ADVERTISEMENT

IPL-2023 'ಎಲಿಮಿನೇಟರ್‌’ ಪಂದ್ಯ: ಮುಂಬೈ ಇಂಡಿಯನ್ಸ್‌ಗೆ ಲಖನೌ ಸವಾಲು

ಆತ್ಮವಿಶ್ವಾಸದಲ್ಲಿ ರೋಹಿತ್‌ ಬಳಗ

ಪಿಟಿಐ
Published 23 ಮೇ 2023, 20:30 IST
Last Updated 23 ಮೇ 2023, 20:30 IST
ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮಾ
ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮಾ   

ಚೆನ್ನೈ: ಐಪಿಎಲ್‌ ಟೂರ್ನಿಯ ಪ್ಲೇ ಆಫ್‌ಗೆ ‘ನಾಟಕೀಯ’ ರೀತಿಯಲ್ಲಿ ಪ್ರವೇಶ ಪಡೆದಿರುವ ಮುಂಬೈ ಇಂಡಿಯನ್ಸ್‌ ತಂಡ, ಬುಧವಾರ ನಡೆಯಲಿರುವ ‘ಎಲಿಮಿನೇಟರ್‌’ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ತಂಡವನ್ನು ಎದುರಿಸಲಿದೆ.

ಕಳೆದ ಟೂರ್ನಿಯಲ್ಲಿ ಕೊನೆಯ ಸ್ಥಾನ ಪಡೆದು ಮುಖಭಂಗ ಅನುಭವಿಸಿದ್ದ ರೋಹಿತ್‌ ಶರ್ಮಾ ಬಳಗ, ಈ ಬಾರಿ ಅಲ್ಪ ಅದೃಷ್ಟದ ನೆರವಿನೊಂದಿಗೆ ಲೀಗ್‌ ಹಂತವನ್ನು ದಾಟಿದೆ. ಭಾನುವಾರ ನಡೆದಿದ್ದ ಕೊನೆಯ ಲೀಗ್‌ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ತಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಮಣಿಸಿದ್ದರಿಂದ ಮುಂಬೈ ‘ಪ್ಲೇ ಆಫ್‌’ನಲ್ಲಿ ಸ್ಥಾನ ಪಡೆದಿತ್ತು.

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಸೋಲುವ ತಂಡ ಟೂರ್ನಿಯಿಂದ ಹೊರಬೀಳಲಿದ್ದು, ಗೆಲುವು ಸಾಧಿಸುವ ತಂಡ ಮೇ 26 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ‘ಕ್ವಾಲಿಫೈಯರ್‌–2’ ಪಂದ್ಯದಲ್ಲಿ ಆಡಲಿದೆ.

ADVERTISEMENT

ಲಖನೌ ತಂಡ ಕಳೆದ ಆವೃತ್ತಿಯ ಟೂರ್ನಿಯ ‘ಎಲಿಮಿನೇಟರ್‌’ನಲ್ಲಿ ಆರ್‌ಸಿಬಿ ಎದುರು ಸೋತಿತ್ತು. ಈ ಬಾರಿ ಅಲ್ಪ ಮುಂದೆ ಹೆಜ್ಜೆಯಿಡಬೇಕು ಎಂಬ ಛಲದೊಂದಿಗೆ ಮುಂಬೈ ವಿರುದ್ಧ ಕಣಕ್ಕಿಳಿಯಲಿದೆ. ಕೆ.ಎಲ್‌.ರಾಹುಲ್‌ ಅವರು ಗಾಯಗೊಂಡು ಟೂರ್ನಿಯಿಂದ ಅರ್ಧದಲ್ಲೇ ಹೊರನಡೆದಿದ್ದರೂ, ಕೃಣಾಲ್ ಪಾಂಡ್ಯ ಅವರು ನಾಯಕತ್ವದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.

ಬ್ಯಾಟಿಂಗ್‌ ಬಲ: ಮುಂಬೈ ತಂಡವು ತನ್ನ ಬ್ಯಾಟಿಂಗ್‌ ಶಕ್ತಿಯ ಮೇಲೆ ನಂಬಿಕೆ ಇಟ್ಟುಕೊಂಡಿದೆ. ಸೂರ್ಯಕುಮಾರ್‌ ಯಾದವ್‌, ಇಶಾನ್‌ ಕಿಶನ್‌, ರೋಹಿತ್‌ ಮತ್ತು ಕ್ಯಾಮರೂನ್‌ ಗ್ರೀನ್‌ ಉತ್ತಮ ಲಯದಲ್ಲಿ ಆಡುತ್ತಿದ್ದಾರೆ. ಸೂರ್ಯಕುಮಾರ್‌ ಅವರು ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳ ನೆರವಿನಿಂದ ಒಟ್ಟು 511 ರನ್‌ ಕಲೆಹಾಕಿದ್ದಾರೆ.

ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ರೀನ್‌, ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಕೊನೆಯ ಲೀಗ್‌ ಪಂದ್ಯದಲ್ಲಿ ಅಬ್ಬರದ ಶತಕ ಗಳಿಸಿದ್ದರು. ರೋಹಿತ್‌ ಬಳಗದ ಬ್ಯಾಟರ್‌ಗಳನ್ನು ಕಟ್ಟಿಹಾಕಬೇಕಾದರೆ, ಸಾಕಷ್ಟು ಪರಿಶ್ರಮ ಅಗತ್ಯ ಎಂಬ ಅರಿವು ಲಖನೌ ಬೌಲರ್‌ಗಳಿಗೆ ಇದೆ.

ಮುಂಬೈನ ಬಲಿಷ್ಠ ಬ್ಯಾಟಿಂಗ್‌ ಕ್ರಮಾಂಕಕ್ಕೆ ಕಡಿವಾಣ ತೊಡಿಸಬೇಕಾದರೆ ಲೆಗ್‌ಸ್ಪಿನ್ನರ್ ರವಿ ಬಿಷ್ಣೋಯಿ ಅವರು ಮಹತ್ವದ ಪಾತ್ರ ವಹಿಸಬೇಕಿದೆ. ಬಿಷ್ಣೋಯಿ ಒಟ್ಟು 16 ವಿಕೆಟ್‌ ಪಡೆದಿದ್ದಾರೆ. ನವೀನ್‌ ಉಲ್‌ ಹಕ್‌, ಆವೇಶ್‌ ಖಾನ್‌, ಅಮಿತ್‌ ಮಿಶ್ರಾ ಮತ್ತು ಕೃಣಾಲ್‌ ಅವರಿಂದಲೂ ಬಿಗುವಾದ ದಾಳಿ ಮೂಡಿಬರಬೇಕಿದೆ.

ರಾಹುಲ್‌ ಅನುಪಸ್ಥಿತಿಯಲ್ಲಿ ಮಾರ್ಕಸ್‌ ಸ್ಟೊಯಿನಿಸ್‌, ಕೈಲ್‌ ಮೇಯರ್ಸ್‌ ಮತ್ತು ನಿಕೊಲಸ್‌ ಪೂರನ್‌ ಅವರು ಅವರು ಲಖನೌ ತಂಡದ ಬ್ಯಾಟಿಂಗ್‌ ವಿಭಾಗಕ್ಕೆ ಬಲ ತುಂಬಿದ್ದಾರೆ. ಈ ಮೂವರು ಕ್ರಮವಾಗಿ 368, 361 ಮತ್ತು 358 ರನ್‌ ಕಲೆಹಾಕಿದ್ದಾರೆ. ಸ್ಪಿನ್‌ ಬೌಲಿಂಗ್‌ಗೆ ನೆರವು ನೀಡುವ ಚಿದಂಬರಂ ಕ್ರೀಡಾಂಗಣದ ಪಿಚ್‌ನಲ್ಲಿ ಇವರಿಗೆ ಆಬ್ಬರಿಸುವುದು ಆಗುವುದೇ ಎಂಬುದನ್ನು ನೋಡಬೇಕು.

ಮುಂಬೈ ತಂಡದ ಬೌಲಿಂಗ್‌ ವಿಭಾಗವು ಅನುಭವಿ ಸ್ಪಿನ್ನರ್‌ ಪೀಯೂಷ್ ಚಾವ್ಲಾ ಮತ್ತು ವೇಗದ ಬೌಲರ್‌ ಜೇಸನ್‌ ಬೆಹ್ರೆನ್‌ಡಾರ್ಫ್‌ ಅವರನ್ನು ನೆಚ್ಚಿಕೊಂಡಿದೆ. ಇವರು ಕ್ರಮವಾಗಿ 20 ಹಾಗೂ 14 ವಿಕೆಟ್‌ಗಳನ್ನು ಗಳಿಸಿದ್ದಾರೆ.

ಮೇ 16 ರಂದು ಲೀಗ್‌ ಹಂತದಲ್ಲಿ ಉಭಯ ತಂಡಗಳು ಪೈಪೋಟಿ ನಡೆಸಿದ್ದಾಗ, ಲಖನೌ ತಂಡಕ್ಕೆ ಐದು ವಿಕೆಟ್‌ಗಳ ಗೆಲುವು ಒಲಿದಿತ್ತು.

ಪಂದ್ಯ ಆರಂಭ: ರಾತ್ರಿ 7.30

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌ ಮತ್ತು ಜಿಯೊ ಸಿನೆಮಾ ಆ್ಯಪ್‌

ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮಾ
ಲಖನೌ ತಂಡದ ನಾಯಕ ಕೃಣಾಲ್‌ ಪಾಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.