
‘ರೆಕ್ಕೆ ಇದ್ದರೆ ಸಾಕೇ? ಹಕ್ಕಿಗೆ ಬೇಕು ಬಾನು
ಬಯಲಲಿ ತೇಲುತ ತಾನು ಮ್ಯಾಲೆ ಹಾರೋಕೆ
ಕಾಲೊಂದಿದ್ದರೆ ಸಾಕೇ?
ಚಿಗರೆಗೆ ಬೇಕು ಕಾನು ಗಾಳಿಯ ಮೇಲೆ ತಾನು ಜಿಗಿದು ಓಡೋಕೆ...’
‘ಚಿನ್ನಾರಿಮುತ್ತ’ ಚಿತ್ರದ ಈ ಹಾಡಿಗೆ ದಶಕಗಳೇ ಉರುಳಿವೆ. ಮೊನ್ನೆಯಷ್ಟೇ ವಿಶ್ವಕಪ್ ಜಯಿಸಿದ ಭಾರತ ಮಹಿಳೆಯರ ತಂಡದ ಸಾಧನೆಗೂ ಈ ಹಾಡು ಪ್ರಸ್ತುತವಾಗುತ್ತದೆ. ಪ್ರತಿಭೆ, ಸಾಮರ್ಥ್ಯಗಳಿದ್ದರೂ ಅವಕಾಶಗಳಿಗಾಗಿ ಹೋರಾಟ ಮಾಡುತ್ತ ಬೆಳೆದ ನಾರಿಶಕ್ತಿ ಇದು...
ನವಯುಗ ಸೃಷ್ಟಿಸಿದ ಹರ್ಮನ್
ಭಾರತದ ಪುರುಷರ ತಂಡವು ಈ ಹಿಂದೆ ಗೆದ್ದಿರುವ ವಿಶ್ವಕಪ್ ವಿಜಯಗಳನ್ನು ನೋಡಿದರೆ ಆಲ್‌ರೌಂಡರ್‌ಗಳ ಪಾತ್ರವೇ ಮಹತ್ವದ್ದು. ಅದೇ ರೀತಿ ಮಹಿಳೆಯರ ತಂಡವೂ ಆಲ್‌ರೌಂಡರ್ ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿಯೇ ಚೊಚ್ಚಲ ವಿಶ್ವಕಪ್ ಸಾಧನೆ ಮಾಡಿದೆ. ಪಂಜಾಬ್ ರಾಜ್ಯದ ಮೋಗಾ ಪಟ್ಟಣದ ಹರ್ಮನ್ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರ ಆಟಕ್ಕೆ ಮಾರುಹೋಗಿ ಬ್ಯಾಟ್ ಹಿಡಿದವರು. ಕ್ರೀಡಾಪಟುವಾಗಿದ್ದ ಅಪ್ಪ ಹರಮಂದರ್ ಸಿಂಗ್ ಭುಲ್ಲರ್ ಅವರು ಸ್ಥಳೀಯ ಕೋರ್ಟ್‌ನಲ್ಲಿ ಗುಮಾಸ್ತರಾಗಿದ್ದರು. ತಾಯಿ ಸತ್ವಿಂದರ್ ಕೌರ್ ಮತ್ತು ತಂಗಿ ಹೇಮ್‌ಜೀತ್ ಕೌರ್ ಅವರ ಪ್ರೋತ್ಸಾಹ ಹರ್ಮನ್‌ಗೆ ಸಿಕ್ಕಿತ್ತು.
