ADVERTISEMENT

ಮಹಿಳಾ ಏಕದಿನ ವಿಶ್ವಕಪ್‌: ಕೌರ್‌ ಬಳಗಕ್ಕೆ ನಿರ್ಣಾಯಕ ಸವಾಲು

ಸೆಮಿಫೈನಲ್‌ ತಲುಪಲು ಭಾರತ ವನಿತೆಯರಿಗೆ ಗೆಲುವು ಅನಿವಾರ್ಯ

ಪಿಟಿಐ
Published 21 ಅಕ್ಟೋಬರ್ 2025, 23:30 IST
Last Updated 21 ಅಕ್ಟೋಬರ್ 2025, 23:30 IST
(ಎಡದಿಂದ) ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌, ಕ್ರಾಂತಿ ಗೌಡ್ ಹಾಗೂ ಸ್ಮೃತಿ ಮಂದಾನ
(ಎಡದಿಂದ) ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌, ಕ್ರಾಂತಿ ಗೌಡ್ ಹಾಗೂ ಸ್ಮೃತಿ ಮಂದಾನ   

ನವಿ ಮುಂಬೈ/ಬೆಂಗಳೂರು: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಸತತ ಮೂರು ಪಂದ್ಯಗಳನ್ನು ಸೋತಿರುವ ಹರ್ಮನ್‌ಪ್ರೀತ್‌ ಕೌರ್‌ ಬಳಗಕ್ಕೆ ಸೆಮಿಫೈನಲ್‌  ಹಾದಿ ಕಠಿಣವಾಗಿದೆ. ಗುರುವಾರ ನಡೆಯಲಿರುವ ನ್ಯೂಜಿಲೆಂಡ್‌ ಎದುರಿನ ಪಂದ್ಯವು ಭಾರತಕ್ಕೆ ನಿರ್ಣಾಯಕವಾಗಲಿದೆ. 

ತವರಿನ ಲಾಭ ಪಡೆದು ಚೊಚ್ಚಲ ಬಾರಿಗೆ ವಿಶ್ವಕಪ್‌ ಗೆಲ್ಲುವ ನಿರೀಕ್ಷೆಯಲ್ಲಿದ್ದ ಭಾರತದ ವನಿತೆಯರು ಇದೀಗ ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯಲೂ ಪರದಾಡುವಂತಾಗಿದೆ. 5 ಪಂದ್ಯಗಳಲ್ಲಿ ಎರಡು ಗೆಲುವಿನೊಂದಿಗೆ 4 ಅಂಕ ಗಳಿಸಿರುವ ಭಾರತ, ಉಳಿದ ಎರಡು ಪಂದ್ಯ ಗೆದ್ದು ಸೆಮಿಫೈನಲ್‌ ಪ್ರವೇಶಿಸುವ ಲೆಕ್ಕಾಚಾರದಲ್ಲಿದೆ. ಆದರೆ, ಇಷ್ಟೇ ಅಂಕಗಳನ್ನು ಹೊಂದಿರುವ ಕಿವೀಸ್‌ ವನಿತೆಯರು ಭಾರತಕ್ಕೆ ಪ್ರಬಲ ಪೈಪೋಟಿ ಒಡ್ಡುವ ಯೋಜನೆಯಲ್ಲಿದ್ದಾರೆ.

