
ವಿಶಾಖಪಟ್ಟಣಂ: ಭಾರತ ಮಹಿಳೆಯರ ಕ್ರಿಕೆಟ್ ತಂಡವು ಶ್ರೀಲಂಕಾ ಎದುರಿನ ಸರಣಿಯ ಮೊದಲ ಪಂದ್ಯದಲ್ಲಿ ಜಯಿಸಿ ಅಪಾರ ಆತ್ಮವಿಶ್ವಾಸದಲ್ಲಿದೆ. ಮಂಗಳವಾರ ಇಲ್ಲಿ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿಯೂ ಗೆಲುವು ಸಾಧಿಸುವ ಛಲದಲ್ಲಿದೆ.
ಆದರೆ ಈ ಗೆಲುವಿನಲ್ಲಿಯೂ ತಂಡವು ಕೆಲವು ಪಾಠಗಳನ್ನು ಕಲಿಯಬೇಕಿದೆ. ಪ್ರಮುಖವಾಗಿ ಫೀಲ್ಡಿಂಗ್‌ನಲ್ಲಿ ಸುಧಾರಣೆ ಮಾಡಿಕೊಳ್ಳುವ ಅನಿವಾರ್ಯತೆ ಇದೆ.
ಮೊದಲ ಪಂದ್ಯದಲ್ಲಿ ಭಾರತ ತಂಡದ ಬೌಲರ್‌ಗಳು ಶ್ರೀಲಂಕಾ ಪಡೆಯನ್ನು (6ಕ್ಕೆ121) ಸಾಧಾರಣ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು. ಆದರೆ ಫೀಲ್ಡಿಂಗ್‌ನಲ್ಲಿ ಹಲವು ಲೋಪಗಳಿದ್ದವು. ಕೆಲವು ಸುಲಭ ಕ್ಯಾಚ್‌ಗಳೂ ಕೈಜಾರಿದ್ದವು.
‘ಕ್ಯಾಚ್‌ಗಳನ್ನು ಕೈಚೆಲ್ಲುತ್ತಿರುವುದು ಚಿಂತೆಯ ವಿಷಯ. ಫೀಲ್ಡಿಂಗ್ ಸುಧಾರಣೆಯತ್ತ ನಾವು ಚಿತ್ತ ನೆಟ್ಟಿದ್ದೇವೆ. ಇಲ್ಲಿಯ ವಾತಾವರಣದಲ್ಲಿ ಇಬ್ಬನಿ ಇದೆ. ಆದರೆ ಅದನ್ನೇ ನೆಪವಾಗಿಟ್ಟುಕೊಳ್ಳುತ್ತಿಲ್ಲ. ಅದನ್ನು ಮೀರಿ ನಿಲ್ಲಬೇಕಿದೆ. ಮುಂದಿನ ಪಂದ್ಯಗಳಲ್ಲಿ ಸುಧಾರಣೆ ಮಾಡಿಕೋಳ್ಳುತ್ತೇವೆ’ ಎಂದು ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಹೇಳಿದ್ದಾರೆ.
ವಿಶ್ವಕಪ್ ವಿಜಯದ ನಂತರ ಮಹಿಳಾ ತಂಡವು ಆರು ವಾರಗಳ ವಿಶ್ರಾಂತಿ ಪಡೆದಿತ್ತು. ಆ ಅವಧಿಯಲ್ಲಿ ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ನಡೆದಿದ್ದ ಶಿಬಿರದಲ್ಲಿಯೂ ಪಾಲ್ಗೊಂಡಿತ್ತು.
‘ಒಂದು ತಿಂಗಳ ನಂತರ ಸ್ಪರ್ಧಾಕಣಕ್ಕೆ ಇಳಿದಿದ್ದೇವೆ. ತಂಡಕ್ಕೆ ಉತ್ತಮವಾದ ಕಾಣಿಕೆ ನೀಡುವುದು ನಮ್ಮ ಗುರಿ’ ಎಂದರು.
ಉತ್ತಮ ಲಯದಲ್ಲಿರುವ ಜಿಮಿಮಾ ರಾಡ್ರಿಗಸ್ ಅವರು ಮೊದಲ ಪಂದ್ಯದ ಜಯದ ರೂವಾರಿಯಾಗಿದ್ದರು. ಲಂಕಾ ತಂಡದ ಎಡಗೈ ಮಣಿಟ್ಟಿನ ಸ್ಪಿನ್ನರ್ ಶಶಿನಿ ಗಿಮಾನಿ ಅವರ ಎಸೆತಗಳನ್ನು ದಂಡಿಸಿದ್ದರು. ಅವರ ಬೌಲಿಂಗ್‌ನಲ್ಲಿಯೇ ಜೆಮಿಮಾ ಅರ್ಧ ಡಜನ್ ಬೌಂಡರಿ ಗಳಿಸಿದ್ದರು.
20 ವರ್ಷ ವಯಸ್ಸಿನ ಸ್ಪಿನ್ನರ್ ವೈಷ್ಣವಿ ಶರ್ಮಾ ಅವರು ವಿಕೆಟ್ ಪಡೆಯದಿದ್ದರೂ ಬಿಗಿ ದಾಳಿ ನಡೆಸಿದರು. ಕೇವಲ 16 ರನ್ ಬಿಟ್ಟುಕೊಟ್ಟರು.
ಶಫಾಲಿ ವರ್ಮಾ ಅವರಿಗೆ ಈ ಸರಣಿಯು ಮಹತ್ವದ್ದಾಗಿದೆ. ಚುಟುಕು ಕ್ರಿಕೆಟ್‌ನಲ್ಲಿ ಅವರು ತಮ್ಮ ಛಾಪು ಮೂಡಿಸುವ ಪ್ರಯತ್ನದಲ್ಲಿದ್ದಾರೆ. ಹರ್ಮನ್‌ಪ್ರೀತ್, ದೀಪ್ತಿ ಶರ್ಮಾ, ಸ್ಮೃತಿ ಮಂದಾನ, ಹರ್ಲೀನ್ ಡಿಯೊಲ್ ಹಾಗೂ ರಿಚಾ ಶರ್ಮಾ ಅವರು ತಮ್ಮ ಎಂದಿನ ಲಯಕ್ಕೆ ಮರಳಿದರೆ ಶ್ರೀಲಂಕಾ ತಂಡದ ಹಾದಿ ಮತ್ತಷ್ಟು ಕಠಿಣವಾಗಬಹುದು.
ಪಂದ್ಯ ಆರಂಭ: ರಾತ್ರಿ 7
ನೇರಪ್ರಸಾರ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.