
ಹರ್ಮನ್‌ಪ್ರೀತ್ ಕೌರ್ ತಂಡ ವಿಶ್ವಕಪ್ ಟ್ರೋಫಿ ಗೆಲ್ಲುತ್ತಿದ್ದಂತೆ ದೇಶದಾದ್ಯಂತ ಸಂಭ್ರಮ ಮುಗಿಲುಮುಟ್ಟಿತ್ತು
ಪಿಟಿಐ ಚಿತ್ರ
ಬೆಂಗಳೂರು: ವಿಶ್ವಕಪ್ ಗೆಲುವಿನ ರೋಮಾಂಚನದ ಅನುಭವ ಹರ್ಮನ್‌ಪ್ರೀತ್ ಅವರಿಗೆ ಈಗ ಆಗಿದೆ. ಸ್ವಸಾಮರ್ಥ್ಯದಲ್ಲಿ ಇರಿಸಿದ ನಂಬಿಕೆಯು ಅವರನ್ನು, ಅವರ ತಂಡವನ್ನು ಐದು ವಾರಗಳ ಅವಧಿ, ಒಂಬತ್ತು ಪಂದ್ಯಗಳ ನಂತರ ಭಾನುವಾರ ವಿಶ್ವಕಪ್ ಟ್ರೋಫಿ ಎತ್ತಿಹಿಡಿಯುವಂತೆ ಮಾಡಿದೆ.
ವಿಶ್ವಕಪ್ ಗೆದ್ದ ಸಂಭ್ರಮದಲ್ಲಿ ಮಿಂದೆದ್ದಾಗ ಮಧ್ಯರಾತ್ರಿ ಕಳೆದು ಸೋಮವಾರ ಆರಂಭವಾಗಿತ್ತು. ಮಾಧ್ಯಮಗೋಷ್ಠಿಯಲ್ಲಿ ನಾಯಕಿ ಹರ್ಮನ್‌ಪ್ರೀತ್ ಮುಂದಿದ್ದ ಮೇಜಿನಲ್ಲಿ ವಿಶ್ವಕಪ್ ಟ್ರೋಫಿ ಮಿಂಚುತಿತ್ತು.
‘ಈ ಪಯಣದಲ್ಲಿ ಏಳು ಬೀಳುಗಳಿದ್ದವು. ಆದರೆ ತಂಡ ಸ್ವಸಾಮರ್ಥ್ಯಲ್ಲಿ ವಿಶ್ವಾಸ ಕಳೆದುಕೊಳ್ಳಲಿಲ್ಲ. ನಮ್ಮ ಲಕ್ಷ್ಯ ಒಂದೇ ಗುರಿಯ ಕಡೆಯಿತ್ತು. ಆ ಗುರಿ ವಿಶ್ವಕಪ್ ಟ್ರೋಫಿ ಎತ್ತಿಹಿಡಿಯುವುದಾಗಿತ್ತು’ ಎಂದು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ನಾಯಕಿ ಹೇಳಿದರು. ಅವರ ಎದುರಿನ ಮೇಜಿನಲ್ಲಿ ವಿಶ್ವಕಪ್ ಟ್ರೋಫಿ ಮಿರುಗುತಿತ್ತು.
ಈ ವರ್ಷದ ಆಗಸ್ಟ್‌ನಲ್ಲಿ ವಿಶ್ವಕಪ್‌ಗೆ 50 ದಿನಗಳಿರುವಾಗ ಮುಂಬೈನಲ್ಲಿ ನಡೆದ ‘ಕೌಂಟ್ ಡೌನ್’ ಸಮಾರಂಭದಲ್ಲಿ ಕೌರ್ ಜತೆಯಲ್ಲಿ ಅನುಭವಿ ಬ್ಯಾಟರ್‌ಗಳಾದ ಸ್ಮೃತಿ ಮಂದಾನ ಮತ್ತು ಜೆಮಿಮಾ ರಾಡ್ರಿಗಸ್ ಅವರೂ ಇದ್ದರು. ತವರಿನಲ್ಲಿ ಪುರುಷರ ತಂಡ 2011ರಲ್ಲಿ ವಿಶ್ವಕಪ್ ಗೆದ್ದ ಸಾಧನೆಯನ್ನು ತಾವೂ ಮಾಡಲು ಅವರು ಪಣತೊಟ್ಟಂತೆ ಕಂಡಿದ್ದರು.
‘ತವರಿನ ಅಭಿಮಾನಿಗಳ ಎದುರು ವಿಶ್ವಕಪ್ ಆಡುವುದು ಮಕ್ಕಳ ಆಟದಂತಲ್ಲ. ಹೊರಗಿನ ಟೀಕೆ– ಟಿಪ್ಪಣಿಗಳ ಸದ್ದುಗದ್ದಲಗಳಿಗೆ ತಲೆಕೆಡಿಸಿಕೊಳ್ಳದೇ ಟ್ರೋಫಿ ಗೆಲ್ಲುವ ಒಂದೇ ಗುರಿಯ ಕಡೆ ಗಮನವಿಡಬೇಕು’ ಎಂದು ಆ ವಿಶ್ವಕಪ್‌ನಲ್ಲಿ ಭಾರತ ತಂಡದ ಗೆಲುವಿನ ರೂವಾರಿಯಾಗಿದ್ದ ಯುವರಾಜ್ ಸಿಂಗ್ ಕಿವಿಮಾತು ಹೇಳಿದ್ದರು.