ಅವರು ಭಾರತ ತಂಡದಲ್ಲಿ ಪದಾರ್ಪಣೆ ಮಾಡಿದ್ದೇ ವಿಶ್ವಕಪ್ ಪಂದ್ಯದ ಮೂಲಕ. 2009ರಲ್ಲಿ ಆಸ್ಟ್ರೇಲಿಯಾದ ಬೋರಾಲ್‌ನಲ್ಲಿ ಪಾಕಿಸ್ತಾನ ಎದುರಿನ ಆ ಪಂದ್ಯದಲ್ಲಿ ಹರ್ಮನ್ ವೃತ್ತಿಜೀವನ ಆರಂಭವಾಯಿತು. ಕಾಲಕ್ರಮೇಣ ಹರ್ಮನ್ ಆಟದಿಂದ ಖ್ಯಾತಿ ಪಡೆದರು. ಅದರಲ್ಲೂ 2017ರಲ್ಲಿ ಅವರು ಸೆಮಿಫೈನಲ್‌ನಲ್ಲಿ ಹೊಡೆದ 171 ರನ್‌ಗಳ ಆಟ ‘ಗೇಮ್ ಚೇಂಜರ್’ ಆಗಿತ್ತು. ಅಷ್ಟು ಆಕರ್ಷಕ ಮತ್ತು ದಿಟ್ಟ ಬ್ಯಾಟಿಂಗ್ ಅದಾಗಿತ್ತು. ಭಾರತದ ಹುಡುಗಿಯರೂ ಬೀಸಾಟವಾಡಬಲ್ಲರು ಎಂಬುದನ್ನು ತೋರಿಸಿದ್ದರು. ಬಿಗ್ ಬ್ಯಾಷ್ ಲೀಗ್ ಅವರನ್ನು ಕೈಬೀಸಿ ಕರೆಯಿತು. ಅವರ ಛಲವೇ ವಿಶ್ವಕಪ್ ವಿಜಯದ ಐತಿಹಾಸಿಕ ಸಾಧನೆಗೆ ಕಾರಣವಾಗಿದೆ.
ಛಲಗಾತಿ ದೀಪ್ತಿ
ದೀಪ್ತಿ ಶರ್ಮಾ ಉತ್ತರ ಪ್ರದೇಶದ ಆಗ್ರಾದ, ರೈಲ್ವೆ ಇಲಾಖೆಯ ನಿವೃತ್ತ ಉದ್ಯೋಗಿ ಭಗವಾನ್ ಶರ್ಮಾ ಅವರ ಕೊನೆಯ ಪುತ್ರಿ. ಅಣ್ಣನ ಕ್ರಿಕೆಟ್ ಆಟ ನೋಡುತ್ತ ತಾವೂ ಕ್ರೀಡಾಂಗಣಕ್ಕೆ ಇಳಿದವರು. ಭಾರತ ತಂಡದಲ್ಲಿ ಆಡುತ್ತಿದ್ದ ತಮ್ಮದೇ ರಾಜ್ಯದ ಸುರೇಶ್ ರೈನಾ ಅವರನ್ನೇ ಅನುಕರಿಸಿದರು. ಎಡಗೈ ಬ್ಯಾಟರ್–ಬಲಗೈ ಸ್ಪಿನ್ನರ್ ಆಗಿ ಬೆಳೆದರು. ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ಎದುರಿನ ಪಂದ್ಯದಲ್ಲಿ 121 ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಅರ್ಧಶತಕ ಹೊಡೆದು ಆಸರೆಯಾದರು. ಅದರಿಂದಾಗಿ ತಂಡವು 269 ರನ್ ಗಳಿಸಿತು. ಇಂಗ್ಲೆಂಡ್ ವಿರುದ್ಧವೂ ನಾಲ್ಕು ವಿಕೆಟ್ ಪಡೆದು, ಅರ್ಧಶತಕ ಗಳಿಸಿದ್ದರು. ಫೈನಲ್‌ನಲ್ಲಿ ಅವರ ಅರ್ಧಶತಕ ಮತ್ತು ಐದು ವಿಕೆಟ್ ಗೊಂಚಲು ಅವಿಸ್ಮರಣೀಯವಾಗಿದೆ. ಅದರಲ್ಲೂ ಶತಕ ಗಳಿಸಿದ್ದ ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಟ್ ಅವರ ವಿಕೆಟ್ ಗಳಿಸಿದ್ದ ದೀಪ್ತಿ ಪಂದ್ಯಕ್ಕೆ ತಿರುವು ನೀಡಿದ್ದರು.
