ADVERTISEMENT

ಫೇರ್‌ಫಾಕ್ಸ್‌ ವಿರುದ್ಧದ ಮಾನನಷ್ಟ ಮೊಕದ್ದಮೆ: ಕಾನೂನು ಸಮರದಲ್ಲಿ ಗೆದ್ದ ಗೇಲ್‌

ಏಜೆನ್ಸೀಸ್
Published 3 ಡಿಸೆಂಬರ್ 2018, 17:40 IST
Last Updated 3 ಡಿಸೆಂಬರ್ 2018, 17:40 IST
ಕ್ರಿಸ್‌ ಗೇಲ್‌
ಕ್ರಿಸ್‌ ಗೇಲ್‌   

ಸಿಡ್ನಿ: ಆಸ್ಟ್ರೇಲಿಯಾದ ಫೇರ್‌ಫಾಕ್ಸ್‌ ಮಾಧ್ಯಮ ಸಂಸ್ಥೆಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದ ವೆಸ್ಟ್‌ ಇಂಡೀಸ್‌ನ ಕ್ರಿಕೆಟಿಗ ಕ್ರಿಸ್‌ ಗೇಲ್‌ ಇದರಲ್ಲಿ ಗೆಲುವು ದಾಖಲಿಸಿದ್ದಾರೆ.

ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯೂ ಸೌತ್‌ ವೇಲ್ಸ್‌ ಸುಪ್ರೀಂಕೋರ್ಟ್‌ನ ನ್ಯಾಯಧೀಶೆ ಲೂಸಿ ಮೆಕ್ಲಮ್‌, ಫೇರ್‌ಫಾಕ್ಸ್‌ ಸಂಸ್ಥೆಯು ಗೇಲ್‌ಗೆ ₹ 1.55 ಕೋಟಿ ಪರಿಹಾರ ಕೊಡಬೇಕೆಂದು ಆದೇಶಿಸಿದ್ದಾರೆ.

‘2015ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ ವೇಳೆ ಮಹಿಳಾ ಮಸಾಜ್‌ ಥೆರಪಿಸ್ಟ್‌ ಒಬ್ಬರು ವಿಂಡೀಸ್‌ ತಂಡದ ಡ್ರೆಸಿಂಗ್‌ ಕೊಠಡಿಗೆ ಹೋಗಿದ್ದರು. ಈ ವೇಳೆ ಗೇಲ್‌ ಅವರು ಜನನಾಂಗವನ್ನು ತೋರಿಸಿ, ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದರು’ ಎಂದು ದಿ ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌ ಮತ್ತು ದಿ ಏಜ್‌ ಪತ್ರಿಕೆಗಳು ಸರಣಿ ಸುದ್ದಿಗಳನ್ನು ‍ಪ್ರಕಟಿಸಿದ್ದವು.

ADVERTISEMENT

ಸಿಡ್ನಿ ಮಾರ್ನಿಂಗ್‌ ಮತ್ತು ದಿ ಏಜ್‌ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳು ನಿರಾಧಾರ. ಅವುಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಆರೋಪಿಸಿದ್ದ ಗೇಲ್‌, 2016ರಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ವಿಂಡೀಸ್‌ ತಂಡದ ಮತ್ತೊಬ್ಬ ಆಟಗಾರ ಡ್ವೇನ್ ಸ್ಮಿತ್‌ ಕೂಡಾ ಗೇಲ್‌ ಮೇಲಿನ ಆರೋಪವನ್ನು ಅಲ್ಲಗಳೆದಿದ್ದರು.

‘ಗೇಲ್‌ ವಿರುದ್ಧದ ಆರೋಪ ಸಾಬೀತುಪಡಿಸುವಂತಹ ಯಾವುದೇ ಸಾಕ್ಷ್ಯಗಳನ್ನು ಫೇರ್‌ಫಾಕ್ಸ್‌ ಸಂಸ್ಥೆ ನೀಡಿಲ್ಲ. ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸುದ್ದಿಗಳು ಸುಳ್ಳು ಎಂಬುದು ಇದರಿಂದ ಮನದಟ್ಟಾಗುತ್ತದೆ. ಇದರಿಂದ ಗೇಲ್‌ ಅವರ ಗೌರವಕ್ಕೆ ಧಕ್ಕೆ ಉಂಟಾಗಿದೆ. ಅವರಿಗೆ ಸಂಸ್ಥೆಯು ₹1.55 ಕೋಟಿ ಪರಿಹಾರ ನೀಡಬೇಕು’ ಎಂದು ಲೂಸಿ, ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಫೇರ್‌ಫಾಕ್ಸ್‌ ಸಂಸ್ಥೆ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.