ADVERTISEMENT

Sri Lanka vs West Indies: ದಿಮುತ್ ಶತಕದ ಸೊಬಗು; ಬೃಹತ್ ಮೊತ್ತದತ್ತ ಶ್ರೀಲಂಕಾ

ವೆಸ್ಟ್ ಇಂಡೀಸ್ ಎದುರಿನ ಮೊದಲ ಟೆಸ್ಟ್ ಪಂದ್ಯ; ಮೊದಲ ವಿಕೆಟ್‌ಗೆ ಮೂರಂಕಿ ಮೊತ್ತದ ಜೊತೆಯಾಟ

ಏಜೆನ್ಸೀಸ್
Published 21 ನವೆಂಬರ್ 2021, 13:46 IST
Last Updated 21 ನವೆಂಬರ್ 2021, 13:46 IST
ದಿಮುತ್ ಕರುಣರತ್ನೆ ಅವರ ಶತಕದ ಸಂಭ್ರಮ –ಎಎಫ್‌ಪಿ ಚಿತ್ರ
ದಿಮುತ್ ಕರುಣರತ್ನೆ ಅವರ ಶತಕದ ಸಂಭ್ರಮ –ಎಎಫ್‌ಪಿ ಚಿತ್ರ   

ಗಾಲ್‌, ಶ್ರೀಲಂಕಾ: ಅರಂಭಿಕ ಬ್ಯಾಟರ್‌, ನಾಯಕ ದಿಮುತ್ ಕರುಣರತ್ನೆ (ಬ್ಯಾಟಿಂಗ್‌ 132; 265 ಎಸೆತ, 13 ಬೌಂಡರಿ) ಅವರ ಅಮೋಘ ಆಟದ ನೆರವಿನಿಂದ ಶ್ರೀಲಂಕಾ ಭಾನುವಾರ ಆರಂಭಗೊಂಡ ವೆಸ್ಟ್ ಇಂಡೀಸ್ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತದತ್ತ ದಾಪುಗಾಲು ಹಾಕಿದೆ.

ಟಾಸ್ ಗೆದ್ದ ಆತಿಥೇಯ ತಂಡ ಬ್ಯಾಟಿಂಗ್ ಆರಿಸಿಕೊಂಡಿತು. ಎದುರಾಳಿ ತಂಡದ ಬೌಲರ್‌ಗಳನ್ನು ಸತತವಾಗಿ ಕಾಡಿದ ಬ್ಯಾಟರ್‌ಗಳು ಭರ್ಜರಿ ಆಟವಾಡಿದರು. ಬೆಳಕಿನ ಅಭಾವದಿಂದ ದಿನದಾಟ ನಿಂತಾದ ತಂಡ 88 ಓವರ್‌ಗಳಲ್ಲಿ ಮೂರು ವಿಕೆಟ್‌ಗಳಿಗೆ 267 ರನ್ ಕಲೆ ಹಾಕಿದೆ.

ಪಾಥುಮ್ ನಿಸಾಂಕ (56; 140 ಎ 7 ಬೌಂ) ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ದಿಮುತ್ ಮೊದಲ ವಿಕೆಟ್‌ಗೆ 139 ರನ್ ಸೇರಿಸಿದರು. ಸ್ಪಿನ್ನರ್ ರಾಸ್ಟನ್ ಚೇಸ್‌ ಅವರು ಒಶಾಡೊ ಫೆರ್ನಾಂಡೊ ಮತ್ತು ಏಂಜೆಲೊ ಮ್ಯಾಥ್ಯೂಸ್ ವಿಕೆಟ್ ಉರುಳಿಸಿದಾಗ ವೆಸ್ಟ್ ಇಂಡೀಸ್‌ ತಂಡದಲ್ಲಿ ಭರವಸೆ ಮೂಡಿತು. ಆದರೆ ದಿನಿವಿಡೀ ಕ್ರೀಸ್‌ನಲ್ಲಿ ಉಳಿದು ಮಿಂಚಿದರು. ಅವರೊಂದಿಗೆ ಧನಂಜಯ ಸಿಲ್ವಾ (56; 77 ಎ, 5 ಬೌಂ)ಮುರಿಯದ ನಾಲ್ಕನೇ ವಿಕೆಟ್‌ಗೆ 97 ರನ್ ಸೇರಿಸಿದರು.