ಅಮನ್ಜೋತ್ ಕ್ಯಾಚ್
ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟರ್ ಲಾರಾ ವೊಲ್ವಾರ್ಟ್ ಅವರು ಔಟಾಗದೇ ಹೋಗಿದ್ದರೆ ಫಲಿತಾಂಶ ಬೇರೆಯದೇ ಆಗುವ ಸಾಧ್ಯತೆ ಇತ್ತು. ಶತಕ ಬಾರಿಸಿದ್ದ ಲಾರಾ; ದೀಪ್ತಿ ಎಸೆತವನ್ನು ಬೌಂಡರಿಗೆರೆ ದಾಟಿಸುವ ಅವರ ಪ್ರಯತ್ನಕ್ಕೆ ಅಡ್ಡಿಯಾದವರು ಅಮನ್ಜೋತ್ ಕೌರ್. ಅವತ್ತು ಅವರು ಪಡೆದ ‘ಜಗ್ಲಿಂಗ್’ ಮಾದರಿಯ ಕ್ಯಾಚ್ ಇಡೀ ಪಂದ್ಯಕ್ಕೆ ತಿರುವು ನೀಡಿತು. ಲೀಗ್ ಹಂತದಲ್ಲಿ ಶ್ರೀಲಂಕಾ ಎದುರಿನ ಪಂದ್ಯದಲ್ಲಿ ದೀಪ್ತಿಯೊಂದಿಗೆ ಅವರು ಜೊತೆಯಾಟವಾಡಿ ತಂಡಕ್ಕೆ ಗೆಲುವಿನ ದಾರಿ ತೋರಿಸಿದ್ದರು. ಚಂಡೀಗಡದಲ್ಲಿ ಕಾರ್ಪೆಂಟರ್ ಆಗಿರುವ ಭೂಪಿಂದರ್ ಸಿಂಗ್ ಅವರ ಮಗಳು ಅಮನ್ಜೋತ್. ಬಾಲ್ಯದಲ್ಲಿ ಹಾಕಿ, ಫುಟ್‌ಬಾಲ್ ಮತ್ತು ಹ್ಯಾಂಡ್‌ಬಾಲ್ ಆಟದಲ್ಲಿ ಸಕ್ರಿಯರಾಗಿದ್ದವರು. 15 ವರ್ಷದ ಹುಡುಗಿಯ ಚುರುಕುತನ ಗುರುತಿಸಿದ ನಾಗೇಶ್ ಗುಪ್ತಾ ತಮ್ಮ ಕ್ರಿಕೆಟ್ ಅಕಾಡೆಮಿಗೆ ಸೇರಿಸಿಕೊಂಡರು. ಮಧ್ಯಮವೇಗಿಯಾಗಿದ್ದ ಹುಡುಗಿಯ ಬ್ಯಾಟಿಂಗ್ ಕೌಶಲಕ್ಕೂ ಅವರು ಸಾಣೆ ಹಿಡಿದರು.
ದಿಟ್ಟೆ ಸ್ನೇಹ ರಾಣಾ
ಟೂರ್ನಿಯ ಲೀಗ್ ಹಂತದಲ್ಲಿ ಡೆಹ್ರಾಡೂನ್‌ನ ಸ್ನೇಹ ರಾಣಾ ಅವರ ಕೈಚಳಕವು ಗಮನ ಸೆಳೆದಿತ್ತು. ಮೊದಲ ಮೂರು ಪಂದ್ಯಗಳಲ್ಲಿ ಅವರು ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು ಉಪಯುಕ್ತ ಕಾಣಿಕೆ ನೀಡಿದ್ದರು. ಬೌಲಿಂಗ್‌ನಲ್ಲಿಯೂ ಮಿಂಚಿದ್ದರು. ಆದರೆ ಫೈನಲ್ ಹಂತದಲ್ಲಿ ಆಡುವ ಅವಕಾಶ ಅವರಿಗೆ ಸಿಗಲಿಲ್ಲ.
