ADVERTISEMENT

ಖಾಲಿ ಕುರ್ಚಿಗಳೆದುರು ಆಡುತ್ತಿದ್ದ ಪಾಕ್: ಹಿಂದೆ ಇಷ್ಟು ಬೆಂಬಲ ಇರಲಿಲ್ಲ ಎಂದ ಅಲಿ

ದಶಕದ ಬಳಿಕ ಪಾಕಿಸ್ತಾನದಲ್ಲಿ ಟೆಸ್ಟ್: ಪಂದ್ಯ ವೀಕ್ಷಿಸಿದವರಿಗೆಗೆ ಧನ್ಯವಾದ ಹೇಳಿದ ಪಾಕಿಸ್ತಾನ ನಾಯಕ

ಏಜೆನ್ಸೀಸ್
Published 16 ಡಿಸೆಂಬರ್ 2019, 12:27 IST
Last Updated 16 ಡಿಸೆಂಬರ್ 2019, 12:27 IST
   

ರಾವುಲ್ಪಿಂಡಿ: ಪಾಕಿಸ್ತಾನದಲ್ಲಿ ದಶಕಗಳ ಬಳಿಕ ನಡೆದ ಟೆಸ್ಟ್‌ ಪಂದ್ಯಕ್ಕೆ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಈ ಹಿಂದೆ ನಮಗೆಇಷ್ಟು ಬೆಂಬಲ ದೊರೆತಿರಲಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕ ಅಜರ್‌ ಅಲಿ ಹೇಳಿಕೊಂಡಿದ್ದಾರೆ.

2019ರಲ್ಲಿ ಶ್ರೀಲಂಕಾ ಕ್ರಿಕೆಟಿಗರಿದ್ದ ಬಸ್‌ ಮೇಲೆ ಉಗ್ರರು ದಾಳಿ ನಡೆಸಿದ್ದರು. ಅದಾದ ಬಳಿಕ ಪಾಕಿಸ್ತಾನದಲ್ಲಿ ಕ್ರಿಕೆಟ್‌ ಆಡಲು ಯಾವುದೇ ದೇಶದ ಆಟಗಾರರು ಮುಂದೆ ಬರುತ್ತಿರಲಿಲ್ಲ. ಹೀಗಾಗಿ ಪಾಕಿಸ್ತಾನವೂ ತಟಸ್ಥ ಸ್ಥಳದಲ್ಲಿಯೇ ಪಂದ್ಯ ಆಯೋಜಿಸಬೇಕಾಗಿತ್ತು. ಪಾಕಿಸ್ತಾನವುತವರಿನ ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸುತ್ತಿತ್ತು. ಈ ವೇಳೆ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಲ್ಲದೆ, ಖಾಲಿ ಕುರ್ಚಿಗಳೆದುರು ಪಂದ್ಯಗಳು ನಡೆಯುತ್ತಿದ್ದವು.

ಈ ಹಿಂದೆ 2015ರಲ್ಲಿ ಶ್ರೀಲಂಕಾ, ವೆಸ್ಟ್‌ ಇಂಡೀಸ್‌ ತಂಡಗಳ ವಿರುದ್ಧ ಏಕದಿನ ಮತ್ತು ಟಿ20 ಸರಣಿಗಳನ್ನು ಆಯೋಜಿಸಿದೆ. ಆದರೆ ಟೆಸ್ಟ್‌ ಪಂದ್ಯ ಸಾಧ್ಯವಾಗಿರಲಿಲ್ಲ.ಇದೀಗ ಹತ್ತು ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಟೆಸ್ಟ್‌ ಸರಣಿ ಆಡಲು ಶ್ರೀಲಂಕಾ ತಂಡವು ಪ್ರವಾಸ ಕೈಗೊಂಡಿದೆ.ಉಭಯ ದೇಶಗಳ ನಡುವಣ ಎರಡು ಟೆಸ್ಟ್‌ಪಂದ್ಯಗಳ ಸರಣಿ ನಡೆಯುತ್ತಿದೆ.