ಅವರು ಹೇಳಿದಂತೆ ಭಾರತಕ್ಕೆ ಈ ಅಭಿಯಾನ ಸುಲಭದ್ದಾಗಿರಲಿಲ್ಲ. ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳ ಎದುರು ಗೆದ್ದ ನಂತರ ತಂಡವು, ಪ್ರಬಲ ಎದುರಾಳಿಗಳ ವಿರುದ್ಧ ಸತತವಾಗಿ ಮೂರು ಪಂದ್ಯಗಳಲ್ಲಿ ಸೋಲುಂಡಿತು. ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಯ ಭಾರದ ಅನುಭವ ಆಗತೊಡಗಿತು.
ತಂಡ ಹಿನ್ನಡೆ ಕಂಡಾಗ ಗೆಲುವಿನ ಹಂತದಲ್ಲಿದ್ದ ಪಂದ್ಯಗಳನ್ನು ಕೈಚೆಲ್ಲುತ್ತಿದೆ ಎಂಬ ಟೀಕೆಗಳನ್ನು ಎದುರಿಸಬೇಕಾಯಿತು. ಸ್ಮೃತಿ ಮಂದಾನ ಮತ್ತು ಪ್ರತೀಕಾ ರಾವಲ್ ಉತ್ತಮ ಆರಂಭ ಮಾಡಿದರೂ ಮಧ್ಯಮ ಕ್ರಮಾಂಕ ಸ್ಥಿರ ಪ್ರದರ್ಶನ ನೀಡಲಿಲ್ಲ.
ಇಂಗ್ಲೆಂಡ್ ವಿರುದ್ಧ 70 ರನ್ ಮತ್ತು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 88 ರನ್ ಗಳಿಸಿದ್ದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಕೌರ್ ಸ್ವತಃ ಹೇಳಿಕೊಳ್ಳುವಂಥ ಆಟ ಆಡಿರಲಿಲ್ಲ. ಮೂರನೇ ಕ್ರಮಾಂಕದ ಆಟಗಾರ್ತಿ ಹರ್ಲೀನ್ ಡಿಯೋಲ್ ಮೊದಲ ಐದು ಪಂದ್ಯಗಳಲ್ಲಿ ಉತ್ತಮ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಲಿಲ್ಲ. ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತ ಗಳಿಸಲಿಲ್ಲ. ಹೀಗಾಗಿ ಮೂರನೇ ಕ್ರಮಾಂಕವನ್ನು ನಂತರ ಜೆಮಿಮಾ ರಾಡ್ರಿಗಸ್ ಅವರಿಗೆ ಬಿಟ್ಟುಕೊಟ್ಟರು.
ಕೆಳ ಮಧ್ಯಮ ಕ್ರಮಾಂಕದಲ್ಲಿ ನಂಬಿಕಸ್ಥ ಆಟಗಾರ್ತಿ ದೀಪ್ತಿ ಶರ್ಮಾ ಕೆಲವು ಪಂದ್ಯಗಳಲ್ಲಿ ತಂಡವನ್ನು ಆಪತ್ತಿನಿಂದ ಕಾಪಾಡಿದರು. ಅವರಿಗೆ ರಿಚಾ ಘೋಷ್, ಅಮನ್ಜೋತ್ ಕೌರ್ ಮತ್ತು ಸ್ನೇಹ ರಾಣಾ ಅವರಿಂದ ಉಪಯುಕ್ತ ಬೆಂಬಲ ದೊರೆಯಿತು. ಹೀಗಾಗಿ ತಂಡ ಮಧ್ಯಮಹಂತದ ಕುಸಿತದಿಂದ ಅಧೀರಗೊಳ್ಳುವ ಸ್ಥಿತಿ ಎದುರಾಗಲಿಲ್ಲ.
ತವರಿನ ವಿಶ್ವಕಪ್ ಟೂರ್ನಿಯು ಮಾನಸಿಕವಾಗಿ ದಣಿವು ಉಂಟುಮಾಡುತ್ತದೆ. ಆದರೆ ಇದರಲ್ಲೂ ಕೆಲವು ಸಕಾರಾತ್ಮಕ ಅಂಶಗಳಿದ್ದವು. ಬೆಂಗಳೂರಿನ ಪಂದ್ಯಗಳನ್ನು ಡಿ.ವೈ. ಪಾಟೀಲ ಕ್ರೀಡಾಂಗಣ ಸೇರಿದಂತೆ ಬೇರೆ ಕ್ರೀಡಾಂಗಣಗಳಿಗೆ ಸ್ಥಳಾಂತರಿಸಿದ್ದು ಇದರಲ್ಲಿ ಒಳಗೊಂಡಿತು. ಇದೂ ತಂಡಕ್ಕೆ ಸಂತಸ ಮೂಡಿಸಿತು.