ಹರ್ಲಿನ್ ಆಟ
ಚುರುಕಾದ ಫೀಲ್ಡಿಂಗ್‌ಗೆ ಹೆಸರಾಗಿರುವ ಆಟಗಾರ್ತಿ ಹರ್ಲಿನ್ ಡಿಯೊಲ್. ಪಂಜಾಬಿ ಹುಡುಗಿಯ ನೃತ್ಯದ ವಿಡಿಯೊಗಳು ಭಾರಿ ಜನಪ್ರಿಯ. ಮಧ್ಯಮಕ್ರಮಾಂಕದಲ್ಲಿ ಬಂದು ತಂಡದ ಮೊತ್ತ ಹೆಚ್ಚಿಸಲು ಕೆಲವು ಉಪಯುಕ್ತ ಕಾಣಿಕೆ ನೀಡಿದರು. ಚಂಡೀಗಡದಲ್ಲಿ ಜನಿಸಿರುವ ಈ ಹುಡುಗಿ ಹಿಮಾಚಲಪ್ರದೇಶ ತಂಡವನ್ನು ಪ್ರತಿನಿಧಿಸುತ್ತಾರೆ.
ಬೌಲಿಂಗ್ ‘ಕ್ರಾಂತಿ’
ಮಧ್ಯಪ್ರದೇಶದ ಗುವಾರಾ ಗ್ರಾಮ ಮುನ್ನಾಸಿಂಗ್ ಅವರ ಕುಟುಂಬದ ಕುಡಿ ಕ್ರಾಂತಿ ಗೌಡ್. ಆದಿವಾಸಿಗಳು ಹೆಚ್ಚಿರುವ ಊರು ಅದು. ಮೂವರು ಅಣ್ಣಂದಿರು ಮತ್ತು ಇಬ್ಬರು ಅಕ್ಕಂದಿರೊಂದಿಗೆ ಬೆಳೆದ ಹುಡುಗಿ. ಆದರೆ ಅವರೆಲ್ಲರಿಗಿಂತ ಭಿನ್ನವಾದ ಕ್ರಾಂತಿಯನ್ನೇ ಮಾಡಿದರು. ಬಡತನ, ಅವಮಾನಗಳನ್ನು ಮೀರಿ ನಿಂತವರು ಕ್ರಾಂತಿ. ಹುಡುಗರೊಂದಿಗೆ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಲೇ ಬೆಳೆದರು. ಈ ಹುಡುಗಿಯು 120–130 ಕಿ.ಮೀ. (ಪ್ರತಿ ಗಂಟೆ) ವೇಗದ ಎಸೆತಗಳನ್ನು ಹಾಕುತ್ತಿದ್ದರು. ಬ್ಯಾಟಿಂಗ್ ಮಾಡುವ ಹುಡುಗರು ಈಕೆಯ ಎಸೆತಗಳನ್ನು ಉಡಾಫೆ ಮಾಡುವಂತೆಯೇ ಇರಲಿಲ್ಲ. ಬರಿಗಾಲಿನಲ್ಲಿ ಓಡಿ ಬಂದು ಚೆಂಡೆಸೆಯುತ್ತಿದ್ದ ಈ ಹುಡುಗಿಯ ಪ್ರತಿಭೆಗೆ ಅಪ್ಪ ಮನಸೋತರು. ತಮ್ಮ ಆರ್ಥಿಕ ಕಷ್ಟ,ನಷ್ಟಗಳ ನಡುವೆಯೂ ಅಕಾಡೆಮಿಗೆ ಸೇರಿಸಿದರು.
