ADVERTISEMENT

WPL: ರಿಚಾ ಘೋಷ್ ಅಬ್ಬರ; ಗುಜರಾತ್ ವಿರುದ್ಧ ಆರ್‌ಸಿಬಿಗೆ 6 ವಿಕೆಟ್‌ಗಳ ಭರ್ಜರಿ ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಫೆಬ್ರುವರಿ 2025, 18:12 IST
Last Updated 14 ಫೆಬ್ರುವರಿ 2025, 18:12 IST
   

ವಡೋದರ: ಇಲ್ಲಿ ನಡೆದ ಮಹಿಳೆಯರ ಪ್ರೀಮಿಯರ್‌ ಲೀಗ್‌–2025ರ ಗುಜರಾತ್ ಜೈಂಟ್ ವಿರು ದ್ಧದ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.ಈ ಮೂಲಕ 3ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ.

ಗುಜರಾತ್ ನೀಡಿದ್ದ 202 ರನ್ ಗುರಿ ಬೆನ್ನತ್ತಿದ ಆರ್‌ಸಿಬಿ 18.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 202 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.

ಆರ್‌ಸಿಬಿ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ರಿಚಾ ಘೋಷ್ 27 ಎಸೆತಗಳಲ್ಲಿ 64 ರನ್ ಸಿಡಿಸಿ ಅಬ್ಬರಿಸಿದರು. ಅಜೇಯರಾಗುಳಿದ ರಿಚಾ ಅವರ ಸ್ಫೋಟಕ ಆಟದಲ್ಲಿ 7 ಬೌಂಡರಿ ಮತ್ತು 4 ಅಮೋಘ ಸಿಕ್ಸರ್‌ಗಳಿದ್ದವು.

ADVERTISEMENT

ರಿಚಾಗೆ ಉತ್ತಮ ಸಾಥ್ ನೀಡಿದ ಕನ್ನಿಕಾ 13 ಎಸೆತಗಳಲ್ಲಿ 30 ರನ್ ಸಿಡಿಸಿ ಅಜೇಯರಾಗುಳಿದರು.

ಇದಕ್ಕೂ ಮುನ್ನ, 202 ರನ್ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಆರ್‌ಸಿಬಿಗೆ ಸ್ಮೃತಿ ಮಂದಾನ(9), ಡನ್ನಿ ವ್ಯಾಟ್ ಹಾಡ್ಜ್(4) ಬಹುಬೇಗ ನಿರ್ಗಮಿಸಿದ್ದು ಆಘಾತ ನೀಡಿತ್ತು. ಈ ಸಂದರ್ಭ ರಾಘವಿ ಜೊತೆಗೆ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿದ ಎಲ್ಲಿಸ್ ಪೆರ್ರಿ 34 ಎಸೆತಗಳಲ್ಲಿ 57 ರನ್ ಸಿಡಿಸಿ ತಂಡವನ್ನು ಆಘಾತದಿಂದ ಪಾರು ಮಾಡಿದ್ದರು.

ಬಳಿಕ, ಆರ್‌ಸಿಬಿ ತಂಡವು 109 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತು. ಎಲಿಸ್ ಅವರು ಔಟಾಗುತ್ತಿದ್ದಂತೆ ತಂಡದಲ್ಲಿ ಸೋಲಿನ ಛಾಯೆ ಕಂಡಿತ್ತು. ಆದರೆ, ಅದನ್ನು ದೂರ ಮಾಡುವಲ್ಲಿ ರಿಚಾ ಯಶಸ್ವಿಯಾದರು. ಫ್ರಂಟ್‌ಫುಟ್ ಆಟದ ಮೂಲಕ ಬೌಲರ್‌ಗಳನ್ನು ಕಂಗೆಡಿಸಿದರು. ಅವರಿಗೆ ಕನಿಕಾ ಅಹುಜಾ (ಔಟಾಗದೇ 30;13ಎ) ಜೊತೆ ನೀಡಿದರು. ಇಬ್ಬರೂ ಸೇರಿ ತಂಡವನ್ನು ಗೆಲುವಿನ ದಡ ಸೇರಿಸಿದರು. ರಿಚಾ 237ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದರು. 

ಮೂನಿ, ಗಾರ್ಡನರ್ ಆಟ: ಇದಕ್ಕೂ ಮೊದಲು ಟಾಸ್‌ ಗೆದ್ದ ಆರ್‌ಸಿಬಿ ತಂಡವು ಗುಜರಾತ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಬೆತ್ ಮೂನಿ (56; 42ಎ, 4X8) ಮತ್ತು ನಾಯಕಿ ಆ್ಯಷ್ಲೆ ಗಾರ್ಡನರ್ (ಔಟಾಗದೇ 79; 37ಎ) ಅವರ ಆಟದ ಬಲದಿಂದ ಜೈಂಟ್ಸ್ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 201 ರನ್ ಗಳಿಸಿತು. 

