ADVERTISEMENT

ಜಯದ ಹಾದಿಗೆ ಮರಳುವತ್ತ ಆಸ್ಟ್ರೇಲಿಯಾ ಚಿತ್ತ

ಚಾಂಪಿಯನ್‌ ತಂಡವನ್ನು ಮಣಿಸುವ ಉತ್ಸಾಹದಲ್ಲಿ ಪಾಕಿಸ್ತಾನ

ಏಜೆನ್ಸೀಸ್
Published 11 ಜೂನ್ 2019, 19:45 IST
Last Updated 11 ಜೂನ್ 2019, 19:45 IST
ಫೀಲ್ಡಿಂಗ್ ತಾಲೀಮು ನಡೆಸಿದ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್  –ರಾಯಿಟರ್ಸ್‌ ಚಿತ್ರ
ಫೀಲ್ಡಿಂಗ್ ತಾಲೀಮು ನಡೆಸಿದ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್  –ರಾಯಿಟರ್ಸ್‌ ಚಿತ್ರ   

ಟಾಂಟನ್, ಇಂಗ್ಲೆಂಡ್: ಭಾರತ ತಂಡದ ಎದುರು ಸೋಲಿನ ಆಘಾತ ಅನುಭವಿಸಿರುವ ‘ಹಾಲಿ ಚಾಂಪಿಯನ್’ ಆಸ್ಟ್ರೇಲಿಯಾ ತಂಡವು ಗೆಲುವಿನ ಹಾದಿಗೆ ಮರಳುವತ್ತ ಚಿತ್ತ ನೆಟ್ಟಿದೆ.

ಟಾಂಟನ್‌ನ ಕೌಂಟಿ ಪಿಚ್‌ನಲ್ಲಿ ಬುಧವಾರ ನಡೆಯಲಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಪಾಕಿಸ್ತಾನವನ್ನು ಎದುರಿಸಲಿದೆ. ಸರ್ಫರಾಜ್ ಅಹಮದ್ ನಾಯಕತ್ವದ ಪಾಕ್ ಬಳಗವು ಟೂರ್ನಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಸೋತಿದೆ. ಇನ್ನೊಂದರಲ್ಲಿ ಗೆದ್ದಿತ್ತು. ಆದರೆ ಮೂರನೇ ಪಂದ್ಯವು ಮಳೆಗೆ ಆಹುತಿಯಾಗಿತ್ತು.

ಪಾಕ್ ತಂಡವು ಇಂಗ್ಲೆಂಡ್ ವಿರುದ್ಧ 14 ರನ್‌ಗಳ ರೋಚಕ ಜಯ ಸಾಧಿಸಿತ್ತು. ಅದೇ ಲಯವನ್ನು ಇಲ್ಲಿಯೂ ಮುಂದುವರಿಸುವ ಛಲದಲ್ಲಿದೆ. ಭಾರತದ ಎದುರು ಸೋತಿದ್ದ ಫಿಂಚ್ ಬಳಗಕ್ಕೆ ಮತ್ತೊಂದು ಪೆಟ್ಟು ಕೊಡುವ ಉತ್ಸಾಹದಲ್ಲಿದೆ.

ADVERTISEMENT

ಆಸ್ಟ್ರೇಲಿಯಾದ ಮಿಷೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್‌, ಸ್ಪಿನ್ನರ್ ಆ್ಯಡಂ ಜಂಪಾ ಅವರು ಭಾರತದ ಎದುರಿನ ಪಂದ್ಯದಲ್ಲಿ ದುಬಾರಿಯಾಗಿದ್ದರು. 353 ರನ್‌ಗಳ ಗುರಿಯನ್ನು ಮುಟ್ಟುವಲ್ಲಿ ಬ್ಯಾಟಿಂಗ್ ಪಡೆಯೂ ಸಫಲವಾಗಿರಲಿಲ್ಲ. 36 ರನ್‌ಗಳಿಂದ ಸೋತಿತ್ತು. ಆದರೆ, ತಂಡದ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಅವರು ಸತತವಾಗಿ ಉತ್ತಮ ಆಟವಾಡುತ್ತಿದ್ದಾರೆ. ಅವರು ಲಯದಲ್ಲಿರುವುದು ತಂಡದ ಬಲವನ್ನು ಹೆಚ್ಚಿಸಿದೆ. ಆದರೆ ಆರಂಭಿಕ ಬ್ಯಾಟ್ಸ್‌ಮನ್‌ ಆ್ಯರನ್ ಫಿಂಚ್ ಸತತವಾಗಿ ವೈಫಲ್ಯ ಅನುಭವಿಸುತ್ತಿರುವುದು ಚಿಂತೆ ಮೂಡಿಸಿದೆ.