‘ಡಿ.ವೈ ಪಾಟೀಲ ಕ್ರೀಡಾಂಗಣಕ್ಕೆ ನಮ್ಮ ಪಂದ್ಯಗಳನ್ನು ಸ್ಥಳಾಂತರಿಸಿದ್ದು ಗೊತ್ತಾದ ತಕ್ಷಣ ನಮಗೆಲ್ಲಾ ಸಂತಸವಾಯಿತು. ಇಲ್ಲಿ ನಾವು ಉತ್ತಮವಾಗಿ ಆಡಿದ್ದೇವೆ. ಇಲ್ಲಿನ ಪ್ರೇಕ್ಷಕರು ಒಕ್ಕೊರಲಿನ ಬೆಂಬಲ ನೀಡುತ್ತ ಬಂದಿದ್ದಾರೆ’ ಎಂದು ಕೌರ್ ಹೇಳಿದರು.
ಬಾಂಗ್ಲಾದೇಶದ ವಿರುದ್ಧ ಪಂದ್ಯ ಮಳೆಯ ಪಾಲಾಗಿತ್ತು. ಇದನ್ನು ಬಿಟ್ಟು ಈ ಕ್ರೀಡಾಂಗಣದಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲಿ ಭಾರತ ತಂಡ ಜಯಗಳಿಸಿತು. ಈ ಎಲ್ಲ ಪಂದ್ಯಗಳೂ ಮಾಡು–ಮಡಿ ರೀತಿಯದ್ದಾಗಿದ್ದವು.
ನ್ಯೂಜಿಲೆಂಡ್ ಎದುರಿನ ಲೀಗ್ ಹಂತದ ಪಂದ್ಯ ಕ್ವಾರ್ಟರ್‌ಫೈನಲ್ ಪಂದ್ಯದಂತೆ ಇತ್ತು. ಭಾರತ ಇಲ್ಲಿ ಮೊದಲು ಬ್ಯಾಟ್ ಮಾಡಿ 3 ವಿಕೆಟ್‌ಗೆ 340 ರನ್ ಪೇರಿಸಿತು. ಇದು ಪಂದ್ಯ ಗೆಲ್ಲಲು ಧಾರಾಳ ಎನಿಸಿತು. ಆಸ್ಟ್ರೇಲಿಯಾ ಎದುರು ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ವಿಶ್ವದಾಖಲೆಯ ಚೇಸ್ ಮಾಡಿತು. ಈ ಪಂದ್ಯದಲ್ಲಿ ಜೆಮಿಮಾ ರಾಡ್ರಿಗಸ್ ಅವರ ಅಜೇಯ ಶತಕದ ಆಟ ಅವಿಸ್ಮರಣೀಯ ಎನ್ನುವಂತಿತ್ತು. ಅವಳ ಆಟದ ಬಗ್ಗೆಯಿದ್ದ ಸಂಶಯಗಳನ್ನೆಲ್ಲಾ ಆ ಆಟ ದೂರ ಮಾಡಿತು. ಇಂಗ್ಲೆಂಡ್ ವಿರುದ್ಧ ಪಂದ್ಯದಿಂದ ಹೊರಬಿದ್ದಿದ್ದ ಜೆಮಿಮಾ ಅವರ ಆತ್ಮವಿಮರ್ಶೆಗೂ ಕಾರಣವಾಯಿತು.
ಮೂಲ ತಂಡದಲ್ಲಿ ಇಲ್ಲದ ಆಟಗಾರ್ತಿ, ಒಂದು ವರ್ಷ ಭಾರತ ಏಕದಿನ ತಂಡದಿಂದ ‘ವನವಾಸ’ ಅನುಭವಿಸಿದ್ದ ಶಫಾಲಿ ವರ್ಮಾ ಫೈನಲ್ ಪಂದ್ಯದಲ್ಲಿ ಚಮತ್ಕಾರದ ಆಟ ಮೆರೆದರು. ಆ ಪಂದ್ಯದಲ್ಲಿ ಅಮೋಘ 87 ರನ್‌ಗಳ ಜೊತೆ ಆಫ್ ಬ್ರೇಕ್ ಬೌಲಿಂಗ್‌ನಲ್ಲಿ ಎರಡು ವಿಕೆಟ್ ಪಡೆದಿದ್ದು, ಹರಿಣಗಳ ಪಡೆಯನ್ನು ಅಚ್ಚರಿಗೆ ದೂಡಿತು.
2005 ಮತ್ತು 2017ರಲ್ಲಿ ಭಾರತ ತಂಡ ಫೈನಲ್‌ನಲ್ಲಿ ಅವಕಾಶ ಕೈಚೆಲ್ಲಿತು. ಆದರೆ ಹರ್ಮನ್‌ಪ್ರೀತ್ ಕೌರ್ ಪಡೆ ಈ ಅವಕಾಶ ಕೈಬಿಡಲಿಲ್ಲ. ಸಮಾನ ಗುರಿಯನ್ನು ಸಾಧಿಸಿಲು ಒಂದೇ ಕುಟುಂಬದ ಸದಸ್ಯರ ರೀತಿ ಅವರೆಲ್ಲ ಆಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.