ವಿಕೆಟ್ ಪಡೆದ ಸಂಭ್ರಮದಲ್ಲಿ ಆರ್‌ಸಿಬಿ ಆಟಗಾರ್ತಿಯರು
ಚಿತ್ರ: X / @wplt20
ವಡೋದರ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್‌ಗಳು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ ನಂತರ ನಾಯಕಿ ಸ್ಮೃತಿ ಮಂದಾನ (81, 47ಎ) ಭರ್ಜರಿ ಆಟವಾಡಿದರು. ಸೋಮವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ತಂಡ ಎಂಟು ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಮೇಲೆ ಜಯಗಳಿಸಿತು.
ಕಳೆದ ಬಾರಿಯ ರನ್ನರ್ ಅಪ್ ಡೆಲ್ಲಿ 19.3 ಓವರುಗಳಲ್ಲಿ 141 ರನ್‌ಗಳಿಗೆ ಆಲೌಟ್ ಆಯಿತು. ಆರ್‌ಸಿಬಿ ಇನ್ನೂ 22 ಎಸೆತಗಳಿರುವಂತೆ 2 ವಿಕೆಟ್‌ಗೆ 146 ರನ್ ಹೊಡೆದು ಸತತ ಎರಡನೇ ಗೆಲುವನ್ನು ಆಚರಿಸಿತು. ಈ ಬಾರಿಯ ಲೀಗ್‌ನ ನಾಲ್ಕನೇ ಪಂದ್ಯದಲ್ಲೂ ಎರಡನೆಯದಾಗಿ ಆಡಿದ ತಂಡವೇ ಜಯಗಳಿಸಿದಂತಾಯಿತು.
ಕೋತಂಬಿ ಕ್ರೀಡಾಂಗಣದಲ್ಲಿ ಹತ್ತು ಬೌಂಡರಿ, ಮೂರು ಸಿಕ್ಸರ್‌ಗಳನ್ನು ಸಿಡಿಸಿದ ಮಂದಾನ ಗೆಲುವಿಗೆ 9 ರನ್‌ಗಳು ಬೇಕಿದ್ದಾಗ ನಿರ್ಗಮಿಸಿದರು. ಎಲಿಸ್ ಪೆರಿ (ಅಜೇಯ 7) ಮತ್ತು ರಿಚಾ ಘೋಷ್ (ಅಜೇಯ 11) ಗೆಲುವಿನ ಔಪಚಾರವನ್ನು ಪೂರೈಸಿದರು.
ಸ್ಮೃತಿ ಮತ್ತು ಡ್ಯಾನಿ ವ್ಯಾಟ್ ಹಾಜ್ ಅವರು ತಂಡಕ್ಕೆ ಬಿರುಸಿನ ಆರಂಭ ಒದಗಿಸಿದರು. ಪವರ್‌ಪ್ಲೇಯಲ್ಲಿ 57 ರನ್‌ಗಳು ಹರಿದುಬಂದವು. ಇವರಿಬ್ಬರು ಮೊದಲ ವಿಕೆಟ್‌ಗೆ 10.5 ಓವರುಗಳಲ್ಲಿ 107 ರನ್‌ಗಳನ್ನು ಸೇರಿಸಿದರು. ವೇಗದ ಬೌಲರ್ ಅರುಂಧತಿ ಈ ಜೊತೆಯಾಟ ಮುರಿದರು. ವ್ಯಾಟ್‌ಹಾಜ್ ಅವರು ಕವರ್ಸ್ ಮೇಲೆ ಚೆಂಡನ್ನು ಎತ್ತಲುಹೋಗಿ ಜೆಮಿಮಾ ಅವರಿಗೆ ಕ್ಯಾಚಿತ್ತರು. ಆದರೆ ಮಂದಾನ ಆಕ್ರಮಣದ ಆಟ ಮುಂದುವರಿಸಿದ್ದರಿಂದ ಗೆಲುವು ಸಲೀಸಾಯಿತು.
ಇದಕ್ಕೆ ಮೊದಲು, ಅನುಭವಿ ವೇಗಿ ರೇಣುಕಾ ಸಿಂಗ್ (23ಕ್ಕೆ4) ಮತ್ತು ಲೆಗ್ ಸ್ಪಿನ್ನರ್ ಜಾರ್ಜಿಯಾ ವ್ಹೇರ್‌ಹ್ಯಾಮ್ (25ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್ ದಾಳಿಗೆ, ಕಳೆದ ಬಾರಿಯ ರನ್ನರ್ ಅಪ್ ಡೆಲ್ಲಿ ತಂಡ ಕುಸಿಯಿತು.
