ಬಿಸಿಸಿಐ ಕಾರ್ಯದರ್ಶಿ ಜಯ್ ಶಾ
ಪಿಟಿಐ
ನವದೆಹಲಿ: ಜಯ್ ಶಾ ಅವರು ಡಿಸೆಂಬರ್ 1ರಂದು ಐಸಿಸಿಯ ಅತಿ ಕಿರಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಅತ್ಯಂತ ಪ್ರಭಾವಶಾಲಿ ಹುದ್ದೆಯಾದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಸ್ಥಾನ ಖಾಲಿ ಉಳಿದಿದೆ. ಮುಂದಿನ ಕಾರ್ಯಬಾರ ವಹಿಸಲು ಈ ಹುದ್ದೆಗೆ ಯಾರು ಬರುತ್ತಾರೆಂಬ ಕುತೂಹಲದಲ್ಲಿ ಅಧಿಕಾರಿಗಳಿದ್ದಾರೆ.
2022ರಲ್ಲಿ ಮಂಡಳಿಯ ನಿಯಮಾವಳಿಗೆ ತಿದ್ದುಪಡಿ ತಂದ ಮೇಲೆ ಬಿಸಿಸಿಐನಲ್ಲಿ ಕಾರ್ಯದರ್ಶಿ ಹುದ್ದೆ ಅತ್ಯಂತ ಪ್ರಭಾವಶಾಲಿಯತಾಗಿದೆ. ಕ್ರಿಕೆಟ್ ಮತ್ತು ಕ್ರಿಕೆಟ್‌ಗೆ ಹೊರತಾದ ವಿಷಯಗಳಲ್ಲಿ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರ ಕಾರ್ಯದರ್ಶಿಗಿದೆ. ಸಿಇಒ ಸಹ ಅವರ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸುತ್ತಾರೆ.
ಐಸಿಸಿ ವರಿಷ್ಠ ಹುದ್ದೆಗೆ ಕಳೆದ ಆಗಸ್ಟ್‌ನಲ್ಲಿ ಶಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಂದಿನಿಂದ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಹೇಗೆ ನಡೆಯಬಹುದೆಂಬ ಕುತೂಹಲ ಉಳಿದಿದೆ.
ಗುಜರಾತ್‌ನ ಅನಿಲ್ ಪಟೇಲ್ ಮತ್ತು ಬಿಸಿಸಿಐನ ಹಾಲಿ ಜಂಟಿ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಜಯ್ ಶಾ ಸ್ಥಾನಕ್ಕೆ ತುಂಬಬಹುದು. ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ರೋಹನ್ ಜೇಟ್ಲಿ ಅವರು ಈ ಸ್ಥಾನಕ್ಕೆ ಬರಬಹುದೆಂಬ ವದಂತಿಗಳೂ ಕೇಳಿಬಂದಿಂದ್ದವು.
‘ಸದ್ಯ ಏನಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ಎಲ್ಲರೂ (ಬಿಸಿಸಿಐ ಅಧಿಕಾರಿಗಳು, ರಾಜ್ಯ ಘಟಕಗಳು) ಈ ವಿಷಯದಲ್ಲಿ ಮೌನ ತಳೆದಿದ್ದಾರೆ. ಜಂಟಿ ಕಾರ್ಯದರ್ಶಿ (ಸೈಕಿಯಾ) ಬಹುತೇಕ ಹಂಗಾಮಿಯಾಗಿ ಅಧಿಕಾರ ವಹಿಸಿಕೊಳ್ಳಬಹುದು’ ಎಂದು ಬಿಸಿಸಿಐ ಆಡಳಿತಾಧಿಕಾರಿ ಒಬ್ಬರು ತಿಳಿಸಿದರು.