ಪಾಕಿಸ್ತಾನ ತಂಡದ ಬೌಲರ್ ಮೊಹಮ್ಮದ್ ಅಮೀರ್ ಬಿಟ್ಟರೆ ಉಳಿದ ಬೌಲರ್‌ಗಳು ಉತ್ತಮವಾಗಿ ಆಡುತ್ತಿಲ್ಲ. ಬ್ಯಾಟಿಂಗ್‌ನಲ್ಲಿಯೂ ಪ್ರಮುಖ ಆಟಗಾರರು ಸ್ಥಿರವಾಗಿಲ್ಲ. ಆಸ್ಟ್ರೇಲಿಯಾ ಎದುರು ಯೋಜನಾಬದ್ಧವಾಗಿ ಆಡಿದರೆ ಮಾತ್ರ ಕಠಿಣ ಪೈಪೋಟಿ ನೀಡಲು ಸಾಧ್ಯ ಎಂಬ ಸತ್ಯ ಸರ್ಫರಾಜ್‌ಗೆ ಅರಿವಿದೆ. ಆದರೆ, ಈ ಹಿಂದೆ ಪಾಕ್ ತಂಡವು ಆಸ್ಟ್ರೇಲಿಯಾದ ಎದುರು ಸೋತಿದ್ದೇ ಹೆಚ್ಚು.

‘ಆಸ್ಟ್ರೇಲಿಯಾ ಎದುರು ನಾವು ಹೆಚ್ಚು ಪಂದ್ಯಗಳನ್ನು ಗೆದ್ದಿಲ್ಲ. ಇಂಗ್ಲೆಂಡ್ ಎದುರು ಕೂಡ ಹೆಚ್ಚು ಜಯಿಸಿಲ್ಲ ಎಂಬುದು ನಿಜ. ಆದರೂ ನಾವು ಇಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದೆವು. ಆದ್ದರಿಂದ ತಂಡದಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಆಸ್ಟ್ರೇಲಿಯಾ ಎದುರು ಕೂಡ ಅದೇ ರೀತಿ ಆಡುತ್ತೇವೆ’ ಎಂದು ಸರ್ಫರಾಜ್ ಹೇಳಿದ್ದಾರೆ.

ತಂಡಗಳು
ಆಸ್ಟ್ರೇಲಿಯಾ: ಆ್ಯರನ್ ಫಿಂಚ್ (ನಾಯಕ), ಬೆಹ್ರನ್‌ಡಾರ್ಫ್‌, ಅಲೆಕ್ಸ್‌ ಕ್ಯಾರಿ (ವಿಕೆಟ್‌ಕೀಪರ್), ನೇಥನ್ ಕಾಲ್ಟರ್‌ನೇಲ್, ಪ್ಯಾಟ್ ಕಮಿನ್ಸ್‌, ಉಸ್ಮಾನ್ ಖ್ವಾಜಾ, ನೇಥನ್ ಲಯನ್, ಶಾನ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವನ್ ಸ್ಮಿತ್, ಮಿಷೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆ್ಯಡಂ ಜಂಪಾ, ರಿಚರ್ಡ್ಸನ್.

ಪಾಕಿಸ್ತಾನ:ಸರ್ಫರಾಜ್ ಅಹಮದ್ (ನಾಯಕ/ವಿಕೆಟ್‌ಕೀಪರ್), ಶಾಹೀದ್ ಆಫ್ರಿದಿ, ಅಸಿಫ್ ಅಲಿ, ಮೊಹಮ್ಮದ್ ಅಮಿರ್, ಬಾಬರ್ ಅಜಂ, ಮೊಹಮ್ಮದ್ ಹಫೀಜ್, ಇಮಾಮ್ ಉಲ್ ಹಕ್, ಮೊಹಮ್ಮದ್ ಹಸನೈನ್, ಶಾದಾಬ್ ಖಾನ್, ಶೋಯಬ್ ಮಲಿಕ್, ವಹಾಬ್ ರಿಯಾಜ್, ಇಮಾದ್ ವಾಸೀಂ, ಫಕ್ರ್‌ ಜಮಾನ್.

