ADVERTISEMENT

ಚಿಕ್ಕದಾದ ಹಗುರ ಚೆಂಡಿನ ಬಳಕೆ ಇರಲಿ: ನಿಕೋಲಾ ಕ್ಯಾರಿ

ಪಿಟಿಐ
Published 12 ಜೂನ್ 2020, 15:01 IST
Last Updated 12 ಜೂನ್ 2020, 15:01 IST
ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡ  –ಸಾಂದರ್ಭಿಕ ಚಿತ್ರ
ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡ  –ಸಾಂದರ್ಭಿಕ ಚಿತ್ರ   

ಮೆಲ್ಬರ್ನ್: ಮಹಿಳಾ ಕ್ರಿಕೆಟ್‌ನಲ್ಲಿ ತುಸು ಚಿಕ್ಕದಾದ ಮತ್ತು ಹಗುರವಾದ ಚೆಂಡಿನ ಬಳಕೆ ಮಾಡುವುದು ಒಳಿತು ಎಂದು ಆಸ್ಟ್ರೇಲಿಯಾ ಮಹಿಳಾ ತಂಡದಆಲ್‌ರೌಂಡರ್ ನಿಕೊಲಾ ಕ್ಯಾರಿ ಹೇಳಿದ್ದಾರೆ.

ಭಾರತದ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಮತ್ತು ನ್ಯೂಜಿಲೆಂಡ್ ತಂಡದ ನಾಯಕಿ ಸೋಫಿ ಡಿವೈನ್ ಅವರು ಈಚೆಗೆ ವೆಬಿನಾರ್‌ನಲ್ಲಿ ಚಿಕ್ಕ ಚೆಂಡಿನ ಬಳಕೆಯ ಸಲಹೆ ನೀಡಿದ್ದರು

ಈ ಕುರಿತು ಪ್ರತಿಕ್ರಿಯಿಸಿರುವ ಕ್ಯಾರಿ, ‘ಇಂತಹ ಚೆಂಡಿನ ಬಳಕೆಯಿಂದ ಪವರ್ ಹಿಟ್ಟಿಂಗ್ ಹೆಚ್ಚಾಗುತ್ತದೆ. ಅದು ಜನರನ್ನು ಅಕರ್ಷಿಸುತ್ತದೆ. ಒಂದು ಪ್ರಯೋಗ ಮಾಡುವುದರಲ್ಲಿ ಯಾವುದೇ ನಷ್ಟವಿಲ್ಲ. ಎಲ್ಲವೂ ಸರಿಯಾದರೆ ಮುಂದುವರಿಸಬಹುದು. ಇಲ್ಲದಿದ್ದರೆ ತಿದ್ದಿಕೊಂಡು ಸುಧಾರಣೆ ಮಾಡಿಕೊಳ್ಳಲು ಅವಕಾಶ ಸಿಗುತ್ತದೆ’ ಎಂದು ಕ್ರಿಕೆಟ್ ಡಾಟ್‌ ಕಾಮ್‌ ಡಾಟ್‌ ಎಯುಗೆ ಹೇಳಿದ್ದಾರೆ.

ADVERTISEMENT

’ಮಹಿಳಾ ಕ್ರಿಕೆಟ್‌ಗೆ ಸದ್ಯ ಜನಪ್ರಿಯತೆ ಹೆಚ್ಚುತ್ತಿದೆ. ಆದರೆ ಇನ್ನಷ್ಟು ಬೆಳವಣಿಗೆಗೆ ಅವಕಾಶಗಳಿವೆ. ಈ ಕ್ರೀಡೆಯಲ್ಲಿರುವವರು ಉತ್ತಮ ಸಲಹೆಗಳು ಮತ್ತು ಉಪಾಯಗಳನ್ನು ನೀಡುವುದರಿಂದ ಮುಂದಿನ ಬೆಳವಣಿಗೆಗೆ ಅನುಕೂಲವಾಗುತ್ತದೆ. ಒಂದೊಮ್ಮೆ ಪ್ರಯೋಗಗಳು ಫಲ ನೀಡಿದರೆ ಮುಂದಿನ ಹಾದಿ ಸುಗಮ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಜೆಮಿಮಾ ಅವರು ಪಿಚ್‌ ಉದ್ದಳತೆಯನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಆದರೆ ಈಗಿರುವಂತಹ ಪಿಚ್‌ ಇದ್ದರೆ ಸೂಕ್ತ ಅನಿಸುತ್ತದೆ. ಏಕೆಂದರೆ ಚಿಕ್ಕ ಚೆಂಡು ಬಳಸುವಾಗ ಹೆಚ್ಚು ವೇಗದಲ್ಲಿ ಬರುತ್ತದೆ. ಆದ್ದರಿಂದ ಪಿಚ್‌ ಅಳತೆ ಕಡಿಮೆಯಾದರೆ ಮತ್ತಷ್ಟು ವೇಗವಾಗಬಹುದು’ಎಂದಿದ್ದಾರೆ.

‘ಈಗಿರುವ ಚೆಂಡಿಗಿಂತ ಚಿಕ್ಕದಿರಬೇಕು ಪಿಚ್‌ ಕೂಡ ಈಗಿನಷ್ಟೇ ಅಳತೆಯದ್ದಿರಬೇಕು’ ಎಂದು ಸೋಫಿ ಕೂಡ ಅಭಿಪ್ರಾಯಪಟ್ಟಿದ್ದರು.

ಮಹಿಳಾ ಕ್ರಿಕೆಟ್‌ನಲ್ಲಿ ವಿನೂತನ ಪ್ರಯೋಗಗಳನ್ನು ಮಾಡುವ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಳ್ಳುವತ್ತ ಐಸಿಸಿ ಚಿತ್ತ ಇಟ್ಟಿದೆ. ಆದಕ್ಕಾಗಿ ಬೇರೆ ಬೇರೆ ತಂಡಗಳ ಆಟಗಾರ್ತಿಯರಿಂದ ಸಲಹೆಗಳನ್ನು ಪಡೆಯುತ್ತಿದೆ.

ಹೋದ ಜನವರಿಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯ ವೀಕ್ಷಣೆಗೆ ಅಪಾರ ಸಂಖ್ಯೆಯಲ್ಲಿ ಜನರು ಕ್ರೀಡಾಂಗಣಗಳಿಗೆ ಲಗ್ಗೆ ಇಟ್ಟಿದ್ದರು. ಟಿವಿ ವೀಕ್ಷಣೆಯೂ ಉತ್ತುಂಗಕ್ಕೇರಿತ್ತು. ಆಸ್ಟ್ರೇಲಿಯಾ ತಂಡವು ವಿಶ್ವಕಪ್ ಗೆದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.