ಆಯ್ಕೆಯಾದ ಪದಾಧಿಕಾರಿ ರಾಜೀನಾಮೆ ನೀಡಿದಲ್ಲಿ ಅವರ ಉತ್ತರಾಧಿಕಾರಿ ಆಯ್ಕೆ ನಡೆಸಲು 45 ದಿನಗಳ ಒಳಗೆ ವಿಶೇಷ ಸರ್ವಸದಸ್ಯರ ಸಭೆ ಕರೆಯಬೇಕಾಗುತ್ತದೆ. ಈಗಿನ ಪ್ರಕಾರ ಜನವರಿ ಮಧ್ಯದೊಳಗೆ ಈ ಸಭೆ ಕರೆಯಬೇಕಾಗಿದೆ. ಚುನಾವಣೆಗೆ ನಾಲ್ಕು ವಾರಗಳ ಮೊದಲ ಚುನಾವಣಾ ಅಧಿಕಾರಿಯನ್ನು ನೇಮಿಸಬೇಕು ಎಂಬ ನಿಯಮವಿದೆ.
ಈ ಪ್ರಕ್ರಿಯೆ ಸರಾಗವಾಗಿ ನಡೆಯಲು ಬಿಸಿಸಿಐ ಮುಂದೆ ಸಾಕಷ್ಟು ಕಾಲಾವಕಾಶವಿದೆ ಎಂದು ರಾಜ್ಯ ಘಟಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಈ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಇಷ್ಟೊತ್ತಿಗೆ ಪೂರ್ಣಗೊಳ್ಳಬೆಕಿತ್ತು. ಕಾರ್ಯದರ್ಶಿಯವರು ಹೆಚ್ಚಿನ ಕಡತಗಳಿಗೆ ಸಹಿ ಹಾಕಬೇಕಾಗಿರುತ್ತದೆ. ಈ ವಿಷಯವನ್ನು ಸೆಪ್ಟೆಂಬರ್‌ನಲ್ಲಿ ನಡೆದ ಎಜಿಎಂನಲ್ಲಿ ಕೈಗೊಳ್ಳಬೇಕಾಗಿತ್ತು. ಆದರೆ ಆಗ ಯಾರೂ ಪ್ರಶ್ನೆ ಎತ್ತಲಿಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದರು.
‘ವಿಶ್ವದ ಅತ್ಯಂತ ಬಲಿಷ್ಠ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐನಲ್ಲಿ ಈಗ ಅಧಿಕಾರದ ನಿರ್ವಾತ ಸೃಷ್ಟಿಯಾಗಿದೆ’ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದರು.
ಹಾಲಿ ಅಧಿಕಾರವರ್ಗದ ಮೂರು ವರ್ಷಗಳ ಅವಧಿ ಮುಂದಿನ ವರ್ಷದ ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳಲಿದೆ. ಹೀಗಾಗಿ ಈಗ ಅಧಿಕಾರ ವಹಿಸುವ ಕಾರ್ಯದರ್ಶಿ ಅವರಿಗೆ ಒಂದು ವರ್ಷ ಅವಧಿ ಸಿಗಲಿದೆ.
ಐಸಿಸಿ ಮಂಡಳಿಯಲ್ಲಿ ಬಿಸಿಸಿಐ ಪ್ರತಿನಿಧಿ ಯಾರು ಎಂಬ ವಿಷಯದಲ್ಲೂ ನಿರ್ಧಾರ ಆಗಿಲ್ಲ. ಷಾ ಅವರು ಈ ಹೊಣೆಯನ್ನೂ ತಮ್ಮಲ್ಲೇ ಇಟ್ಟುಕೊಂಡಿದ್ದರು. ಈಗ ಮಂಡಳಿಯಲ್ಲಿ ನಿರ್ದೇಶಕ ಸ್ಥಾನಕ್ಕೆ ರೋಜರ್ ಬಿನ್ನಿ ಹೆಸರು ಕೇಳಿಬರುತ್ತಿದೆ.
ಐಸಿಸಿಯ ಚೀಫ್ ಎಕ್ಸಿಕ್ಯೂಟಿವ್ ಸಮಿತಿಗೆ ಅರುಣ್ ಧುಮಾಲ್ ಭಾರತದ ಪ್ರತಿನಿಧಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.