***

ಪಿಚ್‌ ಬಗ್ಗೆ ಸರ್ಫರಾಜ್ ಅಸಮಾಧಾನ
ಕರಾಚಿ: ಬುಧವಾರ ಪಂದ್ಯ ನಡೆಯಲಿರುವ ಪಿಚ್‌ ಬಗ್ಗೆ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹಮದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟಾಂಟನ್ ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಾಕ್ ತಂಡವು ಆಸ್ಟ್ರೆಲಿಯಾ ವಿರುದ್ಧ ಸೆಣಸಲಿದೆ.

ಮಂಗಳವಾರ ಪಿಚ್ ವೀಕ್ಷಿಸಿದ ನಂತರ ’ಜಂಗ್’ ಪತ್ರಿಕೆಯೊಂದಿಗೆ ಮಾತನಾಡಿದ ಸರ್ಫರಾಜ್ ಅಸಮಾಧಾನ ವ್ಯಕ್ತಪಡಿಸಿದರು.

‘ಏಷ್ಯನ್ ತಂಡಗಳಿಗೆ ಅನುಕೂಲವಾಗುವಂತಹ ಪಿಚ್‌ ನಮಗೆ ಸಿಗುತ್ತಿಲ್ಲ. ಭಾರತ ತಂಡವು ಆಡುತ್ತಿರುವ ಪಿಚ್‌ಗಳು ಬ್ಯಾಟ್ಸ್‌ಮನ್‌ ಮತ್ತು ಸ್ಪಿನ್ನರ್‌ಗಳಿಗೆ ನೆರವು ನೀಡುತ್ತಿವೆ’ ಎಂದು ಸರ್ಫರಾಜ್ ಹೇಳಿದ್ದಾರೆ.

ಟಾಂಟನ್ ಕ್ರೀಡಾಂಗಣದ ಪಿಚ್‌ ವೇಗದ ಬೌಲರ್‌ಗಳಿಗೆ ಉತ್ತಮ ನೆರವು ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಭಾರತದೆದುರು ‘ವಿಶೇಷ’ ಸಂಭ್ರಮ ಇಲ್ಲ!
ಕರಾಚಿ: ಮುಂದಿನ ಭಾನುವಾರ ಭಾರತದ ಎದುರು ನಡೆಯಲಿರುವ ಪಂದ್ಯದಲ್ಲಿ ತಮ್ಮ ಆಟಗಾರರು ಸಂಭ್ರಮಿಸಲು ಯಾವುದೇ ‘ವಿಶೇಷ’ ಸಿದ್ಧತೆ ಮಾಡಿಕೊಂಡಿಲ್ಲ ಎಂದು ಪಾಕಿಸ್ತಾನ ತಂಡದ ವ್ಯವಸ್ಥಾಪಕ ತಲತ್ ಅಲಿ ಹೇಳಿದ್ದಾರೆ.

‘ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭೇಟಿಯಾದಾಗ ವಿಶೇಷ ಸಂಭ್ರಮದ ಯಾವುದೇ ಸೂಚನೆಯೂ ತಂಡಕ್ಕೆ ಸಿಕ್ಕಿಲ್ಲ. ಅದು ಸುಳ್ಳು ಸುದ್ದಿ. ಲಂಡನ್‌ಗೆ ತಂಡ ಬಂದ ಮೇಲೂ ಇಮ್ರಾನ್ ಜೊತೆಗೆ ಯಾವುದೇ ಸಂಪರ್ಕ ಇಲ್ಲ. ಭಾರತ ವಿರುದ್ಧ ಪಂದ್ಯವು ಉಳಿದ ತಂಡಗಳ ಪಂದ್ಯಗಳಂತೆಯೇ ಆಗಿದೆ. ಅದರಲ್ಲೇನೂ ವಿಶೇಷವಿಲ್ಲ’ ಎಂದು ಅಲಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.