ADVERTISEMENT

ಭಾರತಕ್ಕೆ ಬಾಂಗ್ಲಾ ಸವಾಲು

ಐಸಿಸಿ ಮಹಿಳೆಯರ ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ; ಜಯದ ವಿಶ್ವಾಸದಲ್ಲಿ ಹರ್ಮನ್‌ಪ್ರೀತ್‌ ಪಡೆ

ಪಿಟಿಐ
Published 23 ಫೆಬ್ರುವರಿ 2020, 20:14 IST
Last Updated 23 ಫೆಬ್ರುವರಿ 2020, 20:14 IST
ಪೂನಂ ಯಾದವ್‌
ಪೂನಂ ಯಾದವ್‌   

ಪರ್ತ್‌: ಆರಂಭಿಕ ಪಂದ್ಯದಲ್ಲೇ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾಕ್ಕೆ ಆಘಾತ ನೀಡಿ ವಿಶ್ವಾಸದ ಉತ್ತುಂಗದಲ್ಲಿ ತೇಲುತ್ತಿರುವ ಭಾರತ ತಂಡದವರು ಐಸಿಸಿ ಮಹಿಳೆಯರ ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಮತ್ತೊಂದು ಗೆಲುವಿನತ್ತ ಚಿತ್ತ ನೆಟ್ಟಿದ್ದಾರೆ.

ಇಲ್ಲಿನ ವಾಕಾ (ಡಬ್ಲ್ಯು.ಎ.ಸಿ.ಎ) ಮೈದಾನದಲ್ಲಿ ಸೋಮವಾರ ನಡೆಯುವ ‘ಎ’ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಸಾರಥ್ಯದ ಭಾರತ ತಂಡ ಬಾಂಗ್ಲಾದೇಶದ ಸವಾಲು ಎದುರಿಸಲಿದೆ.

ಹೋದ ಶುಕ್ರವಾರ ನಡೆದಿದ್ದ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡ 17ರನ್‌ಗಳಿಂದ ಆಸ್ಟ್ರೇಲಿಯಾವನ್ನು ಮಣಿಸಿತ್ತು. ಸಿಡ್ನಿ ಶೋ ಗ್ರೌಂಡ್‌ನಲ್ಲಿ ಸ್ಪಿನ್‌ ಜಾದೂ (19ಕ್ಕೆ4) ಮಾಡಿದ್ದ ಪೂನಂ ಯಾದವ್‌, ಹರ್ಮನ್‌ಪ್ರೀತ್‌ ಪಡೆಗೆ ಜಯದ ಸಿಹಿ ಉಣಬಡಿಸಿದ್ದರು. ಮಧ್ಯಮ ವೇಗಿ ಶಿಖಾ ಪಾಂಡೆ (14ಕ್ಕೆ3) ಕೂಡ ಮಿಂಚಿದ್ದರು. ಇವರು ಬೌಲಿಂಗ್‌ನಲ್ಲಿ ತಂಡದ ಆಧಾರ ಸ್ಥಂಭಗಳಾಗಿದ್ದಾರೆ.

ADVERTISEMENT

ತಂಡಕ್ಕೆ ತಲೆನೋವಾಗಿರುವುದು ಬ್ಯಾಟಿಂಗ್‌ ವಿಭಾಗ. ಸ್ಮೃತಿ ಮಂದಾನ ಮತ್ತು ಹರ್ಮನ್‌ಪ್ರೀತ್‌ ಅವರು ಆಸ್ಟ್ರೇಲಿಯಾ ವಿರುದ್ಧ ಮಂಕಾಗಿದ್ದರು. ಹೀಗಾಗಿ ತಂಡವು ಸಾಧಾರಣ ಮೊತ್ತಕ್ಕೆ ಕುಸಿದಿತ್ತು. ಇವರು ಬಾಂಗ್ಲಾ ಎದುರು ಲಯ ಕಂಡುಕೊಂಡು ಆಡಬೇಕಿದೆ.

ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್‌ ಮತ್ತು ದೀಪ್ತಿ ಶರ್ಮಾ ಅವರು ಆಸ್ಟ್ರೇಲಿಯಾ ವಿರುದ್ಧ ಜವಾಬ್ದಾರಿಯುತ ಆಟ ಆಡಿ ತಂಡಕ್ಕೆ ಆಸರೆಯಾಗಿದ್ದರು. ಇವರು ಮತ್ತೊಮ್ಮೆ ಮಿಂಚುವ ನಿರೀಕ್ಷೆ ಇದೆ. ವೇದಾ ಕೃಷ್ಣಮೂರ್ತಿ, ವಿಕೆಟ್‌ ಕೀಪರ್‌ ತಾನಿಯಾ ಭಾಟಿಯಾ ಅವರೂ ಮಿಂಚಬೇಕಿದೆ.

ಬಾಂಗ್ಲಾ ತಂಡ ಈ ಬಾರಿಯ ಟೂರ್ನಿಯಲ್ಲಿ ಆಡುತ್ತಿರುವ ಮೊದಲ ಪಂದ್ಯ ಇದು. ಆಲ್‌ರೌಂಡರ್‌ ಜಹನಾರ ಆಲಂ ಮತ್ತು ಅಗ್ರಕ್ರಮಾಂಕದ ಬ್ಯಾಟ್ಸ್‌ವುಮನ್‌ ಫರ್ಗನಾ ಹಕ್‌ ಅವರು ಭಾರತದ ಬೌಲರ್‌ಗಳಿಗೆ ಸವಾಲಾಗಬಲ್ಲರು. 26 ವರ್ಷ ವಯಸ್ಸಿನ ಹಕ್‌ ಅವರು ಟ್ವೆಂಟಿ–20 ಮಾದರಿಯಲ್ಲಿ ಶತಕ ದಾಖಲಿಸಿದ ಹಿರಿಮೆ ಹೊಂದಿದ್ದಾರೆ. ನಾಯಕಿ ಸಲ್ಮಾ ಖಾತುನ್‌ ಅವರ ಮೇಲೂ ಭರವಸೆ ಇಡಬಹುದು.

ಉಭಯ ತಂಡಗಳ ನಡುವಣ ಹಿಂದಿನ ಐದು ಪಂದ್ಯಗಳಲ್ಲಿ ಬಾಂಗ್ಲಾ ತಂಡ ಎರಡು ಬಾರಿ ಭಾರತವನ್ನು ಮಣಿಸಿದೆ. ಹೀಗಾಗಿ ಹರ್ಮನ್‌ಪ್ರೀತ್‌ ಪಡೆ ಎದುರಾಳಿಗಳನ್ನು ಹಗುರವಾಗಿ ಪರಿಗಣಿಸುವಂತಿಲ್ಲ.

ಪಂದ್ಯದ ಆರಂಭ: ಸಂಜೆ 4.30

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.