
ಡೆವಾನ್ ಕಾನ್ವೆ
ಮೌಂಟ್ ಮಾಂಗಾನೂಯಿ: ಟೆಸ್ಟ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ದ್ವಿಶತಕ ಮತ್ತು ಶತಕ ಬಾರಿಸಿದ ಕೇವಲ ಹತ್ತನೇ ಆಟಗಾರ ಎಂಬ ಗೌರವಕ್ಕೆ ನ್ಯೂಜಿಲೆಂಡ್‌ನ ಆಟಗಾರ ಡೆವಾನ್ ಕಾನ್ವೆ ಪಾತ್ರರಾದರು. ಆರಂಭ ಆಟಗಾರರಾದ ಕಾನ್ವೆ ಮತ್ತು ಟಾಮ್ ಲೇಥಮ್ ಅವರ ಶತಕಗಳ ನೆರವಿನಿಂದ ದೊಡ್ಡ ಮೊತ್ತ ಪೇರಿಸಿದ ನ್ಯೂಜಿಲೆಂಡ್ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲ್ಲಲು 462 ರನ್‌ಗಳ ಭಾರಿ ಗುರಿ ನಿಗದಿಪಡಿಸಿತು.
ವೆಸ್ಟ್ ಇಂಡೀಸ್ ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೇ 43 ರನ್ ಗಳಿಸಿದ್ದು, ಗೆಲುವಿಗೆ ಇನ್ನೂ 419 ರನ್ ಗಳಿಸಬೇಕಾಗಿದೆ. ಬ್ರೆಂಡನ್ ಕಿಂಗ್ 37 (46ಎ) ಮತ್ತು ಕ್ಯಾಂಪ್‌ಬೆಲ್ 2 (50 ಎ) ಅಜೇಯರಾಗುಳಿದರು.
ವೆಲಿಂಗ್ಟನ್‌ನಲ್ಲಿ ನಡೆದ ಮೊದಲ ಮತ್ತು ಕ್ರೈಸ್ಟ್ ಚರ್ಚ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯಗಳಲ್ಲಿ ನ್ಯೂಜಿಲೆಂಡ್ ಜಯಗಳಿಸಿತ್ತು.
ನ್ಯೂಜಿಲೆಂಡ್ 2 ವಿಕೆಟ್‌ಗೆ 302 ರನ್ ಗಳಿಸಿ ಎರಡನೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಮೊದಲ ಇನಿಂಗ್ಸ್‌ನಲ್ಲಿ ಅವರು 227 ರನ್ ಬಾರಿಸಿದ್ದರು. ಅವರು ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಆರನೇ ಕಿವೀಸ್ ಆಟಗಾರನಾದರು. ಕೆಲವೇ ನಿಮಿಷಗಳ ನಂತರ ಲೇಥಮ್ ಸಹ ಶತಕ (101) ಬಾರಿಸಿ ಈ ಗೌರವಕ್ಕೆ ಪಾತ್ರರಾದ ನ್ಯೂಜಿಲೆಂಡ್‌ನ ಏಳನೇ ಬ್ಯಾಟರ್ ಎನಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಅವರು 137 ರನ್ ಗಳಿಸಿದ್ದರು.
ಮೊದಲ ಇನಿಂಗ್ಸ್‌ನಲ್ಲಿ ಮೊದಲ ವಿಕೆಟ್‌ಗೆ 323 ರನ್ ಜೊತೆಯಾಟವಾಡಿದ್ದ ಲೇಥಮ್– ಕಾನ್ವೆ, ಎರಡನೇ ಸರದಿಯಲ್ಲಿ 192 ರನ್ ಪೇರಿಸಿದರು. ಪಂದ್ಯದಲ್ಲಿ ಒಟ್ಟು 515 ರನ್ ಜೊತೆಯಾಟವಾಡಿ ಟೆಸ್ಟ್‌ನಲ್ಲಿ ವಿಶ್ವದಾಖಲೆ ಸ್ಥಾಪಿಸಿದರು.
ಒಂದೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಮತ್ತು ಶತಕ ಬಾರಿಸಿದ ಡಗ್ ವಾಲ್ಟರ್ಸ್, ಗ್ರೆಗ್ ಚಾಪೆಲ್, ಮಾರ್ನಸ್ ಲಾಬುಷೇನ್, ಸುನೀಲ್ ಗಾವಸ್ಕರ್, ಶುಭಮನ್ ಗಿಲ್, ಲಾರೆನ್ಸ್ ರೋವ್, ಬ್ರಯಾನ್ ಲಾರಾ, ಗ್ರಹಾಂ ಗೂಚ್ ಮತ್ತು ಕುಮಾರ ಸಂಗಕ್ಕರ ಅವರ ಸಾಲಿಗೆ ಕಾನ್ವೆ ಸೇರ್ಪಡೆಯಾದರು.
ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್: 8 ವಿಕೆಟ್‌ಗೆ 575 ಡಿ. ಮತ್ತು 54 ಓವರುಗಳಲ್ಲಿ 2 ವಿಕೆಟ್‌ಗೆ 306 ಡಿ. (ಲೇಥಮ್ 101, ಕಾನ್ವೆ 100, ಕೇನ್ ವಿಲಿಯಮ್ಸನ್ ಔಟಾಗದೇ 40, ರಚಿನ್ ರವೀಂದ್ರ ಔಟಾಗದೇ 46; ಕವೆಮ್ ಹಾಜ್ 80ಕ್ಕೆ2); ವೆಸ್ಟ್ ಇಂಡೀಸ್: 420 ಮತ್ತು 16 ಓವರುಗಳಲ್ಲಿ ವಿಕೆಟ್ ನಷ್ಟವಿಲ್ಲದೇ 43.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.