ಆರಂಭಿಕ ಆಟಗಾರ್ತಿ ಲಾರಾ ವೊಲ್ವಾರ್ಟ್ (6 ರನ್) ಮತ್ತು ದಯಾಳನ್ ಹೇಮಲತಾ (4 ರನ್) ಬೇಗನೆ ನಿರ್ಗಮಿಸಿದರು. ಇನ್ನೊಂದೆಡೆ ಬೀಸಾಟವಾಡುತ್ತಿದ್ದ ಮೂನಿ ಅವರೊಂದಿಗೆ ಗಾರ್ಡನರ್ ಸೇರಿಕೊಂಡರು. ಇವರಿಬ್ಬರು ಮೂರನೇ ವಿಕೆಟ್ ಜೊತೆಯಾಟದಲ್ಲಿ 44 ರನ್‌ ಸೇರಿಸಿದರು. ಅರ್ಧಶತಕ ಗಳಿಸಿದ ಮೂನಿ ಅವರು 12ನೇ ಓವರ್‌ನಲ್ಲಿ ಪ್ರೇಮಾ ರಾವತ್ ಬೌಲಿಂಗ್‌ನಲ್ಲಿ ಸ್ಮೃತಿ ಮಂದಾನಗೆ ಕ್ಯಾಚಿತ್ತರು. 

ಇದಾದ ನಂತರ ಇನಿಂಗ್ಸ್‌ ಕಟ್ಟುವ ಸಂಪೂರ್ಣ ಹೊಣೆಯನ್ನು ನಾಯಕಿ ತಮ್ಮ ಮೇಲೆ ಹೊತ್ತುಕೊಂಡರು. 213.51ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಸೂರೆ ಮಾಡಿದರು. 8 ಸಿಕ್ಸರ್‌ಗಳು ಅವರ ಬ್ಯಾಟ್‌ನಿಂದ ಸಿಡಿದವು. 3 ಬೌಂಡರಿ ಬಾರಿಸಿದರು. ಗಾರ್ಡನರ್ ಮತ್ತು ದಿಯಾಂದ್ರ ಡಾಟಿನ್ (25; 13 ಎ) 4ನೇ ವಿಕೆಟ್ ಜೊತೆಯಾಟದಲ್ಲಿ 67 ರನ್ ಸೇರಿಸಿದರು.  ಆರ್‌ಸಿಬಿಯ ರೇಣುಕಾ ಸಿಂಗ್ ಎರಡು ವಿಕೆಟ್‌ ಪಡೆದರೆ, ಕನಿಕಾ ಅಹುಜಾ, ಜಾರ್ಜಿಯಾ ವ್ಹೇರ್‌ಹ್ಯಾಮ್ ಮತ್ತು ಪ್ರೇಮಾ ರಾವತ್ ತಲಾ ಒಂದು ವಿಕೆಟ್ ಗಳಿಸಿದರು. 

ಸಂಕ್ಷಿಪ್ತ ಸ್ಕೋರು: ಗುಜರಾತ್ ಜೈಂಟ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 201 (ಬೆತ್ ಮೂನಿ 56, ಆ್ಯಷ್ಲೆ ಗಾರ್ಡನರ್ ಔಟಾಗದೇ 79, ದಿಯಾಂದ್ರ ಡಾಟಿನ್ 25, ರೇಣುಕಾ ಸಿಂಗ್ 25ಕ್ಕೆ2). ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 18.3 ಓವರ್‌ಗಳಲ್ಲಿ 4 ವಿಕೆಟ್‌ಗೆ 202 (ಎಲಿಸ್‌ ಪೆರಿ 57, ರಾಘ್ವಿ ಬಿಸ್ಟ್ 25, ರಿಚಾ ಘೋಷ್‌ ಔಟಾಗದೇ 64, ಕನಿಕಾ ಅಹುಜಾ ಔಟಾಗದೇ 30; ಆ್ಯಷ್ಲೆ ಗಾರ್ಡನರ್‌ 33ಕ್ಕೆ 2).
ಫಲಿತಾಂಶ: ರಾಯಲ್‌ ಚಾಲೆಂಜರ್ಸ್‌ ತಂಡಕ್ಕೆ 6 ವಿಕೆಟ್‌ಗಳ ಜಯ. ಪಂದ್ಯದ ಆಟಗಾರ್ತಿ: ರಿಚಾ ಘೋಷ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.