ಪವರ್‌ಪ್ಲೇ ಅವಧಿಯಲ್ಲಿ 1 ವಿಕೆಟ್‌ಗೆ 55 ರನ್ ಗಳಿಸಿ ಉತ್ತಮ ಆರಂಭ ಮಾಡಿದ್ದ ಡೆಲ್ಲಿ ತಂಡ ಏಳು ಮತ್ತು ಎಂಟನೇ ಓವರ್ ನಡುವೆ ಐದು ಎಸೆತಗಳಲ್ಲಿ ಜೆಮಿಮಾ ರಾಡ್ರಿಗಸ್ ಮತ್ತು ನಾಯಕಿ ಮೆಗ್ ಲ್ಯಾನಿಂಗ್ ಅವರ ವಿಕೆಟ್ ಕಳೆದುಕೊಂಡಿತು. ನಂತರ ಆರ್‌ಸಿಬಿ ಬೌಲರ್‌ಗಳು ಎದುರಾಳಿಗಳ ಮೇಲೆ ನಿರಂತರವಾಗಿ ಒತ್ತಡ ಹೇರಿದರು.
22 ಎಸೆತಗಳಲ್ಲಿ 34 (4x4, 6x2) ರನ್ ಬಾರಿಸಿದ್ದ ಜೆಮಿಮಾ ರಾಡ್ರಿಗಸ್ ಅವರು ವ್ಹೇರ್‌ಹ್ಯಾಮ್ ಬೌಲಿಂಗ್‌ನಲ್ಲಿ ರಿವರ್ಸ್ ಸ್ವೀಪ್‌ಗೆ ಯತ್ನಿಸಿ ರಿಚಾ ಘೋಷ್ ಅವರಿಂದ ಸ್ಟಂಪಿಂಗ್‌ಗೆ ಒಳಗಾದರು. ಡೆಲ್ಲಿ ಕೊನೆಯ ಐದು ವಿಕೆಟ್‌ಗಳನ್ನು ಆರು ಓವರುಗಳ ಅಂತರದಲ್ಲಿ ಕಳೆದುಕೊಂಡು ಮೂರು ಎಸೆತಗಳಿರುವಂತೆ ಆಲೌಟಾಯಿತು.
ಸಂಕ್ಷಿಪ್ತ ಸ್ಕೋರು: ಡೆಲ್ಲಿ ಕ್ಯಾಪಿಟಲ್ಸ್: 19.3 ಓವರುಗಳಲ್ಲಿ 141 (ಜೆಮಿಮಾ ರಾಡ್ರಿಗಸ್ 34, ಸಾರಾ ಬ್ರೈಸ್ 23; ರೇಣುಕಾ ಸಿಂಗ್ 23ಕ್ಕೆ3, ಕಿಮ್ ಗಾರ್ತ್ 19ಕ್ಕೆ2, ಏಕ್ತಾ ಬಿಷ್ಟ್ 35ಕ್ಕೆ2, ಜಾರ್ಜಿಯಾ ವ್ಹೇರ್‌ಹ್ಯಾಮ್ 25ಕ್ಕೆ3); ರಾಯಲ್ ಚಾಲೆಂಜರ್ಸ್ ಬೆಂಗಳೂರು: 16.2 ಓವರುಗಳಲ್ಲಿ 2 ವಿಕೆಟ್‌ಗೆ 146 (ಸ್ಮೃತಿ ಮಂದಾನ 81, ಡ್ಯಾನಿ ವ್ಯಾಟ್ ಹಾಜ್ 42).
ಜಯದ ಓಟ ಮುಂದುವರಿಸುವ ಛಲ
ಹಾಲಿ ಚಾಂಪಿಯನ್ ಆರ್‌ಸಿಬಿ, ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಎದುರು ದಾಖಲೆ ಮೊತ್ತ ಬೆನ್ನತ್ತಿ ಗೆದ್ದಿದೆ. ಡೆಲ್ಲಿ ಸಹ, ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ಕೈಯಿಂದ ಕೊನೇ ಎಸೆತದಲ್ಲಿ ಜಯ ಕಸಿದುಕೊಂಡಿದೆ.
ಹೀಗಾಗಿ, ಜಯದ ಓಟ ಮುಂದುವರಿಸುವ ತಂಡ ಯಾವುದು, ಯಾರಿಗೆ ಮೊದಲ ಸೋಲು ಎದುರಾಗಲಿದೆ ಎಂಬ ಕುತೂಹಲ ಗರಿಗೆದರಿದೆ.
ಒಂದು ಬದಲಾವಣೆಯೊಂದಿಗೆ ಆಡುತ್ತಿರುವ ಆರ್‌ಸಿಬಿ, ಪ್ರೇಮಾ ರಾವತ್ ಬದಲು ಏಕ್ತಾ ಬಿಸ್ತ್ ಅವರಿಗೆ ಅವಕಾಶ ನೀಡಿದೆ.
ಡೆಲ್ಲಿ ಬಳಗದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ಕಳೆದ ಪಂದ್ಯದ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಪಡೆದಿದ್ದ ನಿಕಿ ಪ್ರಸಾದ್ ಹಾಗೂ ಎಲಿಸ್ ಕ್ಯಾಪ್ಸಿ ಹೊರಗುಳಿದಿದ್ದಾರೆ. ಅವರ ಬದಲು, ಅನುಭವಿಗಳಾದ ಜೆಸ್ ಜಾನ್ಸನ್ ಮತ್ತು ಮರಿಜನ್ನೆ ಕೇಪ್ ಕಣದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.