ಮಹಿಳಾ ಏಕದಿನ ವಿಶ್ವಕಪ್
ದುಬೈ: ಕ್ರಿಕೆಟ್‌ನ ಎಲ್ಲ ಹಂತದಲ್ಲಿ ಲಿಂಗಸಮಾನತೆ ತರುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಮಹತ್ವದ ಹೆಜ್ಜೆಯಿಟ್ಟಿದೆ. ಈ ತಿಂಗಳ ಕೊನೆಯಲ್ಲಿ ಆರಂಭವಾಗುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಗಳನ್ನು ಮೊದಲ ಬಾರಿಗೆ ಮಹಿಳಾ ಅಧಿಕಾರಿಗಳೇ ನಿರ್ವಹಿಸಲಿದ್ದಾರೆ.
ಜಂಟಿ ಆತಿಥೇಯರಾದ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಗುವಾಹಟಿಯಲ್ಲಿ ಸೆ. 30ರಂದು ನಡೆಯುವ ಪಂದ್ಯದ ಮೂಲಕ ವಿಶ್ವಕಪ್ ಆರಂಭವಾಗಲಿದೆ. ಎಂಟು ತಂಡಗಳು ಭಾಗವಹಿಸುವ ವಿಶ್ವಕಪ್‌ನ ಫೈನಲ್ ನವೆಂಬರ್ 2ರಂದು ನಡೆಯಲಿದೆ. ಭಾರತದ ನಾಲ್ಕು ತಾಣ ಮತ್ತು ಶ್ರೀಲಂಕಾದ ಕೊಲಂಬೊದಲ್ಲಿ ಪಂದ್ಯಗಳು ನಡೆಯಲಿವೆ.
ಅಂಪೈರ್‌ಗಳ ಪ್ಯಾನಲ್‌ನಲ್ಲಿ ಭಾರತದ ಮಾಜಿ ಆಟಗಾರ್ತಿಯರಾದ ವೃಂದಾ ರಾಥಿ, ಎನ್.ಜನನಿ ಮತ್ತು ಗಾಯತ್ರಿ ವೇಣುಗೋಪಾಲನ್ ಇರಲಿದ್ದಾರೆ. ಮೊತ್ತ ಮೊದಲ ಮಹಿಳಾ ಮ್ಯಾಚ್ ರೆಫ್ರಿ ಜಿ.ಎಸ್.ಲಕ್ಷ್ಮಿ ಸೇರಿದಂತೆ ನಾಲ್ವರು ಮಹಿಳಾ ರೆಫ್ರಿಯರು ಪಂದ್ಯಗಳನ್ನು ನಿರ್ವಹಿಸಲಿದ್ದಾರೆ.
ಕ್ಲೇರ್ ಪೊಲೊಸಾಕ್, ಜಾಕ್ವೆಲಿನ್ ವಿಲಿಯಮ್ಸ್ ಮತ್ತು ಸ್ಯೂ ರೆಡ್‌ಫೆರ್ನ್ ಅವರು ಮೂರನೇ ಬಾರಿ ಮಹಿಳಾ ವಿಶ್ವಕಪ್‌ನಲ್ಲಿ ಅಂಪೈರಿಂಗ್‌ಗೆ ಸಜ್ಜಾಗಿದ್ದಾರೆ. ಲಾರೆನ್ ಏಜೆನ್‌ಬಗ್ ಮತ್ತು ಕಿಮ್ ಕಾಟನ್ ಅವರಿಗೆ ಇದು ಎರಡನೇ ವಿಶ್ವಕಪ್.
‘ಎಲ್ಲ ಮಹಿಳೆಯರೇ ಇರುವ ಪ್ಯಾನೆಲ್‌ನ ಸೇರ್ಪಡೆ ಪ್ರಮುಖ ಮೈಲಿಗಲ್ಲು ಮಾತ್ರವಲ್ಲ, ಕ್ರಿಕೆಟ್‌ನಲ್ಲಿ ಲಿಂಗ ಸಮಾನತೆ ತರುವ ನಿಟ್ಟಿನಲ್ಲಿ ಐಸಿಸಿಯ ಬದ್ಧತೆಯ ಪ್ರತೀಕ ಇದು’ ಎಂದು ಐಸಿಸಿ ಅಧ್ಯಕ್ಷ ಜಯ್ ಶಾ ತಿಳಿಸಿದ್ದಾರೆ.
ಅಧಿಕಾರಿಗಳ ಪಟ್ಟಿ:
ಮ್ಯಾಚ್ ರೆಫ್ರಿಗಳು: ಟ್ರುಡಿ ಆ್ಯಂಡರ್ಸನ್, ಶಾಂಡ್ರೆ ಫ್ರಿಟ್ಝ್, ಜಿ.ಎಸ್.ಲಕ್ಷ್ಮಿ, ಮಿಚೆಲ್ ಪೆರೀರಾ.
ಅಂಪೈರ್ಸ್: ಲಾರೆನ್ ಅಜೆನ್‌ಬಗ್, ಕ್ಯಾಂಡೇಸ್ ಲಾ ಬೋರ್ಡೆ, ಕಿಮ್ ಕಾಟನ್, ಸಾರಾ ದಂಬನೆವನ, ಶಾತಿರಾ ಜಾಖಿರ್ ಜೆಸಿ, ಕೆರಿನ್ ಕ್ಲಾಸ್ಟ್, ಜನನಿ ಎನ್., ನಿಮಲಿ ಪೆರೀರಾ, ಕ್ಲೇರ್ ಪೊಲೊಸಾಕ್, ವೃಂದಾ ರಾಥಿ, ಸ್ಯೂ ರೆಡ್‌ಫೆರ್ನ್, ಎಲೊಯಿಸ್ ಶೆರಿದನ್, ಗಾಯತ್ರಿ ವೇಣುಗೋಪಾಲನ್, ಜಾಕ್ವೆಲಿನ್ ವಿಲಿಯಮ್ಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.