ADVERTISEMENT

ನನ್ನ ಇಷ್ಟದ ಶೈಲಿಯ ಬ್ಯಾಟಿಂಗ್ ಮುಂದುವರಿಸುವೆ: ಸಂಜು ಸ್ಯಾಮ್ಸನ್‌

ಪಿಟಿಐ
Published 20 ಏಪ್ರಿಲ್ 2021, 11:54 IST
Last Updated 20 ಏಪ್ರಿಲ್ 2021, 11:54 IST
ಸಂಜು ಸ್ಯಾಮ್ಸನ್‌–ಪಿಟಿಐ ಚಿತ್ರ
ಸಂಜು ಸ್ಯಾಮ್ಸನ್‌–ಪಿಟಿಐ ಚಿತ್ರ   

ಮುಂಬೈ: ನಾನು ಇಷ್ಟಪಡುವ ಶೈಲಿಯಲ್ಲೇ ಬ್ಯಾಟಿಂಗ್ ಮುಂದುವರಿಸುವೆ; ವೈಫಲ್ಯಗಳ ಬಗ್ಗೆ ಚಿಂತಿಸುವುದಿಲ್ಲ ಎಂದು ರಾಜಸ್ಥಾನ ರಾಯಲ್ಸ್ ಕ್ರಿಕೆಟ್ ತಂಡದ ನಾಯಕ ಸಂಜು ಸ್ಯಾಮ್ಸನ್ ಹೇಳಿದ್ದಾರೆ.

ಈ ಬಾರಿಯ ಇಂಡಿಯನ್‌ ಪ್ರೀಮಿಯರ್ ಲೀಗ್ (ಐಪಿಎಲ್‌) ಟೂರ್ನಿಯ ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌, ಪಂಜಾಬ್ ಕಿಂಗ್ಸ್ ವಿರುದ್ಧ ಶತಕ ಸಿಡಿಸಿದ್ದರು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಎದುರು ವೈಫಲ್ಯ ಅನುಭವಿಸಿದ್ದರು.

ಸೋಮವಾರ ನಡೆದ ಪಂದ್ಯದಲ್ಲಿ ಧೋನಿ ನಾಯಕತ್ವದ ಚೆನ್ನೈ ತಂಡವು ರಾಜಸ್ಥಾನ ತಂಡವನ್ನು 45 ರನ್‌ಗಳಿಂದ ಮಣಿಸಿತ್ತು. ಮೊದಲು ಬ್ಯಾಟ್ ಮಾಡಿದ್ದ ಚೆನ್ನೈ ಒಂಬತ್ತು ವಿಕೆಟ್‌ ಕಳೆದುಕೊಂಡು 188 ರನ್‌ ಗಳಿಸಿತ್ತು. ಸ್ಯಾಮ್ಸನ್ ಬಳಗ ನಿಗದಿತ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗೆ 143 ರನ್ ಕಲೆಹಾಕಿತ್ತು. ಸ್ಯಾಮ್ಸನ್ ಕೇವಲ ಒಂದು ರನ್ ಗಳಿಸಿ ಸ್ಯಾಮ್‌ ಕರನ್ ಎಸೆತದಲ್ಲಿ ಔಟಾಗಿದ್ದರು.

ADVERTISEMENT

‘20 ಓವರ್‌ಗಳ ಮಾದರಿಯ ಆಟದಲ್ಲಿ ವೈಫಲ್ಯಗಳು ಸಾಮಾನ್ಯ. ಐಪಿಎಲ್‌, ಅಪಾಯಕಾರಿ ಹೊಡೆತಗಳ ಆಯ್ಕೆ ಬಯಸುತ್ತದೆ. ನಾನು ಯಶಸ್ವಿಯಾದ ಸಂದರ್ಭದಲ್ಲಿ ಇಂತಹ ಹೊಡೆತಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಈ ಕಾರಣದಿಂದಲೇ ನಾನು ಶತಕವನ್ನೂ ಗಳಿಸಿದ್ದೇನೆ. ಹೀಗಾಗಿ ಅಂದಿನ ಆಟ ಆ ದಿನ ನಾವು ಹೊಂದಿರುವ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ‘ ಎಂದು ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಜು ಸ್ಯಾಮ್ಸನ್ ನುಡಿದರು.

‘ಐಪಿಎಲ್ ದೀರ್ಘ ಅವಧಿಯ ಟೂರ್ನಿಯಾಗಿದ್ದು, ಕೆಲವು ಪಂದ್ಯಗಳಲ್ಲಿ ವೈಫಲ್ಯ ಸಾಮಾನ್ಯ‘ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.