ADVERTISEMENT

ಕರುಣರತ್ನೆ ಅವರು ಟೆಸ್ಟ್‌ನಲ್ಲಿ 13ನೇ ಶತಕ ಸಿಡಿಸಿದರು. ಇದು ಈ ವರ್ಷದಲ್ಲಿ ಅವರ ನಾಲ್ಕನೇ ಶತಕವಾಗಿದೆ. 2021ರಲ್ಲಿ ಈ ವರೆಗೆ 10 ಇನಿಂಗ್ಸ್ ಆಡಿರುವ ಅವರು 750 ರನ್ ಗಳಿಸಿದ್ದಾರೆ. ಜೀವನಶ್ರೇಷ್ಠ 244 ರನ್ ಕೂಡ ಇದರಲ್ಲಿ ಸೇರಿದೆ. ಬಾಂಗ್ಲಾದೇಶ ವಿರುದ್ಧ ಅವರು ಈ ಸಾಧನೆ ಮಾಡಿದ್ದಾರೆ.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ (ಮೊದಲ ಇನಿಂಗ್ಸ್‌): 88 ಓವರ್‌ಗಳಲ್ಲಿ 3ಕ್ಕೆ 267 (ಪಾಥುಮ್ ನಿಸಾಂಕ 56, ದಿಮುತ್ ಕರುಣರತ್ನೆ ಬ್ಯಾಟಿಂಗ್ 132, ಧನಂಜಯ ಡಿ ಸಿಲ್ವಾ ಬ್ಯಾಟಿಂಗ್‌ 56; ಶಾನಾನ್ ಗ್ಯಾಬ್ರಿಯಲ್‌ 56ಕ್ಕೆ1, ರಾಸ್ಟನ್ ಚೇಸ್‌ 42ಕ್ಕೆ2). ವೆಸ್ಟ್ ಇಂಡೀಸ್ ಎದುರಿನ ಪಂದ್ಯ.

ಜೆರೆಮಿ ಸೊಲೊಜಾನೊ ಅಪಾಯದಿಂದ ಪಾರು

ತಲೆಗೆ ಪೆಟ್ಟು ಬಿದ್ದು ಆಸ್ಪತ್ರೆ ಸೇರಿರುವ ವೆಸ್ಟ್ ಇಂಡೀಸ್‌ನ ಜೆರೆಮಿ ಸೊಲೊಜಾನೊ ಅಪಾಯದಿಂದ ಪಾರಾಗಿದ್ದಾರೆ. ಭಾನುವಾರ ಶ್ರೀಲಂಕಾ ಇನಿಂಗ್ಸ್‌ ವೇಳೆ ಶಾರ್ಟ್‌ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಜೆರೆಮಿ ಅವರಿಗೆ ಗಾಯವಾಗಿತ್ತು.

ರಾಸ್ಟನ್ ಚೇಸ್ ಎಸೆತವನ್ನು ದಿಮುತ್ ಪುಲ್ ಮಾಡಿದ್ದರು. ಚೆಂಡು ಜೆರೆಮಿ ಅವರ ಹೆಲ್ಮೆಟ್‌ಗೆ ಬಡಿದಿತ್ತು. ಹೆಲ್ಮೆಟ್‌ನ ‘ಗ್ರಿಲ್ಸ್‌’ ಮುರಿದು ಅವರಿಗೆ ಪೆಟ್ಟಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಅಪಾಯದಿಂದ ಪಾರಾಗಿರುವುದಾಗಿ ಸ್ಕ್ಯಾನಿಂಗ್ ನಂತರ ವೈದ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.