂರ್ಣ ಸುರಕ್ಷಿತವಾಗಿದ್ದಾರೆ. ಕೋವಿಡ್ –19 ಕಾರಣದಿಂದ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯ ಕಾರ್ಯ ಚಟುವಟಿಕೆಗಳೂ ಸ್ಥಗಿತವಾಗಿವೆ. ಮಹಿಳಾ ತಂಡದ ತರಬೇತಿಗೆ ಸ್ಥಳ ನಿಗದಿ ಮಾಡಲು ಯತ್ನಿಸುತ್ತಿದ್ದೇವೆ ‘ ಎಂದು ಗಂಗೂಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.