ಮೊದಲ ಪಂದ್ಯವು ರಾವಲ್ಪಿಂಡಿಯಲ್ಲಿ ಡಿಸೆಂಬರ್‌ 11–15ರವರೆಗೆ ಆಯೋಜನೆಯಾಗಿತ್ತು. ಆ ಪಂದ್ಯ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳುಆಗಮಿಸಿದ್ದರು.ಆ ಕುರಿತು ಮಾತನಾಡಿರುವ ಅಜರ್ ಅಲಿ, ‘ಪಾಕಿಸ್ತಾನದಲ್ಲಿ ಟೆಸ್ಟ್‌ ಕ್ರಿಕೆಟ್‌ ಪಂದ್ಯವನ್ನು ಬೆಂಬಲಿಸಲು ಆಗಮಿಸಿದ್ದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಆದನ್ನು (ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದನ್ನು) ನೋಡಲು ರೋಮಾಂಚನವಾಗುತ್ತದೆ. ಅದೊಂದು ವಿಶೇಷವಾದ ಅನುಭವ. ಒಬ್ಬ ಬೌಲರ್‌ ಅಥವಾ ಬ್ಯಾಟ್ಸ್‌ಮನ್‌ ಆಗಿ ನಾವು ಇದನ್ನು ತಂಬಾ ಕಳೆದುಕೊಂಡಿದ್ದೇವೆ ಎನಿಸುತ್ತದೆ’

‘ನಾವು ಇಷ್ಟು ಪ್ರಮಾಣದ ಬೆಂಬಲವನ್ನು ಈ ಹಿಂದೆ ಪಡೆದುಕೊಂಡಿರಲಿಲ್ಲ. ಇದಕ್ಕಾಗಿ ನಾವು 9–10 ವರ್ಷ ಕಾಯಬೇಕಾಯಿತು. ಇದು ದುರದೃಷ್ಟಕರ. ಈಗಲಾದರೂ ಟೆಸ್ಟ್‌ ಆರಂಭವಾಯಿತಲ್ಲ ಎಂಬುದು ಸಂತಸತಂದಿದೆ’ ಎಂದು ಹೇಳಿಕೊಂಡಿದ್ಧಾರೆ.

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಲಂಕಾ ನಾಯಕ ದಿಮುತ್‌ ಕರುಣರತ್ನೆ (59) ಅರ್ಧಶತಕ ಹಾಗೂ ಧನಂಜಯ ಡಿ ಸಿಲ್ವಾ (102) ಶತಕದ ನೆರವಿನಿಂದ 6 ವಿಕೆಟ್‌ ನಷ್ಟಕ್ಕೆ 308 ರನ್‌ ಗಳಿಸಿದ್ದಾಗ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್‌ ಆರಂಭಿಸಿದ್ದ ಪಾಕಿಸ್ತಾನ 2 ವಿಕೆಟ್‌ ನಷ್ಟಕ್ಕೆ 252 ರನ್‌ ಗಳಿಸಿತ್ತು.

ಆರಂಭಿಕ ಬ್ಯಾಟ್ಸ್‌ಮನ್‌ ಅಬಿದ್‌ ಅಲಿ (109) ಹಾಗೂ ಬಾಬರ್‌ ಅಜಂ (102) ಶತಕ ಗಳಿಸಿದ್ದರು.

ಪಂದ್ಯದಎರಡು, ಮೂರು ಮತ್ತು ನಾಲ್ಕನೇ ದಿನದಾಟಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ, ಕೇವಲ 167 ಓವರ್‌ಗಳ ಆಟವಷ್ಟೇ ಸಾಧ್ಯವಾಗಿತ್ತು. ಹೀಗಾಗಿ ಪಂದ್ಯವು ನೀರಸ ಡ್ರಾ ಕಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.