ಆಂಧ್ರದ ಪ್ರತಿನಿಧಿ
ಆಂಧ್ರಪ್ರದೇಶದ ಕಡಪಾ ಜಿಲ್ಲೆಯಿಂದ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಮೊದಲ ಆಟಗಾರ್ತಿ ಶ್ರೀ ಚರಣಿ. 20 ವರ್ಷದ ಚರಣಿ ಬ್ಯಾಡ್ಮಿಂಟನ್ ಆಟಗಾರ್ತಿಯಾಗಬೇಕೆಂಬ ಆಸೆ ಅವರ ಅಪ್ಪ ಚಂದ್ರಶೇಖರ್ ರೆಡ್ಡಿ ಅವರದ್ದಾಗಿತ್ತು. ಥರ್ಮಲ್ ವಿದ್ಯುತ್ ಯೋಜನೆಯ ಕಚೇರಿಯಲ್ಲಿ ಚಿಕ್ಕ ಹುದ್ದೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಬಾಲ್ಯದಲ್ಲಿ ಕೊಕ್ಕೊ ಆಡಿಕೊಂಡಿದ್ದ ಚರಣಿ ಅವರು ಸ್ಮೃತಿ ಮಂದಾನ ಮತ್ತು ಯುವರಾಜ್ ಸಿಂಗ್ ಅವರಿಂದ ಪ್ರಭಾವಿತರಾಗಿ ಕ್ರಿಕೆಟ್‌ನತ್ತ ವಾಲಿದರು.
ರೇಣುಕಾ ‘ವೇಗ’
ಟೂರ್ನಿಯಲ್ಲಿ ಅನುಭವಿ ಮಧ್ಯಮವೇಗಿ ರೇಣುಕಾ ಸಿಂಗ್ ಠಾಕೂರ್ ಅವರು ಹೆಚ್ಚು ವಿಕೆಟ್ ಗಳಿಸಲಿಲ್ಲ. ಆದರೆ, ಶಿಸ್ತಿನ ಬೌಲಿಂಗ್ ಮೂಲಕ ಗಮನ ಸೆಳೆದರು. 4.02ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ ಅವರು ಎದುರಾಳಿ ಆರಂಭಿಕ ಬ್ಯಾಟರ್‌ಗಳಿಗೆ ಒತ್ತಡ ಹೇರಿದರು.
ರಾಧಾ ನಿಖರತೆ
ಟೂರ್ನಿಯ ಬಹಳಷ್ಟು ಪಂದ್ಯಗಳಲ್ಲಿ ಬದಲೀ ಆಟಗಾರ್ತಿಯಾಗಿ ರಾಧಾ ಯಾದವ್ ಕಣಕ್ಕಿಳಿದರು. ಸಿಕ್ಕ ಮೂರು ಪಂದ್ಯಗಳಲ್ಲಿ ನಾಲ್ಕು ವಿಕೆಟ್ ಪಡೆದರು. ಅದರಲ್ಲೂ ಒಂದು ಪಂದ್ಯದಲ್ಲಿ ಮೂರು ವಿಕೆಟ್ ಪಡೆದಿದ್ದು ಅವರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ.
ಅರುಂಧತಿ ಪಯಣ
ಮತ್ತೊಬ್ಬ ಮಧ್ಯಮವೇಗಿ ಅರುಂಧತಿ ರೆಡ್ಡಿ ಅವರದ್ದು ತೆಲಂಗಾಣ ರಾಜ್ಯ. ಅವರ ತಾಯಿ ವಾಲಿಬಾಲ್ ಆಟಗಾರ್ತಿಯಾಗಿದ್ದರು. ಆದರೆ ರಾಷ್ಟ್ರ ತಂಡದಲ್ಲಿ ಆಡುವ ಅವರ ಆಸೆ ಕೈಗೂಡಿರಲಿಲ್ಲ. ಮಗಳನ್ನು ರಾಷ್ಟ್ರಮಟ್ಟದ ಕ್ರೀಡಾಪಟುವನ್ನಾಗಿಸುವ ಅವರ ಛಲಕ್ಕೆ ಸ್ಪರ್ಧಿಸಿದ ಅರುಂಧತಿ ಕ್ರಿಕೆಟ್ ಆಟಗಾರ್ತಿಯಾಗಿ ರೂಪುಗೊಂಡರು.
