ADVERTISEMENT

ಐಪಿಎಲ್‌ ನಡೆಸಲು ಮಾರ್ಗೋಪಾಯಗಳ ಪರಿಶೀಲನೆ: ಗಂಗೂಲಿ

ಪ್ರೇಕ್ಷಕರಿಗೆ ನಿರ್ಬಂಧ ವಿಧಿಸುವ ಸಾಧ್ಯತೆ

ಪಿಟಿಐ
Published 11 ಜೂನ್ 2020, 7:10 IST
Last Updated 11 ಜೂನ್ 2020, 7:10 IST
ಬಿಸಿಸಿಐ ಅಧ್ಯಕ್ಷ
ಬಿಸಿಸಿಐ ಅಧ್ಯಕ್ಷ    

ನವದೆಹಲಿ: ‘ಅಮಾನತಿನಲ್ಲಿರುವ ಈ ವರ್ಷದ ಇಂಡಿಯನ್ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಅನ್ನು,ಕೋವಿಡ್‌ ಪಿಡುಗಿನ ಹೊರತಾಗಿಯೂ ಹಮ್ಮಿಕೊಳ್ಳಲು ಇರುವ ಎಲ್ಲಾ ಮಾರ್ಗೋಪಾಯಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ’ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಸೂಚನೆ ನೀಡಿದ್ದಾರೆ.

ಐಸಿಸಿ ಮಂಡಳಿ ಸಭೆಯ ನಂತರ ಬುಧವಾರ ರಾತ್ರಿ ಅವರು ಬಿಸಿಸಿಐ ಸಂಯೋಜಿತ ಘಟಕಗಳಿಗೆ ಬರೆದ ಪತ್ರದಲ್ಲಿ ಈ ಬಗ್ಗೆ ಸುಳಿವು ನೀಡಿದ್ದಾರೆ. ಕೊರೊನಾ ವೈರಸ್‌ ಹಾವಳಿಯಿಂದ ಐಪಿಎಲ್‌ ಅನ್ನು ಅನಿರ್ದಿಷ್ಟ ಅವಧಿಗೆ ಅಮಾನತಿನಲ್ಲಿಡಲಾಗಿದೆ. ಭಾರತದಲ್ಲಿ ಕೋವಿಡ್‌ ಪಿಡುಗಿಗೆ ಇದುವರೆಗೆ ಎಂಟು ಸಾವಿರ ಮಂದಿ ಮೃತರಾಗಿದ್ದಾರೆ.

‘ಈ ವರ್ಷವೂ ಐಪಿಎಲ್‌ ಹಮ್ಮಿಕೊಳ್ಳಲು ಸಿದ್ಧರಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಿಸಿಸಿಐ ತನ್ನ ಮುಂದಿರುವ ಎಲ್ಲ ಇರುವ ಆಯ್ಕೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಟೂರ್ನಿಯನ್ನು ಖಾಲಿ ಕ್ರೀಡಾಂಗಣದಲ್ಲಿ ನಡೆಸುವ ಆಯ್ಕೆಯೂ ಇದರಲ್ಲಿ ಒಂದು’ ಎಂದು ಗಂಗೂಲಿ ಪತ್ರದಲ್ಲಿ ಬರೆದಿದ್ದಾರೆ.

ADVERTISEMENT

‘ಅಭಿಮಾನಿಗಳು, ಫ್ರಾಂಚೈಸ್‌ಗಳು, ಆಟಗಾರರು, ಪ್ರಸಾರ ಹಕ್ಕು ಪಡೆದವರು, ಪ್ರಾಯೋಜಕರು ಮತ್ತು ಇತರ ಭಾಗೀದಾರರು ಈ ವರ್ಷ ಐಪಿಎಲ್‌ ನಡೆಯುವ ಸಾಧ್ಯತೆಯನ್ನು ಕಾತರದಿಂದ ಎದುರುನೋಡುತ್ತಿದ್ದಾರೆ’ ಎಂದೂ ಗಂಗೂಲಿ ಉಲ್ಲೇಖಿಸಿದ್ದಾರೆ.