ದಕ್ಷಿಣ ಆಫ್ರಿಕಾ ಎದುರು 252 ರನ್‌ ಹಾಗೂ ಆಸ್ಟ್ರೇಲಿಯಾ ಎದುರು 331 ರನ್‌ ಮೊತ್ತವನ್ನು ರಕ್ಷಿಸಿಕೊಳ್ಳಲು ವಿಫಲವಾಗಿದ್ದ ಕೌರ್‌ ಬಳಗಕ್ಕೆ ಇಂಗ್ಲೆಂಡ್‌ ನೀಡಿದ್ದ 289 ರನ್‌ ಗುರಿ ಬೆನ್ನಟ್ಟಲೂ ಸಾಧ್ಯವಾಗಿರಲಿಲ್ಲ. ಅದರಲ್ಲೂ, ಕೊನೆಯ 54 ಎಸೆತಗಳಲ್ಲಿ 56 ರನ್‌ ಗಳಿಸಬೇಕಿದ್ದ ಭಾರತ ಅಂತಿಮ ಕ್ಷಣದಲ್ಲಿ ಗೆಲುವು ಕೈಚೆಲ್ಲಿತ್ತು. ಈ ಹಿನ್ನಡೆಯು ತಂಡದ ತಂತ್ರಗಾರಿಕೆಯ ಮೇಲೆ ಪ್ರಶ್ನೆ ಮೂಡುವಂತೆ ಮಾಡಿದೆ.

ADVERTISEMENT

ಸ್ಮೃತಿ ಮಂದಾನ ಅವರು ಲಯದಲ್ಲಿರುವುದು ಹಾಗೂ ನಾಯಕಿ ಕೌರ್‌ ಅವರು ಕಳೆದ ಪಂದ್ಯದಲ್ಲಿ 70 ರನ್‌ ಗಳಿಸಿರುವುದು ಆತಿಥೇಯ ತಂಡಕ್ಕೆ ಬಲ ತಂದಿದೆ. ಆದರೆ, ಹರ್ಲೀನ್‌ ಡಿಯೋಲ್‌ ಹಾಗೂ ಪ್ರತೀಕಾ ರಾವಲ್‌ ಅವರು ಬ್ಯಾಟಿಂಗ್‌ನಲ್ಲಿ ಇನ್ನೂ ಹೆಚ್ಚಿನ ಕಾಣಿಕೆ ನೀಡಬೇಕಿದೆ.

ಬೌಲಿಂಗ್‌ ವಿಭಾಗವೂ ಅಷ್ಟೇನು ಪರಿಣಾಮಕಾರಿಯಾಗಿಲ್ಲ. ಸ್ಪಿನ್‌ ವಿಭಾಗದಲ್ಲಿ ದೀಪ್ತಿ ಶರ್ಮಾ ಹಾಗೂ ಶ್ರೀಚರಣಿ ಅವರು ಎದುರಾಳಿ ತಂಡದ ಬ್ಯಾಟರ್‌ಗಳಿಗೆ ಕೊಂಚ ಕಡಿವಾಣ ಹಾಕಿದ್ದಾರೆ. ಆದರೆ, ವೇಗದ ಬೌಲಿಂಗ್‌ ವಿಭಾಗದಲ್ಲಿ ಕ್ರಾಂತಿ ಗೌಡ್‌ ಹೊರತುಪಡಿಸಿದರೆ, ಉಳಿದ ಬೌಲರ್‌ಗಳು ಧಾರಾಳವಾಗಿ ರನ್‌ ಬಿಟ್ಟುಕೊಟ್ಟಿದ್ದಾರೆ.

ಅತ್ತ, ಕೊಲಂಬೊದಲ್ಲಿ ನಡೆದ ಎರಡು ಪಂದ್ಯಗಳು ಮಳೆಯಿಂದಾಗಿ ಸ್ಥಗಿತಗೊಂಡಿದ್ದು ನ್ಯೂಜಿಲೆಂಡ್‌ ನಿರಾಶೆಗೊಂಡಿತ್ತು. ಈ ಪಂದ್ಯವನ್ನು ಗೆದ್ದು ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲು ಸೋಫಿ ಡಿವೈನ್‌ ಬಳಗ ಕಾತರಿಸುತ್ತಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಈಗಾಗಲೇ ಸೆಮಿಫೈನಲ್‌ ಟಿಕೆಟ್‌ ಖಚಿತಪಡಿಸಿಕೊಂಡಿವೆ.

ಭಾರತ ತಂಡದ ಆಟಗಾರ್ತಿಯರ ತಾಲೀಮು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.