ವಿಶ್ವಕಪ್ ಟೂರ್ನಿಯಲ್ಲಿ ಆಡುವ 11ರ ತಂಡದಲ್ಲಿ ಸ್ಥಾನ ಪಡೆದಿಲ್ಲ
ಅದೃಷ್ಟದ ಬ್ಯಾಟರ್
ಹರಿಯಾಣದ ಶಫಾಲಿ ವರ್ಮಾ ಅವರು ಬಾಲ್ಯದಿಂದಲೇ ‘ಲೇಡಿ ಸಚಿನ್ ತೆಂಡೂಲ್ಕರ್’ ಎಂದೇ ಕರೆಸಿಕೊಂಡವರು. 19 ವರ್ಷದೊಳಗಿನವರ ವಿಶ್ವಕಪ್ ಜಯಿಸಿದ ತಂಡದ ನಾಯಕಿಯಾಗಿದ್ದವರು. ಆಕೆ ‘ಲಕ್ಕೀ ಸ್ಟಾರ್’ ಕೂಡ. ವಿಶ್ವಕಪ್ ಟೂರ್ನಿಗೆ ಆಯ್ಕೆಯಾದ ತಂಡದಲ್ಲಿ ಅವರು ಇರಲಿಲ್ಲ. ಫಾರ್ಮ್ ಕೊರತೆಯಿಂದ ಸ್ಥಾನ ಕಳೆದುಕೊಂಡಿದ್ದರು. ಆದರೆ ಅದೃಷ್ಟ ಅವರನ್ನು ಹುಡುಕಿಕೊಂಡು ಬಂತು. ಪ್ರತೀಕಾ ರಾವಲ್ ಗಾಯಗೊಂಡಾಗ ಆಯ್ಕೆದಾರರಿಗೆ ನೆನಪಾಗಿದ್ದು ಶಫಾಲಿ. ಸೆಮಿಫೈನಲ್‌ನಲ್ಲಿ ಕಾಲಿಟ್ಟ ಹುಡುಗಿ ಬೇಗ ಔಟಾದರು. ಆಗಲೂ ಕೆಲವರು ಮುಖ ಸಿಂಡರಿಸಿದರು. ಆದರೆ ಫೈನಲ್‌ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದರು. ಪಂದ್ಯದ ಆಟಗಾರ್ತಿ ಗೌರವ ಗಿಟ್ಟಿಸಿದರು.
ಭಾವಿ ಕ್ಯಾಪ್ಟನ್
ಮಹಾರಾಷ್ಟ್ರದ ಸ್ಮೃತಿ ಮಂದಾನ ಅವರೀಗ ಭಾರತ ತಂಡದ ಭಾವಿ ನಾಯಕಿಯೆಂದೇ ಪರಿಗಣಿತರಾಗಿದ್ದಾರೆ. ಆರಂಭಿಕ ಬ್ಯಾಟರ್ ಆಗಿ ತಂಡಕ್ಕೆ ಉತ್ತಮ ಆರಂಭ ನೀಡುವುದರ ಜೊತೆಗೆ ಶಾಂತಚಿತ್ತದ ಮೂಲಕ ತಂಡವನ್ನು ನಿರ್ವಹಿಸುವ ಬಗೆ ಹರ್ಮನ್ ಒತ್ತಡವನ್ನು ಕಡಿಮೆ ಮಾಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿಯಾಗಿ ಕಪ್ ಗೆದ್ದಿರುವ ಸ್ಮೃತಿ ಮುಂಬರುವ ಒಲಿಂಪಿಕ್ ಕೂಟದಲ್ಲಿ ಭಾರತ ತಂಡಕ್ಕೆ ಚಿನ್ನದ ಪದಕ ಗೆದ್ದು ಕೊಡುವ ಕನಸು ಕಾಣುತ್ತಿದ್ದಾರೆ.