‘ಈ ವರ್ಷದ ಲೀಗ್‌ನಲ್ಲಿ ಭಾಗವಹಿಸಲು ಭಾರತ ಮತ್ತು ಇತರ ದೇಶಗಳ ಆಟಗಾರರು ಉತ್ಸುಕತೆ ತೋರಿದ್ದಾರೆ. ನಾವು ಆಶಾವಾದಿಗಳಾಗಿದ್ದೇವೆ. ಮುಂದಿನ ಕ್ರಮಗಳ ಬಗ್ಗೆ ಬಿಸಿಸಿಐ ಶೀಘ್ರವೇ ನಿರ್ಧಾರಕ್ಕೆ ಬರಲಿದೆ’ ಎಂದು ಭಾರತ ತಂಡದ ಮಾಜಿ ನಾಯಕರೂ ಆಗಿರುವ ಗಂಗೂಲಿ ವಿವರಿಸಿದ್ದಾರೆ.

ಈ ವರ್ಷ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ಟ್ವೆಂಟಿ–20 ವಿಶ್ವಕಪ್ ಮುಂದೂಡಿಕೆಯಾಗಬಹುದು, ಆ ಅವಧಿಯಲ್ಲಿ ಐಪಿಎಲ್‌ ನಡೆಸಲು ಬಿಸಿಸಿಐ ಕಣ್ಣಿಟ್ಟಿದೆ ಎಂಬ ಮಾತುಗಳೂ ಕೇಳಿಬಂದಿವೆ. ಆದರೆ ಟಿ–20 ವಿಶ್ವಕಪ್‌ ಭವಿಷ್ಯವನ್ನು ಮುಂದಿನ ತಿಂಗಳು ನಿರ್ಧರಿಸಿರುವುದಾಗಿ ಐಸಿಸಿ ಬುಧವಾರ ಹೇಳಿದೆ. ಹೀಗಾಗಿ ಕುತೂಹಲ ಇನ್ನೂ ಉಳಿದಿದೆ.

ಇದರ ಜೊತೆಗೆ ದೇಶಿಯ ಟೂರ್ನಿಗಳ ವೇಳಾಪಟ್ಟಿಯ ಬಗ್ಗೆಯೂ ಯೋಜನೆ ರೂಪಿಸಲಾಗುತ್ತಿದೆ. ರಣಜಿ ಟ್ರೋಫಿ, ದುಲೀಪ್‌ ಟ್ರೋಫಿ ಮತ್ತು ವಿಜಯ್‌ ಹಜಾರೆ ಟೂರ್ನಿಗಳನ್ನು ‘ಸ್ಪರ್ಧಾತ್ಮಕ ಮತ್ತು ಕಾರ್ಯಸಾಧು’ವಾಗಿಸುವ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಭಾರತ ತಂಡದ ಮಾಜಿ ನಾಯಕ ಹೇಳಿದ್ದಾರೆ.

ಮುಂದಿನ ಒಂದೆರಡು ವಾರಗಳಲ್ಲಿ ಬಿಸಿಸಿಐ ಹೆಚ್ಚಿನ ವಿವರಗಳನ್ನು ನೀಡಲಿದೆ ಎಂದಿದ್ದಾರೆ.

ಬಿಸಿಸಿಐನಿಂದ ಎಸ್‌ಒಪಿ

ರಾಜ್ಯಗಳಲ್ಲಿ ಕ್ರಿಕೆಟ್‌ ಚಟವಟಿಕೆ ಮರುಚಾಲನೆ ಪಡೆದುಕೊಳ್ಳುವಾಗ ಆರೋಗ್ಯ ಸುರಕ್ಷತೆಯನ್ನು ಪಾಲಿಸಲು, ಬಿಸಿಸಿಐ ಕಾರ್ಯನಿರ್ವಹಣಾ ಮಾನದಂಡಗಳನ್ನು (ಎಸ್‌ಒಪಿ) ಸಿದ್ಧಪಡಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ತನ್ನ ಎಲ್ಲ ಸದಸ್ಯ ಸಂಸ್ಥೆಗಳಿಗೆ ನೆರವು, ಅನುದಾನ ಬಿಡುಗಡೆ ಮಾಡಲು ಬಿಸಿಸಿಐ ಎಲ್ಲಾ ಪ್ರಯತ್ನ ನಡೆಸಲಿದೆ. ಈಗಾಗಲೇ ಲೆಕ್ಕಪತ್ರ ಸಲ್ಲಿಸಿರುವ ಮತ್ತು ನೆರವು ಬಳಸಿರುವ ಬಗ್ಗೆ ಪ್ರಮಾಣಪತ್ರ ಸಲ್ಲಿಸಿರುವ ಎಲ್ಲ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಆಗಿದೆ ಎಂದಿದ್ದಾರೆ ಗಂಗೂಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.