ADVERTISEMENT

WI vs AUS: 27 ರನ್‌ಗಳಿಗೆ ವಿಂಡೀಸ್‌ ಆಲೌಟ್; ಸೊನ್ನೆ ಸುತ್ತಿದ್ದ 7 ಬ್ಯಾಟರ್‌ಗಳು

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 10:18 IST
Last Updated 15 ಜುಲೈ 2025, 10:18 IST
<div class="paragraphs"><p>ಮಿಚೆಲ್‌ ಸ್ಟಾರ್ಕ್‌</p></div>

ಮಿಚೆಲ್‌ ಸ್ಟಾರ್ಕ್‌

   

ಕಿಂಗ್ಸ್‌ಟನ್‌: ಇಲ್ಲಿನ ಸಬೀನಾ ಪಾರ್ಕ್‌ ಕ್ರೀಡಾಂಗಣದಲ್ಲಿ 'ಪಿಂಕ್ ಬಾಲ್‌' (ಹಗಲು ರಾತ್ರಿ) ಟೆಸ್ಟ್‌ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಆತಿಥೇಯ ವೆಸ್ಟ್‌ ಇಂಡೀಸ್‌ ಕೇವಲ 27 ರನ್‌ಗಳಿಗೆ ಆಲೌಟ್‌ ಆಗಿದೆ. ಆಸ್ಟ್ರೇಲಿಯಾ ಈ ಪಂದ್ಯವನ್ನು 170 ರನ್‌ಗಳಿಂದ ಗೆದ್ದುಕೊಂಡಿದೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಯ ಮೂರನೇ ಪಂದ್ಯದಲ್ಲಿ ಅತಿ ಕಡಿಮೆ ಮೊತ್ತಕ್ಕೆ ಆಲೌಟ್‌ ಆಯಿತು. ಆಸ್ಟ್ರೇಲಿಯಾ ಪರ ಈ ಮಾದರಿಯಲ್ಲಿ 100 ಪಂದ್ಯಗಳನ್ನಾಡಿದ ಸ್ಟಾರ್‌ ವೇಗಿ ಮಿಚೆಲ್‌ ಸ್ಟಾರ್ಕ್‌ 6 ವಿಕೆಟ್‌ ಪಡೆದು ಸಂಭ್ರಮಿಸಿದರು. ವೆಸ್ಟ್‌ ಇಂಡೀಸ್‌ನ ಏಳು ಬ್ಯಾಟರ್‌ಗಳು ಶೂನ್ಯಕ್ಕೆ ಔಟಾಗಿದ್ದು ವಿಶೇಷ.

ADVERTISEMENT

ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 225 ರನ್‌ ದಾಖಲಿಸಿತ್ತು. ವಿಂಡೀಸ್‌ ಕೇವಲ 143 ರನ್‌ಗಳಿಗೆ ಸರ್ವಪತನವಾಗಿ 82 ರನ್‌ಗಳ ಹಿನ್ನಡೆ ಅನುಭವಿಸಿತ್ತು. ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 121 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ವಿಂಡಿಸ್‌ಗೆ 203 ರನ್‌ಗಳ ಗೆಲುವಿನ ಗುರಿ ನೀಡಿತು. 

ಎರಡನೇ ಇನ್ನಿಂಗ್ಸ್‌ ಆರಂಭಿಸಿದ ವಿಂಡೀಸ್‌ ಕೇವಲ 14.3 ಓವರ್‌ಗಳಲ್ಲಿ ಆಲೌಟ್‌ ಆಯಿತು. ಕ್ಯಾಂಬೆಲ್, ಆ್ಯಂಡರ್ಸನ್‌, ಬ್ರೆಂಡನ್‌ ಕಿಂಗ್‌, ಚೇಸ್‌, ಶಮರ್‌ ಜೋಸೆಫ್‌, ಜೇಡನ್‌ ಸೀಲ್ಸ್‌, ವಾರಿಕನ್‌ ಶೂನ್ಯಕ್ಕೆ ಔಟಾದರು.

ಮಿಚೆಲ್‌ ಸ್ಟಾರ್ಕ್‌ 7.3 ಓವರ್‌ಗಳಲ್ಲಿ 9 ರನ್‌ ನೀಡಿ 6 ವಿಕೆಟ್‌ ಕಬಳಿಸಿದರು. ಸ್ಕಾಟ್ ಬೋಲ್ಯಾಂಡ್ ಹ್ಯಾಟ್ರಿಕ್‌ ವಿಕೆಟ್‌ ಪಡೆದು ಆಸ್ಟ್ರೇಲಿಯಾ ಗೆಲುವಿಗೆ ಕಾರಣರಾದರು.

ಈ ಹಿಂದೆ ಟೆಸ್ಟ್‌ನಲ್ಲಿ ಕಡಿಮೆ ಮೊತ್ತಕ್ಕೆ ನ್ಯೂಜಿಲೆಂಡ್‌ ಆಲೌಟ್ ಆಗಿತ್ತು. ಇಂಗ್ಲೆಂಡ್‌ ವಿರುದ್ಧ ನ್ಯೂಜಿಲೆಂಡ್‌ 26 ರನ್‌ಗಳಿಗೆ ಆಲೌಟ್‌ ಆಗಿತ್ತು.

ಸ್ಕೋರ್‌

ಆಸ್ಟ್ರೇಲಿಯಾ: 225-10 (70.3 ಓವರ್ಸ್) ಮತ್ತು 121-10 (37 ಓವರ್ಸ್‌)

ವೆಸ್ಟ್‌ ಇಂಡೀಸ್‌: 143-10 (52.1 ಓವರ್ಸ್) ಮತ್ತು 27-10 (14.3 ಓವರ್ಸ್‌) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.