ADVERTISEMENT

ಮಹಿಳಾ ಪ್ರೀಮಿಯರ್‌ ಲೀಗ್‌: ಹ್ಯಾಟ್ರಿಕ್‌ ಗೆಲುವಿನ ಛಲದಲ್ಲಿ ಆರ್‌ಸಿಬಿ

ಪಿಟಿಐ
Published 15 ಜನವರಿ 2026, 23:28 IST
Last Updated 15 ಜನವರಿ 2026, 23:28 IST
ರಾಯಲ್‌ ಚಾಲೆಂಜರ್ಸ್‌ ತಂಡದ ನಾಯಕಿ ಸ್ಮೃತಿ ಮಂದಾನ
ರಾಯಲ್‌ ಚಾಲೆಂಜರ್ಸ್‌ ತಂಡದ ನಾಯಕಿ ಸ್ಮೃತಿ ಮಂದಾನ   

ನವಿ ಮುಂಬೈ: ಸತತ ಎರಡು ಗೆಲುವಿನೊಂದಿಗೆ ಭರ್ತಿ ಆತ್ಮವಿಶ್ವಾಸದಲ್ಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಶುಕ್ರವಾರ ಮಹಿಳಾ ಪ್ರೀಮಿಯರ್‌ ಲೀಗ್‌ನ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ತಂಡವನ್ನು ಎದುರಿಸಲಿದೆ.

ಐದು ತಂಡಗಳನ್ನು ಒಳಗೊಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಜೈಂಟ್ಸ್‌ ತಂಡವು ಮಂಗಳವಾರ ಮುಂಬೈ ಇಂಡಿಯನ್ಸ್‌ ವಿರುದ್ಧ ಪರಾಭವಗೊಂಡು ಮೂರನೇ ಸ್ಥಾನಕ್ಕೆ ಕುಸಿದಿದೆ. ಮಾಜಿ ಚಾಂಪಿಯನ್‌ ಆರ್‌ಸಿಬಿ ತಂಡವು ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹ್ಯಾಟ್ರಿಕ್‌ ಗೆಲುವಿನೊಡನೆ ಅಗ್ರಸ್ಥಾನವನ್ನು ಭದ್ರಪಡಿಸುವತ್ತ ಗಮನ ಹರಿಸಿದೆ.

ಸ್ಮೃತಿ ಮಂದಾನ ನಾಯಕತ್ವದ ಬೆಂಗಳೂರು ತಂಡವು ಹಾಲಿ ಆವೃತ್ತಿಯಲ್ಲಿ ಆಡಿದ ಎರಡೂ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡಿದೆ. ಹಾಲಿ ಚಾಂಪಿಯನ್‌ ಮುಂಬೈ ತಂಡಕ್ಕೆ ಆಘಾತ ನೀಡಿ ಅಭಿಯಾನ ಆರಂಭಿಸಿದ್ದ ಆರ್‌ಸಿಬಿ ತಂಡವು ತನ್ನ ಎರಡನೇ ಪಂದ್ಯದಲ್ಲಿ ಯು.ಪಿ. ವಾರಿಯರ್ಸ್‌ ತಂಡವನ್ನು ಮಣಿಸಿತ್ತು. ಈ ಪಂದ್ಯದಲ್ಲಿ 144 ರನ್‌ಗಳ ಗುರಿಯನ್ನು ಕೇವಲ 13 ಓವರ್‌ಗಳಲ್ಲಿ ತಲುಪಿತ್ತು.  

ADVERTISEMENT

ಮುಂಬೈ ಇಂಡಿಯನ್ಸ್ ವಿರುದ್ಧದ ಋತುವಿನ ಮೊದಲ ಪಂದ್ಯದಲ್ಲಿ 18 ರನ್‌ಗಳಿಗೆ ಔಟಾದ ನಂತರ ಮಂದಾನ ಮತ್ತೆ ಲಯಕ್ಕೆ ಬಂದಿರುವುದು ತಂಡದ ಬ್ಯಾಟಿಂಗ್‌ ಬಲವನ್ನು ಹೆಚ್ಚಿಸಿದೆ. ವಾರಿಯರ್ಸ್‌ ವಿರುದ್ಧದ ಪಂದ್ಯದಲ್ಲಿ ಅವರು ಸ್ಫೋಟಕ ಬ್ಯಾಟರ್‌ ಗ್ರೇಸ್‌ ಹ್ಯಾರಿಸ್‌ ಜೊತೆಗೂಡಿ ಉತ್ತಮ ಆರಂಭ ಒದಗಿಸಿದ್ದರು.

ಯು.ಪಿ. ವಾರಿಯರ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮಣಿಸಿ ಉತ್ತಮ ಆರಂಭ ಪಡೆದಿದ್ದ ಜೈಂಟ್ಸ್‌ ತಂಡವು ಎರಡು ಬಾರಿಯ ಚಾಂಪಿಯನ್‌ ಮುಂಬೈ ವಿರುದ್ಧ ಮುಗ್ಗರಿಸಿತ್ತು. ಆ್ಯಷ್ಲೆ ಗಾರ್ಡನರ್‌ ನಾಯಕತ್ವದ ತಂಡವು ಗೆಲುವಿನ ಹಳಿಗೆ ಮರಳುವ ಛಲದಲ್ಲಿದೆ. 

ಉತ್ತಮ ಫಾರ್ಮ್‌ನಲ್ಲಿರುವ ನದೀನ್ ಡಿ ಕ್ಲರ್ಕ್, ರಿಚಾ ಘೋಷ್ ಅವರನ್ನು ಒಳಗೊಂಡ ಆರ್‌ಸಿಬಿಯ ಬಲಿಷ್ಠ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಮಾರ್ಗವನ್ನು ಜೈಂಟ್ಸ್ ಬೌಲರ್‌ಗಳು ಕಂಡುಕೊಳ್ಳಬೇಕಾಗಿದೆ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೊ ಹಾಟ್‌ಸ್ಟಾರ್‌

ಗುಜರಾತ್‌ ಜೈಂಟ್ಸ್‌ ತಂಡದ ನಾಯಕಿ ಆ್ಯಷ್ಲೆ ಗಾರ್ಡನರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.