ADVERTISEMENT

ಕರ್ನಾಟಕಕ್ಕೆ ‘ಸೂಪರ್‌’ ಗೆಲುವು

23 ವರ್ಷದೊಳಗಿನವರ ಮಹಿಳಾ ಟ್ವೆಂಟಿ–20 ಟ್ರೋಫಿ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 19:08 IST
Last Updated 25 ನವೆಂಬರ್ 2019, 19:08 IST
ಶುಭಾ ಸತೀಶ್‌
ಶುಭಾ ಸತೀಶ್‌   

ಬೆಂಗಳೂರು: ಕರ್ನಾಟಕ ತಂಡದವರು ಪುದುಚೇರಿಯಲ್ಲಿ ಸೋಮವಾರ ನಡೆದ ಬಿಸಿಸಿಐ 23 ವರ್ಷದೊಳಗಿನ ಮಹಿಳಾ ಟ್ವೆಂಟಿ–20 ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸೂಪರ್‌ ಲೀಗ್‌ ಪಂದ್ಯದಲ್ಲಿ ‘ಸೂಪರ್‌’ ಗೆಲುವು ದಾಖಲಿಸಿದ್ದಾರೆ.

ಸಿಯೆಚೆಮ್‌ ಮೈದಾನದಲ್ಲಿ ನಡೆದ ಹಣಾಹಣಿಯಲ್ಲಿ ಕರ್ನಾಟಕ ತಂಡ ಸೂಪರ್‌ ಓವರ್‌ನಲ್ಲಿ 4ರನ್‌ಗಳಿಂದ ದೆಹಲಿ ತಂಡವನ್ನು ಮಣಿಸಿತು.

ಮೊದಲು ಬ್ಯಾಟ್‌ ಮಾಡಿದ ದೆಹಲಿ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 101ರನ್‌ ದಾಖಲಿಸಿತು. ಈ ತಂಡದ ಜ್ಯೋಷಿ ನೈನಾ (51; 60ಎ, 6ಬೌಂ) ಅರ್ಧಶತಕ ಸಿಡಿಸಿ ಗಮನ ಸೆಳೆದರು.

ADVERTISEMENT

ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 8 ವಿಕೆಟ್‌ ಕಳೆದುಕೊಂಡು ಇಷ್ಟೇ ರನ್‌ ಕಲೆಹಾಕಿತು. ಅಂತಿಮ ಓವರ್‌ನಲ್ಲಿ ಸಿ. ಪ್ರತ್ಯೂಷಾ ಬಳಗಕ್ಕೆ ಆರು ರನ್‌ಗಳು ಬೇಕಿದ್ದವು. ಕೊನೆಯ ಎರಡು ಎಸೆತಗಳಲ್ಲಿ ಅದಿತಿ ರಾಜೇಶ್‌ ಮತ್ತು ಸಂಜನಾ ಬಾಟ್ನಿ ಅವರು ವಿಕೆಟ್‌ ಒಪ್ಪಿಸಿದ್ದರಿಂದ ಪಂದ್ಯ ‘ಟೈ’ ಆಯಿತು.

ಪ್ರತ್ಯೂಷಾ ಪಡೆಗೆ ಶುಭಾ ಸತೀಶ್‌ (42; 50ಎ, 5ಬೌಂ) ಮತ್ತು ಪ್ರತ್ಯೂಷಾ ಕುಮಾರ್‌ (18; 30ಎ, 1ಬೌಂ) ಅವರು ಉತ್ತಮ ಆರಂಭ ನೀಡಿದ್ದರು.

ಈ ಜೋಡಿ ಮೊದಲ ವಿಕೆಟ್‌ಗೆ 51ರನ್‌ ಸೇರಿಸಿತ್ತು. 11ನೇ ಓವರ್‌ನಲ್ಲಿ ಪ್ರತ್ಯೂಷಾ ಕುಮಾರ್‌ ಔಟಾದರು. ಬಳಿಕ ತಂಡ ಸತತ ಮೂರು ವಿಕೆಟ್‌ ಕಳೆದುಕೊಂಡಿತು. ಮೋನಿಕಾ ಸಿ.ಪಟೇಲ್‌ (10; 12ಎ, 1ಬೌಂ) ತಾಳ್ಮೆಯ ಆಟ ಆಡಿ ಕರ್ನಾಟಕದ ಗೆಲುವಿನ ಕನಸಿಗೆ ಬಲ ತುಂಬಿದ್ದರು.

ಸೂಪರ್‌ ಓವರ್‌ನಲ್ಲಿ ಮೋಡಿ: ಸೂಪರ್‌ ಓವರ್‌ನಲ್ಲಿ ಕರ್ನಾಟಕ ತಂಡ ಮೊದಲು ಬ್ಯಾಟ್‌ ಮಾಡಿ 1 ವಿಕೆಟ್‌ಗೆ 11ರನ್‌ ಕಲೆಹಾಕಿತು. ಗುರಿ ಬೆನ್ನಟ್ಟಿದ ದೆಹಲಿ 1 ವಿಕೆಟ್‌ಗೆ 7ರನ್‌ ಗಳಿಸಲಷ್ಟೇ ಶಕ್ತವಾಯಿತು.

ಸಂಕ್ಷಿಪ್ತ ಸ್ಕೋರ್‌: ದೆಹಲಿ; 20 ಓವರ್‌ಗಳಲ್ಲಿ 4 ವಿಕೆಟ್‌ಗೆ 101 (ಜ್ಯೋಷಿ ನೈನಾ 51, ಇಶಿಕಾ ಮಂಜೀತ್‌ 18, ಸಿಮ್ರನ್‌ ಬಹದ್ದೂರ್‌ 13, ಆಯುಷಿ ರಾಜಕುಮಾರ್‌ ಸೋನಿ 17; ಮೋನಿಕಾ ಸಿ.ಪಟೇಲ್‌ 12ಕ್ಕೆ1, ಸಿಮ್ರನ್‌ ಹೆನ್ರಿ 11ಕ್ಕೆ1, ಸಿ.ಪ್ರತ್ಯೂಷಾ 24ಕ್ಕೆ1).

ಕರ್ನಾಟಕ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 101 (ಶುಭಾ ಸತೀಶ್‌ 42, ಪ್ರತ್ಯೂಷಾ ಕುಮಾರ್‌ 18, ನಿಕಿ ಪ್ರಸಾದ್‌ 9, ಮೋನಿಕಾ ಸಿ.ಪಟೇಲ್‌ 10; ರಿಯಾ ದಿಲೀಪ್‌ ಶರ್ಮಾ 26ಕ್ಕೆ2, ಆಯುಷಿ ರಾಜಕುಮಾರ್‌ ಸೋನಿ 14ಕ್ಕೆ1, ಪ್ರಿಯಾ ಸಂದೀಪ್‌ ಮಿಶ್ರಾ 18ಕ್ಕೆ3, ಸಿಮ್ರನ್‌ ಬಹದ್ದೂರ್‌ 11ಕ್ಕೆ1).

ಸೂಪರ್‌ ಓವರ್‌: ಕರ್ನಾಟಕ: 1 ಓವರ್‌ನಲ್ಲಿ 1 ವಿಕೆಟ್‌ಗೆ 11. ದೆಹಲಿ: 1 ಓವರ್‌ನಲ್ಲಿ 1 ವಿಕೆಟ್‌ಗೆ 7. ಫಲಿತಾಂಶ: ಕರ್ನಾಟಕಕ್ಕೆ 4ರನ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.