ಜಿಮಿಮಾ ‘ಪಾದರಸ’
ಪಾದರಸದಷ್ಟೇ ಚುರುಕಾದ ಹುಡುಗಿ ಜಿಮಿಮಾ ರಾಡ್ರಿಗಸ್. ಗಿಟಾರ್, ಹಾಡು, ನೃತ್ಯದಲ್ಲಿ ಸದಾ ಮುಂದು. ನಗುಮುಖದ ಮುಂಬೈ ಹುಡುಗಿ ಸೆಮಿಫೈನಲ್‌ನಲ್ಲಿ ಹೊಡೆದ ಶತಕ ಬಹುಕಾಲ ನೆನಪಿನಲ್ಲಿ ಉಳಿಯಲಿದೆ. ಆಸ್ಟ್ರೇಲಿಯಾ ಎದುರಿನ ಅವರ ಆಟವೇ ಭಾರತ ಫೈನಲ್‌ಗೆ ಪ್ರವೇಶಿಸಲು ನೆರವಾಯಿತು.
ಪ್ರತೀಕಾ ಆಟ
ಸ್ಮೃತಿಯೊಂದಿಗೆ ಉತ್ತಮ ಆರಂಭ ನೀಡಿದ ಪ್ರತೀಕಾ ರಾವಲ್ ಅವರು ವಿಶ್ವಕಪ್‌ನಲ್ಲಿ ತಮ್ಮ ಚೊಚ್ಚಲ ಶತಕ ಕೂಡ ಹೊಡೆದರು. ಆದರೆ ಗಾಯಗೊಂಡು ಫೈನಲ್‌ನಿಂದ ಹೊರಗುಳಿದರು. ಮನಶಾಸ್ತ್ರಜ್ಞೆ ಆಗಿರುವ ದೆಹಲಿಯ ಪ್ರತೀಕಾ ಅವರು ಮೊದಲು ಬ್ಯಾಸ್ಕೆಟ್‌ಬಾಲ್ ಆಟಗಾರ್ತಿಯಾಗಿದ್ದವರು. ಅಪ್ಪನ ಆಸೆಗೆ ಸ್ಪಂದಿಸಿ ಕ್ರಿಕೆಟಿಗರಾದರು.
ಫಿನಿಷರ್ ರಿಚಾ..
ಪಶ್ಚಿಮ ಬಂಗಾಳದ ಸಿಲಿಗುರಿಯ ರಿಚಾ ಘೋಷ್ ಅವರದ್ದು ಈ ವಿಶ್ವಕಪ್ ಟೂರ್ನಿಯಲ್ಲಿ ’ಫಿನಿಷರ್’ ಪಾತ್ರ. ವಿಕೆಟ್‌ಕೀಪಿಂಗ್ ಜೊತೆಗೆ ಏಳು ಅಥವಾ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದು ತಮ್ಮ ಹೊಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಲೀಗ್ ಹಂತದಲ್ಲಿ ಅವರು ಒಂದು ಪಂದ್ಯದಲ್ಲಿ 94 ರನ್ ಗಳಿಸಿದರು.
ಉಮಾ ಆಟ
ಅಸ್ಸಾಂ ರಾಜ್ಯದ ಉಮಾ ಚೇಟ್ರಿ ಅವರಿಗೆ ಈ ವಿಶ್ವಕಪ್‌ನಲ್ಲಿ ಆಡಲು ಲಭಿಸಿದ್ದು ಕೇವಲ ಒಂದು ಪಂದ್ಯ ಮಾತ್ರ. ಅಮ್ಮನ ಪ್ರೋತ್ಸಾಹದಿಂದ ಕ್ರಿಕೆಟ್ ಆಟ ಆಯ್ಕೆ ಮಾಡಿಕೊಂಡ ಚೇಟ್ರಿ ಭವಿಷ್ಯದ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ. ಅವರು ತಮ್ಮ ತಾಯಿ, ತಂದೆಯೊಂದಿಗೆ ವಿಶ್ವಕಪ್ ಹಿಡಿದು ನಿಂತ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.